

ಚಿಕ್ಕಮಗಳೂರು: ಜಿಲ್ಲೆಯ ಸ್ಥಳೀಯ ಗುತ್ತಿಗೆದಾರರು ನಿರ್ವಹಿಸಬೇಕಾದ ಕಾಮಗಾರಿಗಳನ್ನು ಕ್ರೋಡೀಕರಿಸಿ ಆರ್‌ಸಿ ಮತ್ತು ಬಹುಕೋಟಿ ಟೆಂಡರ್‌ದಾರರಿಗೆ ನೀಡುತ್ತಿರುವುದನ್ನು ತಡೆಹಿಡಿಯಬೇಕು. ಜತೆಗೆ ಆ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕು ಎಂದು ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಹರೀಶ್ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೆ ನೀಡುವಂತೆ ಸರ್ಕಾರದ ಆದೇಶವಿದ್ದರೂ ಮೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಾಮಗಾರಿಗಳನ್ನು ಆರ್‌ಸಿ ಮತ್ತು ಬಹುಕೋಟಿ ಟೆಂಡರ್‌ದಾರರಿಗೆ ನೀಡುತ್ತಿರುವುದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ದೂರಿದರು.
ಮೆಸ್ಕಾಂ ವಿರುದ್ಧ ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ನಮಗೆ ನ್ಯಾಯ ದೊರೆಯದಿದ್ದರೆ ಚಿಕ್ಕಮಗಳೂರಿನಲ್ಲಿಯೂ ಪ್ರತಿಭಟನೆ ನಡೆಸಲಾಗುವುದು ಎಂದರು.
ಗಂಗಾಕಲ್ಯಾಣ, ಹೊಸ ವಿದ್ಯುತ್ ಸಂಪರ್ಕ ಮತ್ತು ಅಕ್ರಮ-ಸಕ್ರಮ, ಮುರಿದ ಕಂಬಗಳು, ಸಣ್ಣ ಕಾಮಗಾರಿಗಳನ್ನು ಕ್ರೋಡೀಕರಿಸಿ, ಬೃಹತ್ ಮೊತ್ತದ ಆರ್‌ಸಿ ಮತ್ತು ಟೆಂಡರ್ ಕರೆದಿರುವುದನ್ನು ರದ್ದುಪಡಿಸಬೇಕು. ಸರ್ಕಾರದ ಆದೇಶದಂತೆ 1 ಲಕ್ಷದಿಂದ 5 ಲಕ್ಷ ರೂ.ವರೆಗಿನ ಪೂರ್ಣ ಮಟ್ಟದ ಗುತ್ತಿಗೆಯನ್ನು ಜಾರಿ ಮಾಡಿ ಸ್ಥಳೀಯರಿಗೆ ಕಾಮಗಾರಿ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ವ್ಯಾಪ್ತಿಯಲ್ಲಿ ಕೃಷಿ ವಿದ್ಯುತ್ ಸಂಪರ್ಕಕಕ್ಕೆ ಹಣ ಪಾವತಿಸಿರುವ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಈ ಕಾರ್ಯಾದೇಶಕ್ಕೆ ಅನುದಾನದ ಕೊರತೆಯಿದೆ. ಜಿಲ್ಲೆಗೆ ಹೆಚ್ಚಿನ ಅನುದಾನ ಒದಗಿಸಿ ಕಡೂರು ವಿಭಾಗದ ಉಗ್ರಾಣಕ್ಕೆ ಪರಿವರ್ತಕ ಹಾಗೂ ಸಾಮಗ್ರಿಗಳನ್ನು ಕೂಡಲೇ ಪೂರೈಕೆ ಮಾಡಬೇಕು ಎಂದು ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷರಾದ ಯು.ನರೇಶ್, ಕೆ.ಬಿ.ಪ್ರಸನ್ನ, ಪ್ರಧಾನ ಕಾರ್ಯದರ್ಶಿ ಆರ್.ಎಂ.ಮರಿಯರಾಜ್, ಸಹ ಕಾರ್ಯದರ್ಶಿ ಎಚ್.ಇ.ಹರೀಶ್‌ಕುಮಾರ್, ಸಂಘಟನಾ ಕಾರ್ಯದರ್ಶಿ ಕೆ.ಎಸ್.ಶಾಂತಕುಮಾರ್, ಕೋಶಾಧ್ಯಕ್ಷ ಅಬ್ದುಲ್ ಆಲಿ ಇತರರಿದ್ದರು.