

ಮಂಡ್ಯ: ವಿದ್ಯಾಭ್ಯಾಸ ಮುಗಿಸಿದ ನಂತರ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸರ್ಕಾರಿ ಕೆಲಸ ಸಿಗುವುದು ಬಹಳ ಕಷ್ಟ. ದಿನಗಳು ಉರುಳುತ್ತಾ ಹೋದಂತೆ ಸ್ಪರ್ಧಾತ್ಮಕ ಎನ್ನುವುದು ಹೆಚ್ಚುತ್ತಲೇ ಇರುತ್ತದೆ. ಆದ್ದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಸಿಗುವ ಸೌಲಭ್ಯ ಬಳಸಿಕೊಂಡು ಸ್ವಯಂ ಉದ್ದಿಮೆ ಪ್ರಾರಂಭಿಸಿ ಎಂದು ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್(ಎಂಎಸ್‌ಐಎಲ್)ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಚ್.ಎಂ.ಶ್ರೀನಿವಾಸ್ ಸಲಹೆ ನೀಡಿದರು.
ನಗರದ ಖಾಸಗಿ ಹೋಟಲ್ ಸಭಾಂಗಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಎಂಎಸ್‌ಎಂಇ ಸೌಲಭ್ಯ ಕಚೇರಿ, ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ ಮತ್ತು ಕಾಸಿಯಾ ಸಹಯೋಗದಲ್ಲಿ ಎಂಎಸ್‌ಎಂಇ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗಗೊಳಿಸಲು ಆಯೋಜಿಸಿದ್ದ ಔಟ್ ರೀಚ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕದಲ್ಲಿ 15 ಲಕ್ಷಕ್ಕೂ ಹೆಚ್ಚು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿವೆ. ಇದರಲ್ಲಿ ಉತ್ಪಾದನೆ ಕ್ಷೇತ್ರ, ಸೇವಾ ಕ್ಷೇತ್ರ, ವ್ಯಾಪಾರ ಕ್ಷೇತ್ರಗಳಿವೆ. ಭಾರತ ಸರ್ಕಾರ ಮೊದಲು ವ್ಯಾಪಾರ ಕ್ಷೇತ್ರವನ್ನು ಸಣ್ಣ ಕೈಗಾರಿಕೆ ಕ್ಷೇತ್ರ ಎಂದು ಪರಿಗಣಿಸುತ್ತಿರಲಿಲ್ಲ. ಆದರೆ ಕಳೆದ 2 ವರ್ಷದಿಂದ ವ್ಯಾಪಾರ ಕ್ಷೇತ್ರ ಎಂಎಸ್‌ಎಂಇ ವಲಯಕ್ಕೆ ಸೇರ್ಪಡೆಗೊಂಡಿದೆ. ಕರ್ನಾಟಕದಲ್ಲಿ ಸುಮಾರು 15 ಲಕ್ಷ ಎಂಎಸ್‌ಎಂಇ ಗಳು 1 ಕೋಟಿ ಜನರಿಗೆ ಉದ್ಯೋಗ ಕಲ್ಪಿಸಿದೆ. ಇವುಗಳ ಬಲವರ್ಧನೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ಹೇಳಿದರು.
ಜನರಿಗೆ ಈ ಯೋಜನೆಯ ಬಗ್ಗೆ ಸಾಕಷ್ಟು ಅರಿವಿಲ್ಲ. ಯಾವ ಕಾಲಘಟ್ಟದಲ್ಲಿ ಯೋಜನೆ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲ. ನಿಗದಿತ ಅವಧಿಯೊಳಗೆ ಅದರ ಸೇವೆಯನ್ನು ಪಡೆದುಕೊಳ್ಳಬೇಕು. ಅದನ್ನು ಪಡೆದುಕೊಳ್ಳದಿದ್ದರೆ ಉದ್ದಿಮೆದಾರರಿಗೆ ನಷ್ಟವಾಗುತ್ತದೆ. ಔಟ್ ರೀಚ್ ಕಾರ್ಯಕ್ರಮದ ಉದ್ದೇಶ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಬಂದಂತಹ ಯೋಜನೆಗಳ ಬಗ್ಗೆ ಮಾಹಿತಿ ತಿಳಿಸುವ ಮತ್ತು ಯೋಜನೆಗಳ ಅವಧಿಯ ಬಗ್ಗೆ ಅರಿವು ಮೂಡಿಸುವುದು ಎಂದು ವಿವರಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದಿನೇಶ ಮಾತನಾಡಿ, ಉದ್ದಿಮೆದಾರರಿಗೆ ಮಾಹಿತಿ ನೀಡುವ ಕೆಲಸವನ್ನು ಕೈಗಾರಿಕಾ ಇಲಾಖೆ ಮಾಡುತ್ತಿದೆ. ಉದ್ದಿಮೆಗಳು ಸರ್ಕಾರ ನೀಡುವ ಸೌಲಭ್ಯಗಳಿಗೆ ನಿಗದಿಪಡಿಸಿರುವ ಅವಧಿಯಲ್ಲಿ ಅರ್ಜಿ ಸಲ್ಲಿಸಿ ಸದುಪಯೋಗ ಪಡಿಸಿಕೊಳ್ಳಬೇಕು. ಕೃಷಿಯಲ್ಲಿ ಮೊದಲು ಒಂದು ಎಕರೆಯಲ್ಲಿ 4 ರಿಂದ 5 ಜನ ಕೆಲಸ ನಿರ್ವಹಿಸುತ್ತಿದ್ದರು. ಇಂದು 4 ರಿಂದ 5 ಎಕರೆಗೆ ಒಂದು ಟ್ರಾೃಕ್ಟರ್ ಅಥವಾ ಇನ್ನಿತರೆ ಕೃಷಿ ಉಪಕರಣಗಳು ಕೆಲಸ ನಿರ್ವಹಿಸುತ್ತಿದೆ. ಮಂಡ್ಯ ಜಿಲ್ಲೆಯಲ್ಲಿರುವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರತಿ ವರ್ಷ ಅಂದಾಜು 3 ಸಾವಿರ ಜನರು ಪದವಿ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ತೊಡಗುತ್ತಾರೆ. ಇವರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಸೃಷ್ಠಿಯಾಗಬೇಕು. ಇಲ್ಲ ಸ್ವಯಂ ಉದ್ಯೋಗ ಕೈಗೊಳ್ಳಲು ಅವಕಾಶ ಕಲ್ಪಿಸಬೇಕು. ಇಲ್ಲವಾದಲ್ಲಿ ನಿರುದ್ಯೋಗಿಗಳಾಗುತ್ತಾರೆ. ಉದ್ದಿಮೆಗಳನ್ನು ಪ್ರಾರಂಭಿಸಿ ಸ್ವಯಂ ಉದ್ಯೋಗದಲ್ಲಿ ತೊಡಗಿಕೊಳ್ಳಲು ಎಂಎಸ್‌ಎಂಇ ಹಾಗೂ ಕೈಗಾರಿಕಾ ಇಲಾಖೆಯಲ್ಲಿ ಹಲವಾರು ಅವಕಾಶಗಳಿವೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸರ್ಕಾರಿ ಕೆಲಸ ಎನ್ನುವುದು ಪ್ರತಿಯೊಬ್ಬರಿಗೂ ಸಹ ಸಿಗುವುದಿಲ್ಲ. ಕೈಗಾರಿಕೆಗಳಲ್ಲಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಬೇಕು ಅಥವಾ ಸ್ವಯಂ ಉದ್ಯೋಗ ಮಾಡುವುದಕ್ಕೆ ಸರ್ಕಾರದಿಂದ ಸಾಲ ಸೌಲಭ್ಯ ಪಡೆಯಬೇಕು. ಇಡೀ ದೇಶದಲ್ಲಿ 6 ಕೋಟಿ ಎಂಎಸ್‌ಎಂಇ ಗಳು ಕೆಲಸ ನಿರ್ವಹಿಸುತ್ತಿವೆ. ಆ ಘಟಕಗಳನ್ನು ನಾವು ಬಲವರ್ಧನೆ ಮಾಡಬೇಕು. ಇದರಿಂದ ಉದ್ಯೋಗದ ಅವಕಾಶಗಳು ಕೂಡ ಹೆಚ್ಚು ಬರುತ್ತವೆ ಎಂದು ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಅಧ್ಯಕ್ಷ ಕೆ.ಪ್ರಭಾಕರ್ ಮಾತನಾಡಿ, ಮಂಡ್ಯ ಜನತೆಗೆ ಉದ್ಯೋಗ ಆಧಾರದ ಮೇಲೆ ಯಾವ ಯಾವ ಕಾರ್ಯಕ್ರಮಗಳು ಇವೇ ಎಂದು ಸರಿಯಾಗಿ ತಿಳಿದಿಲ್ಲ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದಿಂದ ಹಲವಾರು ಯೋಜನೆಗಳಿವೆ. ಅದನ್ನು ತಿಳಿಸಿಕೊಡುವುದಕ್ಕೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ ಕೆಲವು ವರ್ಷಗಳಿಂದ ಮಂಡ್ಯದಲ್ಲಿ ಕಾರ್ಖಾನೆಗಳಿಗೆ ಹೆಚ್ಚು ಉತ್ತೇಜನ ನೀಡುತ್ತಿಲ್ಲ ಎಂಬ ಆಪಾದನೆ ಇದೆ. ಅದನ್ನು ಹೋಗಲಾಡಿಸಿ ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ನೀಡಬೇಕೆಂದು ಉದ್ಯೋಗ ಮೇಳವನ್ನು ಸಹ ಆಯೋಜಿಸಿದ್ದೇವೆ. ಜಿಲ್ಲೆಯಲ್ಲಿ ಎಲ್ಲ ಕಾರ್ಖಾನೆಗಳನ್ನು ಪ್ರಾರಂಭಿಸಲು ಸಾಧ್ಯವಿಲ್ಲ. ಮಂಡ್ಯದಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ಇರುವುದರಿಂದ ಅದಕ್ಕೆ ಸಂಬಂಧಿಸಿದ ಕಾರ್ಖಾನೆಗಳಿಗೆ ಉತ್ತೇಜನೆ ನೀಡಬೇಕಾಗುತ್ತದೆ ಎಂದರು.
ಕಾಸಿಯಾ ಸಂಸ್ಥೆಯ ಅಧ್ಯಕ್ಷ ಎಂ.ಜಿ.ರಾಜಗೋಪಾಲ್ ಮಾತನಾಡಿ, ಹೆಚ್ಚು ಜನರನ್ನು ಉದ್ದಿಮೆದಾರರಾಗಿ ಮಾಡಲು ಎಂಎಸ್‌ಎಂಇ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಲು ಔಟ್ ರೀಟ್ ಕಾರ್ಯಕ್ರಮವನ್ನು 20 ಜಿಲ್ಲೆಗಳಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ ಎಂದರು.
ಸಭೆಯಲ್ಲಿ ಮೈಸೂರು ರಫ್ತು ಸೌಲಭ್ಯ ಕೇಂದ್ರದ ಉಪನಿರ್ದೇಶಕಿ ಎಲ್.ಮೇಘಲಾ, ಕಾಸಿಯಾ ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್.ಸಾಗರ್, ನಗರದ ಜಂಟಿ ಕಾರ್ಯದರ್ಶಿ ಜೆ.ಎಸ್.ಬಾಬು, ಗ್ರಾಮೀಣ ಜಂಟಿ ಕಾರ್ಯದರ್ಶಿ ಎನ್.ಸತೀಶ್, ಖಜಾಂಚಿ ಎಚ್.ಮಂಜುನಾಥ್ ಇತರರಿದ್ದರು.