

ಬೆಂಗಳೂರು:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳಾದರೂ, ಅಭಿವೃದ್ಧಿ ಕೆಲಸ ಬಗ್ಗೆ ಚಿಂತನೆ ನಡೆಸಿಲ್ಲ. ಬದಲಿಗೆ ದೆಹಲಿಯಲ್ಲಿ ಸಭೆ ನಡೆಸಿ ಸೂಟ್‌ಕೇಸ್ ತುಂಬಿಸುವ ಟಾರ್ಗೆಟ್ ನೀಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಅನೇಕ ಜಿಲ್ಲೆಗಳಲ್ಲಿ ಅತಿವೃಷ್ಟಿಯಾಗಿದೆ. ಅಲ್ಲಿ ನಿಗಾ ವಹಿಸದೆ, ದೆಹಲಿಯಲ್ಲಿ ಇಡೀ ಸಂಪುಟವೇ ಸಭೆ ಮಾಡುತ್ತಿರುವುದು ನಾಚಿಕೆಗೇಡು ಎಂದರು.
ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸೀಟು ಪಡೆಯಬೇಕೆಂದು ಚರ್ಚಿಸುವ ಸಮಯ ಇದಲ್ಲ. ಅಭಿವೃದ್ಧಿಗೆ ಹಣ ಕೇಳಬೇಡಿ ಎಂದು ರ‌್ಮಾನು ಹೊರಡಿಸಿರುವುದು ಸರಿಯಲ್ಲ ಎಂದರು.
33 ಜನ ಶಾಸಕರು ಅಭಿವೃದ್ಧಿಗೆ ಹಣ ಕೋರಿ ಪತ್ರ ಬರೆದಿದ್ದರು. ಅವರೆಲ್ಲರಿಗೂ ಸಭೆ ನಿರಾಶೆ ತಂದಿಟ್ಟಿದೆ. ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲಾ ಅವರು ಕರ್ನಾಟಕದ ಎಲ್ಲ ಸಚಿವರನ್ನು ಕರೆದು ಪ್ರತಿಯೊಬ್ಬ ಸಚಿವರಿಗೆ ಟಾರ್ಗೆಟ್ ಕೊಡುತ್ತಿದ್ದಾರೆ ಎಂದರು.
ಅನೇಕ ಜಿಲ್ಲೆಗಳಲ್ಲಿ ಮಳೆ, ಪ್ರವಾಹದಿಂದಾಗಿ ಬಿತ್ತನೆ ಮಾಡಿಲ್ಲ. ಒಂದೆಡೆ ಹಸಿರು ಬರ, ಇನ್ನೊಂದೆಡೆ ಒಣ ಬರ ರಾಜ್ಯವನ್ನು ಕಾಡುತ್ತಿದೆ. ಇದರ ಜೊತೆಗೆ ಕಾಂಗ್ರೆಸ್ ಸರಕಾರದ ಬೆಲೆ ಏರಿಕೆ ಬರೆಯೂ ಜನರ ಮೇಲೆ ಬಿದ್ದಿದೆ ಎಂದು ವಿಶ್ಲೇಷಿಸಿದರು.
ಸಂಕಷ್ಟ ಸ್ಥಿತಿಯಲ್ಲಿಯೂ ಹಾಲು, ಮೊಸರು, ಮಜ್ಜಿಗೆ, ತರಕಾರಿ, ವಿದ್ಯುತ್, ಕಟ್ಟಡ ಶುಲ್ಕ, ಬಸ್ ಟಿಕೆಟ್, ಮದ್ಯದ ದರ ಏರಿಸಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ಸೂಟ್‌ಕೇಸ್ ತುಂಬಿಸಿಕೊಂಡು ದೆಹಲಿಗೆ ಕೊಡುವುದು ಮುಖ್ಯ ಗುರಿಯಾಗಿದೆ ಎಂದರು.
ಸಿಎಂ ಮತ್ತು ಡಿಸಿಎಂ ಅವರು, ನಾವೆಲ್ಲ ದಲಿತರ ಪರ, ಹಿಂದುಳಿದ ವರ್ಗಗಳ ಪರ ಎಂದು ಹೇಳಿದ್ದರು. ಆದರೆ, 11 ಸಾವಿರ ಕೋಟಿಯನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಗ್ಯಾರಂಟಿ ಸ್ಕೀಮಿಗೆ ಕೊಡುವ ಮೂಲಕ ದಲಿತರ ವಿರೋಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ ಹೆಚ್ಚಾಗಿದೆ. ಸರ್ಕಾರವೇ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ ಎಂದರು.
ಮೋದಿ ಟೀಕೆಗೆ ಬಿಜೆಪಿ ಖಂಡನೆ
ವಿಶ್ವ ನಾಯಕರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ನಾಯಕ ಉಗ್ರಪ್ಪ ಮನಸೋ ಇಚ್ಛೆ ಟೀಕಿಸಿರುವುದು ಖಂಡನೀಯ ಎಂದು ಬಿಜೆಪಿ ವಕ್ತಾರ ಎಂ.ಜಿ.ಮಹೇಶ್ ತಿಳಿಸಿದ್ದಾರೆ.
ದೇಶದ ಜನರಿಂದ ಕಾಂಗ್ರೆಸ್ ತಿರಸ್ಕೃತ ಆಗಲಿದೆ. ಮೋದಿ ಟೀಕಿಸಿದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎನ್ನುವ ಭ್ರಮೆ ಬೇಡ. ಲೋಕಸಭೆ ಚುನಾವಣೆಯಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.