ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಹತ್ಯೆಗೆ ಆಕ್ರೋಶ

Published on

ಮೈಸೂರು: ಕೋಲ್ಕತ ವೈದ್ಯವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಸೇರಿದಂತೆ ದೇಶದ ವಿವಿಧೆಡೆ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಮೈಸೂರು ಸಶಸ್ತ್ರ ಪಡೆಗಳ ಮಾಜಿ ಸೈನಿಕರ ಸಂಘದಿಂದ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಕೋಲ್ಕತದಲ್ಲಿ ವೈದ್ಯ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಜಾರ್ಖಂಡ್‌ನಲ್ಲಿ ಸರ್ಕಾರಿ ಬಸ್‌ನಲ್ಲಿ ನಿರ್ವಾಹಕ ಸೇರಿದಂತೆ 4 ಜನ ಸೇರಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಆಟೋ ಚಾಲಕ ಮಹಿಳಾ ಉದ್ಯೋಗಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ ಉತ್ತರ ಭಾರತದಲ್ಲಿ ತಪ್ಪೇ ಮಾಡದ ಸೈನಿಕನನ್ನು ಪೊಲೀಸರು ಹೊಡೆದು ದೌರ್ಜನ್ಯ ಎಸಗಿರುವುದು ಖಂಡನೀಯ ಎಂದು ಕಿಡಿಕಾರಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ಅತ್ಯಾಚಾರಿಗಳು ಹಾಗೂ ಕೊಲೆಗಡುಕರಿಗೆ ಕಾನೂನು ರೀತಿಯ ಶಿಕ್ಷೆ ವಿಧಿಸಬೇಕು. ಮಹಿಳಾ ಉದ್ಯೋಗಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು. ಭವಿಷ್ಯದಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಕಠಿಣ ಕಾನೂನು ರೂಪಿಸಬೇಕೆಂದು ಒತ್ತಾಯಿಸಿದರು.
ಮೈಸೂರು ಸಶಸ್ತ್ರ ಪಡೆಗಳ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಹವಾಲ್ದಾರ್ ಪಿ.ಕೆ.ಬಿದ್ದಪ್ಪ, ಪದಾಧಿಕಾರಿಗಳಾದ ಹವಲ್ದಾರ್ ಗೋಪಾಲ್, ಹವಲ್ದಾರ್ ಕೆ.ಎಸ್.ಸುರೇಶ್, ಹವಲ್ದಾರ್ ನರಸೇಗೌಡ, ಅಖಿಲ ಕರ್ನಾಟಕ ಮಾಜಿ ಸೈನಿಕರ ಘಟಕ-1ರ ಅಧ್ಯಕ್ಷ ಹವಾಲ್ದಾರ್ ಕೆ.ಪಿ.ದಿವಾಕರ್, ಹವಾಲ್ದಾರ್ ನಂಜುಂಡಸ್ವಾಮಿ, ಮಿಲಿಟರಿ ವೆಟರನ್ಸ್ ವೆಲ್‌ಫೇರ್ ಅಸೋಸಿಯೇಷನ್‌ನ ಬ್ರಿಗೇಡಿಯರ್ ಅಡಪ್ಪ, ಸ್ವಾರ್ಡನ್ ಲೀಡರ್ ಶೆಣೈ.ಕೆ.ಎಂ.ಸುಬೇದಾರ್ ಮೇಜರ್ ಪಿ.ಶ್ರೀಧರ್, ಸಾರ್ಜೆಂಟ್ ಬಾಲಸುಬ್ರಮಣಿ, ಮೈಸೂರು ಪೂರ್ವ ಮಾಜಿ ಸೈನಿಕರ ಸಂಘದ ಕೆ.ಎ.ಅಯ್ಯಪ್ಪ, ಹವಾಲ್ದಾರ್ ಕೆ.ಎಸ್.ಅಚ್ಚಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net