ಅಧಿಕಾರಿಗಳ ಕಾರ್ಯವೈಖರಿಗೆ ಆಕ್ರೋಶ

MEETING
Published on

ಶಿರಹಟ್ಟಿ: ಆರು ತಿಂಗಳ ಬಳಿಕ ಬುಧವಾರ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯು ಕಂದಾಯ ನಿರೀಕ್ಷಕರು ಮತ್ತು ಇತರ ಪ್ರಮುಖ ಸಿಬ್ಬಂದ್ಗಿ ಗೈರುಹಾಜರಿಯಿಂದಾಗಿ ಮುಂದೂಡಲ್ಪಟ್ಟಿದೆ. ಸಭೆಯಲ್ಲಿ ಹಾಜರಿದ್ದ ಸದಸ್ಯರು, ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಪಪಂ ಆಡಳಿತದಲ್ಲಿನ ಗೊಂದಲಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಿಗದಿಯಂತೆ ನಡೆದ ಸಭೆಗೆ ಕಂದಾಯ ನಿರೀಕ್ಷಕ ಮಂಜು ಮುಳಗುಂದ ಮತ್ತು ಸಿಬ್ಬಂದಿ ಸಿದ್ದಪ್ಪ ಅಮರಾಪುರ ಗೈರು ಹಾಜರಾಗಿದ್ದರು. ಕಂದಾಯ ನಿರೀಕ್ಷಕರು ಯಾವುದೇ ರಜೆ ಮಾಹಿತಿ ನೀಡದೆ ಗೈರಾಗಿದ್ದಾರೆ ಎಂದು ಮುಖ್ಯಾಧಿಕಾರಿ ಸವಿತಾ ತಾಂಬ್ರೆ ತಿಳಿಸಿದರು. ಪ್ರಮುಖ ಅಧಿಕಾರಿಗಳ ಗೈರುಹಾಜರಿ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ ಕಾರಣ, ಸಭೆಯನ್ನು ಮುಂದೂಡಲು ನಿರ್ಧರಿಸಲಾಯಿತು.

ಲೇಔಟ್‌ಗಳಲ್ಲಿ ಅಕ್ರಮ: ನಾಮನಿರ್ದೇಶಿತ ಸದಸ್ಯರಾದ ಸೋಮನಗೌಡ ಮರಿಗೌಡ ಮತ್ತು ಅಲ್ಲಾಭಕ್ಷ ನಗಾರಿ ಮಾತನಾಡಿ, ಪಟ್ಟಣದ ಹೊರವಲಯದಲ್ಲಿರುವ 16 ಲೇಔಟ್‌ಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸದೆ ಮತ್ತು ಆಡಳಿತ ಮಂಡಳಿಯ ಅನುಮೋದನೆ ಇಲ್ಲದೆಯೇ ಕಾನೂನುಬಾಹಿರವಾಗಿ ಉತಾರಗಳನ್ನು ನೀಡಲಾಗಿದೆ ಎಂದು ದೂರಿದರು. ಅಲ್ಲದೆ, ಈ ಹಿಂದೆ ನಿರ್ಣಯ ಕೈಗೊಂಡಿದ್ದರೂ, ಹೊಸದಾಗಿ ನಿರ್ಮಾಣವಾಗುತ್ತಿರುವ ಬಡಾವಣೆಗಳಲ್ಲಿ ಉತಾರ ನೀಡಲಾಗಿದೆ ಎಂದು ಸದಸ್ಯರು ಆರೋಪಿಸಿದರು. ಈ ಕುರಿತು ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ, ತಮ್ಮ ಗಮನಕ್ಕೆ ತಾರದೆ ಈ ರೀತಿ ಹಣದ ಸುಲಿಗೆ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿಂದಿನ ಮುಖ್ಯಾಧಿಕಾರಿಗಳು ಇಂಜಿನಿಯರ್ ಲಾಗಿನ್ ಬಳಸಿ ಉತಾರಗಳನ್ನು ವಿತರಿಸಿದ್ದಾರೆ ಮತ್ತು ಈಗಿನ ಇಂಜಿನಿಯರ್ ಸಹ ಮಾಹಿತಿ ಇಲ್ಲ ಎಂದು ಜಾರಿಕೊಳ್ಳುತ್ತಿದ್ದಾರೆ ಎಂದು ಸದಸ್ಯರು ಆರೋಪಿಸಿದರು. ಪ್ರತಿಕ್ರಿಯಿಸಿದ ಇಂಜಿನಿಯರ್ ಎಸ್.ಪಿ. ಕಾಟೇವಾಲೆ, ಲೇಔಟ್‌ಗಳ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ ಎಂದು ಹೇಳಿದರು. ಇದರಿಂದ ಕೆರಳಿದ ಸದಸ್ಯರು, ನೀವು ಇರುವುದಕ್ಕೂ ಇಲ್ಲದಿರುವುದಕ್ಕೂ ಏನು ವ್ಯತ್ಯಾಸ ಎಂದು ತರಾಟೆಗೆ ತೆಗೆದುಕೊಂಡರು.

ಬೋಗಸ್ ಬಿಲ್: ವಾರ್ಡ್ ನಂ. 11 ಮತ್ತು 18ರಲ್ಲಿ ರಸ್ತೆಗಳ ಹೊಂಡ ಮುಚ್ಚಲು ಮೋರಂ ಹಾಕದೇ ನಕಲಿ ಬಿಲ್ ಸೃಷ್ಟಿಸಿ ಹಣ ಖರ್ಚು ಮಾಡಲಾಗಿದೆ ಎಂದು ಆರೋಪಿಸಲಾಯಿತು. ಜೊತೆಗೆ, ವಾರ್ಡ್ ನಂ. 1ರಲ್ಲಿ ಬೋರ್‌ವೆಲ್‌ಗೆ ಮೋಟರ್ ಖರೀದಿಸಲು 50 ಸಾವಿರ ರೂ. ಖರ್ಚು ಮಾಡಲಾಗಿದೆ ಎಂದು ದಾಖಲೆ ತೋರಿಸಿದ್ದರೂ, ಮೋಟರ್ ಸ್ಥಳದಲ್ಲಿಲ್ಲ ಎಂದು ಸದಸ್ಯೆ ಚನ್ನಬಸವ್ವ ಕಲಾದಗಿ ಹೇಳಿದರು. ಇದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಾಧಿಕಾರಿ ಸ್ಪಷ್ಟ್ಟನೆ: ಅಧಿಕಾರಿಗಳ ಬೇಜವಾಬ್ದಾರಿಯ ಕುರಿತು ತೀವ್ರ ಒತ್ತಡಕ್ಕೆ ಒಳಗಾದ ಪಪಂ ಮುಖ್ಯಾಧಿಕಾರಿ ಸವಿತಾ ತಾಂಬ್ರೆ, ತಾನು ಮೂರು ತಿಂಗಳ ಹಿಂದಷ್ಟೇ ಅಧಿಕಾರ ವಹಿಸಿಕೊಂಡಿದ್ದು, ಹಿಂದಿನ ಘಟನೆಗಳ ಬಗ್ಗೆ ತಿಳಿದಿಲ್ಲ ಎಂದು ಹೇಳಿದರು. ಗೈರುಹಾಜರಾಗಿರುವ ಕಂದಾಯ ನಿರೀಕ್ಷಕರು ಹಾಗೂ ಸಿಬ್ಬಂದಿ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಉಪಾಧ್ಯಕ್ಷೆ ನೀಲವ್ವ ಹುಬ್ಬಳ್ಳಿ, ಸಂದೀಪ ಕಪ್ಪತ್ತನವರ, ಪರಮೇಶ ಪರಬ, ಫಕೀರೇಶ ರಟ್ಟಿಹಳ್ಳಿ, ಹಸರತ ಢಾಲಾಯತ, ಇಸಾಕ್ ಆದ್ರಳ್ಳಿ, ರಾಜು ಕಪ್ಪತ್ತನವರ, ಅನಿತಾ ಬಾರಬರ್ ಯಶೋದ ಡೊಂಕಬಳ್ಳಿ, ಚನ್ನಬಸವ್ವ ಕಲಾದಗಿ, ನಾಮನಿರ್ದೇಶಿತ ಸದಸ್ಯ ಸೋಮನಗೌಡ ಮರಿಗೌಡ,ಅಲ್ಲಾಭಕ್ಷ ನಗಾರಿ ಎಂಜಿನಿಯರ್ ಎಸ್.ಪಿ. ಕಾಟೇವಾಲೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net