ಜನಿವಾರ ತೆಗೆಯಿಸಿದ್ದಕ್ಕೆ ಆಕ್ರೋಶ; ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಿಡಿ

JANAKROSHA YASHASWI PRESS MEET
ವಿಜಯಪುರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸಂಸದ ರಮೇಶ ಜಿಗಜಿಣಗಿ ಸುದ್ದಿಗೋಷ್ಠಿ ನಡೆಸಿದರು. ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಅರುಣ ಶಹಾಪುರ ಮತ್ತಿತರರಿದ್ದಾರೆ.
Published on

ವಿಜಯಪುರ: ಸಿಇಟಿ ಪರೀಕ್ಷೆ ಸಂದರ್ಭ ಜನಿವಾರ ತೆಗೆಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಆಕ್ರೋಶ ಹೊರಹಾಕಿದ ಸಂಸದ ರಮೇಶ ಜಿಗಜಿಣಗಿ, ಕಾಂಗ್ರೆಸ್ ಹಿಂದುತ್ವ ವಿರೋಧಿ ಎಂದು ಟೀಕಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೀಕ್ಷೆ ವೇಳೆ ಯಾರಾದರೂ ಜನಿವಾರ ತೆಗೆಯಿಸುತ್ತಾರಾ? ಎಂಥ ಮೂರ್ಖತನ ಇದು ಎಂದು ಹರಿಹಾಯ್ದರು.

ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಅವರು, ಸಿಇಟಿ ಪರೀಕ್ಷೆ ಸಂದರ್ಭ ಜನಿವಾರ ತೆಗೆಯಿಸಿದ ಕ್ರಮ ಖಂಡನೀಯ. ನಾಚಿಕೆಗೇಡಿನ ಸಂಗತಿ. ಅಧಿಕಾರಿಗಳನ್ನು ಅಮಾನತ್ತು ಮಾಡಿದ ಮಾತ್ರಕ್ಕೆ ಸಮಸ್ಯೆಗೆ ಪರಿಹಾರ ಸಿಗಲ್ಲ. ದುಷ್ಟ ಅಧಿಕಾರಿಗಳು ಹಿಂದು ವಿರೋಧಿ ಕೃತ್ಯ ಮಾಡಿದರೆ ಪ್ರಮೋಷನ್ ಸಿಗಲಿದೆ ಎಂಬ ಆಶಾಭಾವದಿಂದ ಇಂಥ ಕೃತ್ಯ ಎಸಗುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿರುವ ಹಿಂದು ನಾಯಕರು ಕೂಡಲೇ ಹೊರಬರಬೇಕು ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, ಜನಿವಾರ ತೆಗೆಯಿಸಿದ್ದರ ಉದ್ದೇಶದ ಹಿಂದೆ ಹಿಜಾಬ್ ವಿವಾದ ಮುನ್ನೆಲೆಗೆ ತರುವುದಾಗಿರಬಹುದು. ಹಿಜಾಬ್ ಕಾಲೇಜ್‌ಗಳಲ್ಲಿ ಸಮವಸ್ತ್ರಕ್ಕೆ ವಿರುದ್ಧವಾಗಿ ಧರಿಸಿದ್ದು ಎಂಬ ಕಾರಣಕ್ಕೆ ತೆಗೆಯಿಸಲಾಗಿತ್ತು. ಆಗಲೂ ಕಾಂಗ್ರೆಸ್ ಸಮರ್ಥನೆ ಮಾಡಿಕೊಂಡಿತ್ತು. ಇದೀಗ ಅದೇ ಕಾಂಗ್ರೆಸ್ ಜನಿವಾರ ತೆಗೆಯಿಸಿದ್ದು ಯಾಕೆ? ಕಾಂಗ್ರೆಸ್‌ನ ಈ ನೀತಿ ಬಗ್ಗೆ ವಿರೋಧ ಇದೆ. ಮುಂದೆ ಇವರು ಉಡುದಾರಕ್ಕೂ ಕೈಹಾಕಬಹುದು. ಉಡುದಾರವಾಗಲಿ, ಜನಿವಾರವಾಗಲಿ ಹಿಂದುತ್ವದ ಸಂಸ್ಕೃತಿಯ ಪ್ರತೀಕ ಎಂದರು.

ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ವಿಪ ಮಾಜಿ ಸದಸ್ಯ ಅರುಣ ಶಹಾಪುರ, ವಿಜುಗೌಡ ಪಾಟೀಲ, ಕಾಸುಗೌಡ ಪಾಟೀಲ, ಸಂಜೀವ ಐಹೊಳೆ, ಚಂದ್ರಶೇಖರ ಕವಟಗಿ, ಸಾಬು ಮಾಶ್ಯಾಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net