ತೆಲಂಗಾಣಕ್ಕೆ ನೀರು ಹರಿಸಿದ್ದಕ್ಕೆ ಆಕ್ರೋಶ

Siddheshwar organization expresses anger against Mushrif
Shivasharane Hemaraddi Mallamma Jayanti
Published on

ವಿಜಯಪುರ: ವಿಜಯಪುರ ನಗರದ ಜನತೆಯ ಕುಡಿಯುವ ನೀರಿನ ಕೊರತೆಯನ್ನು ಲೆಕ್ಕಿಸದೇ ರಾಜ್ಯ ಸರ್ಕಾರ ಜಲ ಸಂಪನ್ಮೂಲ ಇಲಾಖೆಯು ಮಂಗಳವಾರ ರಾತ್ರಿ ಆಲಮಟ್ಟಿ ಜಲಾಶಯದಿಂದ 1.27 ಟಿಎಂಸಿ ನೀರನ್ನು ತೆಲಂಗಾಣಕ್ಕೆ ಹರಿಸಿ ರಾಜ್ಯದ ಜನತೆಗೆ ಮಂಕು ಬೂದಿ ಎರಚಿದ್ದಾರೆ ಎಂದು ನೀರು ಬೇಕು ಸಮಿತಿಯ ಪದಾಧಿಕಾರಿಗಳು ಆಕ್ರೋಶ ಹೊರಹಾಕಿದ್ದಾರೆ.

ತೆಲಂಗಾಣ ಸರ್ಕಾರವು 5 ಟಿಎಂಸಿ ನೀರನ್ನು ತಮ್ಮ ರಾಜ್ಯಕ್ಕೆ ಹರಿಸಬೇಕೆಂದು ಈ ಹಿಂದೆ ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆಗೆ ಪತ್ರ ಬರೆದಿತ್ತು. ಅದರ ಬೆನ್ನಲ್ಲೆ ನೀರು ಬೇಕು ಸಮಿತಿಯು ಕೂಡ ಅದನ್ನು ಖಂಡಿಸಿ ನಗರದ ಜನತೆಯ ಪರವಾಗಿ ರಾಜ್ಯ ಸರಕಾರಕ್ಕೆ ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿತ್ತು. ಆದರೂ ಜಲಾಶಯದಿಂದ ತೆಲಂಗಾಣ ರಾಜ್ಯಕ್ಕೆ ಹರಿಸಿದೆ ಎಂದು ಅವರು ದೂರಿದ್ದಾರೆ.

ಆಲಮಟ್ಟಿ ಜಲಾಶಯದ ನೀರಿನ ಲೆವೆಲ್​ 519 ಮೀಟರ್​ ಇದ್ದು 123 ಟಿಎಂಸಿ ನೀರು ಲಭ್ಯವಿದೆ. ಸದ್ಯ ಜಲಾಶಯದಲ್ಲಿ ನೀರಿನ ಲೆವೆಲ್​ 513.27 ಮೀಟರ್​ ಇದ್ದು, ಅದರಲ್ಲಿ ಈಗಾಗಲೇ, 13067 ಕ್ಯೂಸೆಕ್​ ನೀರನ್ನು ತೆಲಂಗಾಣ ರಾಜ್ಯಕ್ಕೆ ಹರಿಸಲಾಗಿದೆ. ನೀರಿನ ಲೆವೆಲ್​ 508 ಮೀಟರ್​ವರೆಗೆ ಶುದ್ಧವಾದ ನೀರನ್ನು ನಗರಕ್ಕೆ ಸರಬರಾಜು ಮಾಡಬಹುದು. ನೀರಿನ ಲೆವೆಲ್​ 505 ಮೀಟರ್​ಗೆ ಬಂದರೆ ವಿಜಯಪುರ ನಗರದ ಜಾಕ್​ವೆಲ್​ಗೆ ಕೊಳಚೆ ನೀರು ಬರುವ ಸಂಭವವಿದ್ದು, 5 ಟಿಎಂಸಿ ನೀರನ್ನು ಹರಿಸಿದರೆೆ ಮುಂಬರುವ ದಿನಗಳಲ್ಲಿ ನಗರಕ್ಕೆ ನೀರು ಸರಬುರಾಜು ಮಾಡಲು ತೊಂದರೆಯಾಗಿ ನೀರಿನ ಹಾಹಾಕಾರ ಉಂಟಾಗುವದು ಖಚಿತ ಎಂದು ಅವರು ದೂರಿದ್ದಾರೆ.

ಹೀಗೆಯೇ ಮುಂದುವರಿದರೆ ಮುಂದಿನ ದಿನದಲ್ಲಿ ಕೊಯ್ನಾ ಜಲಾಶಯದಿಂದ ಮಹಾರಾಷ್ಟ್ರ ರಾಜ್ಯಕ್ಕೆ ಹಣ ಕೊಟ್ಟು ನೀರನ್ನು ಖರೀದಿಸುವ ಪರಿಸ್ಥಿತಿ ಬರಬಹುದು. 2017ರಲ್ಲಿ ಆದಂತಹ ಕುಡಿಯುವ ನೀರಿನ ಸಮಸ್ಯೆ ಮತ್ತೆ ಮರುಕಳಿಸಬಾರದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತು ತೆಲಂಗಾಣಕ್ಕೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಸಮಿತಿ ಅಧ್ಯಕ್ಷ ಸತೀಶ ಭಾವಿ, ಉಪಾಧ್ಯಕ್ಷ ಈರಣ್ಣ ಅಳ್ಳಗಿ, ಸದಸ್ಯರಾದ ಸಾಗರ ಮೊಗಲಿ, ಭಾವೇಶ ಪೋರವಾಲ, ಮಹೇಶ ಭಾವಿ ಮತ್ತಿತರರು ಸರ್ಕಾರದ ನಡೆಗೆ ತೀವ್ರ ವಿರೋಧ ವ್ಯಕ್ತ ಪಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net