ರಸ್ತೆಗೆ ಹಾಲು ಸುರಿದು ಆಕ್ರೋಶ

ಮೇಲುಕೋಟೆ ಹೋಬಳಿಯ ನರಹಳ್ಳಿ ಗ್ರಾಮಸ್ಥರು ಗ್ರಾಮದ ಡೇರಿಯಲ್ಲಿರುವ ಹಲವು ಅವ್ಯವಸ್ಥೆಗಳನ್ನು ಸರಿಪಡಿಸಲು ಒತ್ತಾಯಿಸಿ ಡೇರಿಗೆ ಬೀಗ ಪ್ರತಿಭಟನೆ ನಡೆಸಿದರು.
ಮೇಲುಕೋಟೆ ಹೋಬಳಿಯ ನರಹಳ್ಳಿ ಗ್ರಾಮಸ್ಥರು ಗ್ರಾಮದ ಡೇರಿಯಲ್ಲಿರುವ ಹಲವು ಅವ್ಯವಸ್ಥೆಗಳನ್ನು ಸರಿಪಡಿಸಲು ಒತ್ತಾಯಿಸಿ ಡೇರಿಗೆ ಬೀಗ ಪ್ರತಿಭಟನೆ ನಡೆಸಿದರು.
Published on

ಮೇಲುಕೋಟೆ: ಹೋಬಳಿಯ ನರಹಳ್ಳಿ ಗ್ರಾಮದಲ್ಲಿ ರೈತರು ಹಲವು ಅವ್ಯವಸ್ಥೆಗಳನ್ನು ಸರಿಪಡಿಸಲು ಒತ್ತಾಯಿಸಿ ಡೇರಿಗೆ ಬೀಗ ಜಡಿದು ರಸ್ತೆಗೆ ಹಾಲು ಸುರಿದು ಪ್ರತಿಭಟನೆ ನಡೆಸಿದರು.

ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಕಾಳಮರೀಗೌಡ ಅವ್ಯವಹಾರ ನಡೆಸುತ್ತಿದ್ದಾರೆ. ಪ್ರತಿನಿತ್ಯ ಮದ್ಯ ಸೇವಿಸಿ ಕರ್ತವ್ಯ ನಿರ್ವಹಿಸುವುದಲ್ಲದೆ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸುತ್ತಾರೆ. ಅಲ್ಲದೆ ಕೊಳಚೆ ನೀರಿನಲ್ಲೇ ಹಾಲಿನ ಕ್ಯಾನ್‌ಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಡೇರಿ ಪ್ರಾರಂಭಗೊಂಡ ಕಳೆದ 37 ವರ್ಷಗಳಿಂದಲೂ ಷೇರುದಾರರಿಗೆ ಯಾವುದೇ ಬೋನಸ್ ನೀಡಿಲ್ಲ. ಪ್ರೋತ್ಸಾಹ ಧನವನ್ನೂ ಸರಿಯಾಗಿ ಪಾವತಿಸುತ್ತಿಲ್ಲ. ಜತೆಗೆ ಹಾಲು ಸರಬರಾಜು ಮಾಡಿದ ಹಣವನ್ನು ಕಾಲಕಾಲಕ್ಕೆ ಬಟವಾಡೆ ಮಾಡುವುದಿಲ್ಲ. ಡೇರಿಯಲ್ಲಿ ಸ್ವಚ್ಛತೆ ಮಾಯವಾಗಿದೆ. ಡೇರಿಗೆ ನಿತ್ಯ 30 ಕ್ಯಾನ್ ಹಾಲು ಸರಬರಾಜು ಮಾಡಲಾಗುತ್ತಿದೆ. ಇಷ್ಟಾದರೂ ಷೇರುದಾರರಿಗೆ ಮೂಲಸೌಲಭ್ಯ ಒದಗಿಸುತ್ತಿಲ್ಲ ಎಂದು ಡೇರಿ ಕಾರ್ಯದರ್ಶಿ ಕಾಳಮರೀಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಂಘಕ್ಕೆ ಅಧ್ಯಕ್ಷರು, ನಿರ್ದೇಶಕರು ಸೇರಿದಂತೆ ಆಡಳಿತ ಮಂಡಳಿಯೇ ಇಲ್ಲ. ಇಡೀ ಜಿಲ್ಲೆಯಲ್ಲಿ ಅವ್ಯವಸ್ಥೆಯ ಡೇರಿಯಾಗಿದೆ ಎಂದ ಗ್ರಾಮಸ್ಥರು, ಮಹಿಳೆಯರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವ ಡೇರಿ ಕಾರ್ಯದರ್ಶಿ ಮರಿಕಾಳೇಗೌಡ ಹಾಗೂ ಮನ್ ಮುಲ್ ಮೇಲ್ವಿಚಾರಕ ಪ್ರಜ್ವಲ್ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಗ್ರಾಮಸ್ಥರು ಬಿಗಿ ಪಟ್ಟು ಹಿಡಿದರು. ಮೇಲುಕೋಟೆ ಪೊಲೀಸರು ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರ ಮನವೊಲಿಸಿದರೂ ಜಗ್ಗದೆ ಪ್ರತಿಭಟನೆ ಮುಂದುವರಿಸಿದರು.

20 ದಿನಗಳಲ್ಲಿ ಚುನಾವಣೆ: ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಜಿಲ್ಲಾ ಪ್ರಭಾರ ಉಪನಿಬಂಧಕ ನಾಗಭೂಷಣ್ ಮತ್ತು ಮನ್‌ಮುಲ್ ಉಪ ವ್ಯವಸ್ಥಾಪಕ ಪ್ರಸಾದ್, ಡೇರಿ ಅವ್ಯವಸ್ಥೆಯನ್ನು ಖುದ್ದು ಪರಿಶೀಲಿಸಿ ಕಾರ್ಯದರ್ಶಿ ಮತ್ತು ಮೇಲ್ವಿಚಾರಕನನ್ನು ತರಾಟೆಗೆ ತೆಗೆದುಕೊಂಡರು. ರೈತರ ಸಮಸ್ಯೆಗಳು ಹಾಗೂ ಕಾರ್ಯದರ್ಶಿ ವಿರುದ್ಧದ ಆರೋಪಗಳನ್ನು ಆಲಿಸಿದ ಅಧಿಕಾರಿಗಳು 20 ದಿನದೊಳಗೆ ಡೇರಿಗೆ ಚುನಾವಣೆ ಮಾಡಲಾಗುತ್ತದೆ. ಒಂದು ವಾರದೊಳಗೆ ನಿಮ್ಮ ಸಂಪೂರ್ಣ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.

ಅಲ್ಲದೆ ಮಹಿಳೆಯರೊಂದಿಗೆ ಅಸಭ್ಯವಾಗಿ ನಡೆದುಕೊಂಡ ಕಾರ್ಯದರ್ಶಿ ಕಾಳಮರೀಗೌಡ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಡೇರಿಯಿರುವ ಈಗಿನ ಸ್ಥಳಕ್ಕೆ ಬದಲಾಗಿದೆ ತಾತ್ಕಾಲಿಕವಾಗಿ ಮಾರಮ್ಮನ ದೇವಸ್ಥಾನ ಅಥವಾ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಾಲು ತೆಗೆದುಕೊಳ್ಳಲು ವ್ಯವಸ್ಥೆ ಮಾಡುವಂತೆ ಮೇಲ್ವಿಚಾರಕ ಪ್ರಜ್ವಲ್‌ಗೆ ಸೂಚನೆ ನೀಡಿದರು.

ಇದರಿಂದ ಪ್ರತಿಭಟನೆ ಹಿಂಪಡೆದ ರೈತರು ಒಂದು ವಾರದ ಗಡುವಿನೊಳಗೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದರೆ ಹಾಲನ್ನು ಬೇರೆ ಡೇರಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.

ಮುಖಂಡರಾದ ಮಹೇಶ್, ಗೋಪಾಲಕೃಷ್ಣ, ವಿಶ್ವ, ಜಗ, ಬೋರೇಗೌಡ, ಜಯರಾಮೇಗೌಡ, ಎನ್.ಸಿ.ನಂದೀಶ್, ಆಶಾ, ಮೀನಾ, ವೀಣಾ, ಗ್ರಾ.ಪಂ. ಮಾಜಿ ಸದಸ್ಯ ಎನ್.ಜೆ.ಸ್ವಾಮಿ ಸೇರಿದಂತೆ 150ಕ್ಕೂ ಹೆಚ್ಚು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net