

ಗುಂಡ್ಲುಪೇಟೆ: ಮುಂಗಡವಾಗಿ ಕಂದಾಯ ವಸೂಲಿ ಮಾಡಿ ಕಡಿಮೆ ಮೊತ್ತದ ಬಿಲ್ ನೀಡಲಾಗಿದೆ ಎಂದು ಆರೋಪಿಸಿ ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿ ಎದುರು ಸಾಮೂಹಿಕ ನಾಯಕತ್ವದ ರೈತ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಗ್ರಾಮದ ಮಹೇಶ್ ಅವರಿಗೆ ಇಸ್ವತ್ತು ಮಾಡಿಕೊಡಲು ಗ್ರಾಮ ಪಂಚಾಯಿತಿ ನೌಕರ ಮಾರಶೆಟ್ಟಿ ಅವರು ಮುಂಗಡವಾಗಿ 20,000 ರೂ. ಪಡೆದು 10,300 ರೂ.ಗೆ ರಸೀದಿ ನೀಡಿದ್ದಾರೆ. ಈ ಬಗ್ಗೆ ಸಂತ್ರಸ್ತರು ದೂರು ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಸಾಮೂಹಿಕ ನಾಯಕತ್ವದ ರೈತ ಸಂಘಟನೆಯ ಕಾರ್ಯಕರ್ತರು ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೂಡಲೇ ಎಚ್ಚೆತ್ತ ಪಿಡಿಒ ಶಾಂತರಾಜು ನೌಕರನಿಂದ 9.700 ರೂ. ವಾಪಸ್ ಕೊಡಿಸುವ ಮೂಲಕ ಸಮಸ್ಯೆ ಪರಿಹರಿಸಿದರು.
ಗ್ರಾಮ ಘಟಕದ ಅಧ್ಯಕ್ಷ ನಂದೀಶ್ ಮಾತನಾಡಿ, ಗ್ರಾಮ ಪಂಚಾಯಿತಿಯು ಕೈಗೊಳ್ಳುವ ಯಾವುದೇ ಕಾಮಗಾರಿಗಳಲ್ಲಿ ನೈಜ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಬೇಕು. ಸಾರ್ವಜನಿಕರಿಂದ ಪಡೆದ ಹಣದ ಅರ್ಧ ಮೊತ್ತಕ್ಕೆ ಬಿಲ್ ಹಾಕುತ್ತಿದ್ದು, ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದರು.
ಸಂಘಟನೆ ಕಾರ್ಯಕರ್ತರಾದ ಸಿದ್ದಪ್ಪ, ಮಂಜಪ್ಪ, ಮಂಜು, ಮಹೇಶ್, ಸಿದ್ದರಾಜು, ಮಹೇಶ್, ಕಿರಣ್ ಇತರರು ಇದ್ದರು.