

ರಿಪ್ಪನ್‌ಪೇಟೆ: ಬೆಳೆಗಳಿಗೆ ಬೆಲೆ ನಿಗದಿ ಮಾಡುವ ಅಧಿಕಾರ ರಾಜ್ಯ ತಾಂತ್ರಿಕ ಸಮಿತಿಗೆ ಇರುವುದರಿಂದ ಮಲೆನಾಡು ಭಾಗದ ರೈತರ ಭತ್ತ, ಇತರ ಬೆಳೆಗಳಿಗೆ ಸಹಕಾರ ಸಂಘಗಳಲ್ಲಿ ಕಡಿಮೆ ಸಾಲ ದೊರೆಯುತ್ತಿರುವುದು ಅವೈಜ್ಞಾನಿಕವಾಗಿದೆ. ಆದ್ದರಿಂದ ಜಿಲ್ಲಾಮಟ್ಟದಲ್ಲಿಯೇ ತಾಂತ್ರಿಕ ಸಮಿತಿಯನ್ನು ರಚಿಸಿ ಬೆಳೆ ಅಧ್ಯಯನದೊಂದಿಗೆ ಹೆಚ್ಚಿನ ಸಾಲ ನೀಡುವಂತಾಗಬೇಕು ಎಂದು ರೈತರು ಒಕ್ಕೊರಲಿನಿಂದ ಆಗ್ರಹಿಸಿದರು.
ಪಟ್ಟಣದ ವಿಶ್ವಮಾನವ ಸಭಾಂಗಣದಲ್ಲಿ ಭಾನುವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸರ್ವಸದ್ಯರ ಸಭೆಯಲ್ಲಿ ಭತ್ತದ ಬೆಳೆಗೆ ಕಡಿಮೆ ಸಾಲ ನೀಡುತ್ತಿರುವ ಬಗ್ಗೆ ರೈತರು ಪ್ರಸ್ತಾಪಿಸಿದಾಗ ಅಧ್ಯಕ್ಷ ಎಂ.ಎಂ.ಪರಮೇಶ್ ಮಾತನಾಡಿ ಈಗಿನ ಬೆಳೆಗಳಿಗೆ ಬೆಲೆ ನಿಗದಿಯ ಅಧಿಕಾರ ರಾಜ್ಯ ತಾಂತ್ರಿಕ ಸಮಿತಿಗೆ ಇದೆ. ಅವರು ಕೈಗೊಂಡ ತೀರ್ಮಾನವನ್ನು ಸಹಕಾರ ಸಂಘಗಳು ಪಾಲಿಸಬೇಕಾಗುತ್ತದೆ. ನಿಯಮ ಬದಲಾದರೆ ರೈತರಿಗೆ ಹೆಚ್ಚಿನ ಅವಕಾಶ ಕಲ್ಪಿಸಬಹುದಾಗಿದೆ ಎಂಬ ಉತ್ತರಕ್ಕೆ ತೃಪ್ತರಾಗದ ಷೇರುದಾರರು, ಜಿಲ್ಲಾ ತಾಂತ್ರಿಕ ಸಮಿತಿ ರಚನೆಗೆ ಆಗ್ರಹಿಸಿದರು.
ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆ ಇದ್ದು ಬರಗಾಲ ಘೋಷಣೆ ಆಗಿರುವುರಿಂದ ರೈತರ ಬೆಳೆಗಳು ಕೈಗೆ ಸಿಗದಿರುವ ಆತಂಕವನ್ನು ಎದುರುತ್ತಿರುವ ಕಾರಣ ಜನರ ಹೊರೆಯನ್ನು ಕಡಿಮೆಗೊಳಿಸಲು ಸರ್ಕಾರ ರೈತರ ಸಾಲಮನ್ನಾ ಘೋಷಿಸುವುದರೊಂದಿಗೆ ನೆರವಿಗೆ ಧಾವಿಸಬೇಕೆಂದು ನಿರ್ಣಯಿಸಿದರು. ಈ ಬಾರಿಯ ಆಡಳಿತ ಅವಧಿಯಲ್ಲಿ ಸಂಘ 17.40 ಲಕ್ಷ ರೂಪಾಯಿ ನಿವ್ವಳ ಲಾಭವನ್ನು ಹೊಂದಿದ್ದು ಸುಸಜ್ಜಿತವಾದ ಆಡಳಿತ ಕಚೇರಿ ಕಟ್ಟಡ ಹಾಗೂ ಬಹು ಸಂಕೀರ್ಣ ವಾಣಿಜ್ಯ ಗೋದಾಮುಗಳನ್ನು ನಿರ್ಮಿಸಿದ್ದು ಜಿಲ್ಲೆಯಲ್ಲಿಯೇ ಉತ್ತಮ ಸಹಕಾರ ಸಂಘ ಎಂಬ ಪ್ರಶಸ್ತಿ ಪಡೆದಿರುವುದಕ್ಕೆ ಷೇರುದಾರರಿಂದ ಮೆಚ್ಚುಗೆ ವ್ಯಕ್ತವಾಯಿತು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಷೇರುದಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಕ್ರೀಡಾಪಟುಗಳಿಗೆ, ಮಾಜಿ ಯೋಧರಿಗೆ ಹಾಗೂ ಸಂಘದ ಮಾಜಿ ನಿರ್ದೇಶಕರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಎನ್.ಪಿ.ರಾಜು, ಸಿಇಒ ಸರಸ್ವತಿ, ನಿರ್ದೇಶಕರು ಇದ್ದರು.
ಕೈ, ಕೈ ಮಿಲಾಯಿಸಿದ ಸದಸ್ಯರು
ಕೃಷಿ ಪತ್ತಿನ ಸಹಕಾರ ಸಂಘದ ಸರ್ವಸದಸ್ಯರ ಸಭೆಗೆ ಆಹ್ವಾನ ಪತ್ರಿಕೆಯಲ್ಲಿ ಮಾಜಿ ಶಾಸಕ ಹರತಾಳು ಹಾಲಪ್ಪ ಅವರ ಹೆಸರಿನ ಬದಲಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಹೆಸರು ಮತ್ತು ಭಾವಚಿತ್ರ ಪ್ರಕಟಿಸಿರುವುದನ್ನು ರಾಜಕೀಯ ಪ್ರೇರಿತವೆಂದು ಆರೋಪಿಸಿದ ಬಿಜೆಪಿ ಮುಖಂಡ ಆರ್.ಟಿ.ಗೋಪಾಲ್, ಜಿ.ಡಿ.ಮಲ್ಲಿಕಾರ್ಜುನ್, ದುಂಡರಾಜಪ್ಪ ಗೌಡ ಆಕ್ಷೇಪವೆತ್ತಿದರು. ಸಂಸದ ಬಿ.ವೈ. ರಾಘವೇಂದ್ರರ ಹೆಸರನ್ನು ಉದ್ದೇಶಪೂರ್ವಕವಾಗಿ ಬಿಟ್ಟು ಆರ್.ಎಂ.ಮಂಜುನಾಥ ಗೌಡರ ಹೆಸರನ್ನು ಮುದ್ರಿಸಿರುವುದೇಕೆ? ಎಂದು ದೂರಿದರು. ಆಗ ದೌಡಾಯಿಸಿ ಬಂದ ಕಾಂಗ್ರೆಸ್ ಮುಖಂಡರಾದ ಅಮೀರ್ ಹಂಜಾ, ಮಳವಳ್ಳಿ ಮಂಜುನಾಥ, ಆಸೀಫ್ ಬಿಜೆಪಿ ಮುಖಂಡರ ಮಾತಿಗೆ ತಡೆಯೊಡ್ಡಿ ವಾಗ್ವಾದ ನಡೆಸಿದರು. ಇದು ಕೈ ಕೈ ಮಿಲಾಯಿಸುವ ಹಂತ ತಲುಪಿದ್ದು ಕೆಲಕಾಲ ಸಭೆಯಲ್ಲಿ ಗೊಂದಲ ಉಂಟಾಗಿತ್ತು. ಕೆಲ ಷೇರುದಾರರ ಮಧ್ಯಪ್ರವೇಶದಿಂದ ಆಕ್ರೋಶ ತಿಳಿಗೊಂಡಿತು.