

ಬೇಲೂರು: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಶೌಚಗೃಹ ಅವ್ಯವಸ್ಥೆ ಕಂಡು ಡಿಪೋ ವ್ಯವಸ್ಥಾಪಕಿ ಮತ್ತು ಸಿಬ್ಬಂದಿ ವಿರುದ್ಧ ಶಾಸಕ ಎಚ್.ಕೆ.ಸುರೇಶ್ ಹರಿಹಾಯ್ದರು.
ಶೌಚಗೃಹದಲ್ಲಿ ನೀರಿಲ್ಲದೆ ಪ್ರಯಾಣಿಕರು ಪರದಾಡುತ್ತಿರುವ ಕುರಿತು ಪತ್ರಿಕೆಗಳಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದೆ ಹೀಗಾಗದಂತೆ ಎಚ್ಚರ ವಹಿಸುವಂತೆ ಸೂಚನೆ ನೀಡಿದರು.
ನೇರವಾಗಿ ಬಸ್ ನಿಲ್ದಾಣದ ಪ್ರವೇಶದ್ವಾರಕ್ಕೆ ಆಗಮಿಸಿದ ಶಾಸಕ ಎಚ್.ಕೆ.ಸುರೇಶ್, ಬಸ್ ನಿಲ್ದಾಣದಲ್ಲಿರುವ ಶೌಚಗೃಹದ ಒಳಗೆ ಹೋಗಿ ಪರಿಶೀಲಿಸಿದ ಸಂದರ್ಭ ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತಿರುವುದನ್ನು ನೋಡಿ ಬೇಲೂರು ಬಸ್ ಡಿಪೋ ವ್ಯವಸ್ಥಾಪಕಿ ಸಾಜಿಯಾ ಭಾನು ಮತ್ತು ಸಿಬ್ಬಂದಿಯನ್ನು ಕರೆದು ಇದೇನಾ ಸ್ವಚ್ಛತೆ ಎಂದು ಪ್ರಶ್ನಿಸಿ, ತಕ್ಷಣವೇ ಸ್ವಚ್ಛಗೊಳಿಸಬೇಕು ಎಂದು ತಾಕೀತು ಮಾಡಿದರು.
ನೀರಿಲ್ಲದೆ ಪ್ರಯಾಣಿಕರು ಹಾಗೂ ಬೇಲೂರಿಗೆ ಬರುವ ಪ್ರವಾಸಿಗರು ಸ್ಥಳೀಯರನ್ನು ಬೈಯುತ್ತಿದ್ದಾರೆ. ಆದರೆ ಬಸ್ ನಿಲ್ದಾಣದ ಉಸ್ತುವಾರಿ ನೋಡಬೇಕಾದ ನೀವು ಏನು ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಲಸ ಮಾಡಲು ಇಷ್ಟವಿಲ್ಲದಿದ್ದಲ್ಲಿ ಬೇರೆಡೆಗೆ ಹೋಗಿ ಇಲ್ಲಿ ಸುಮ್ಮನೆ ಏಕೆ ಇರುತ್ತೀರಿ ಎಂದ ಅವರು ಸ್ವಚ್ಛತೆ ಮತ್ತು ನೀರಿನ ಸಂಪರ್ಕ ಕಲ್ಪಿಸಬೇಕು ಎಂದು ಎಚ್ಚರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಚ್.ಕೆ.ಸುರೇಶ್, ವಿಶ್ವ ಪ್ರಸಿದ್ಧ ಬೇಲೂರಿಗೆ ಬರುವ ಸಾರ್ವಜನಿಕರು, ಪ್ರಯಾಣಿಕರು ಶೌಚಗೃಹಕ್ಕೆ ಹೋಗುತ್ತಾರೆ. ಆದರೆ ಇಲ್ಲಿ ಸ್ವಚ್ಛತೆ ಇಲ್ಲದಿದ್ದಲ್ಲಿ ರೋಗಗಳು ಹರಡುವ ಸಾಧ್ಯತೆ ಇದೆ. ಕೆಎಸ್‌ಆರ್‌ಟಿಸಿ ಅಧಿಕಾರಿಯ ಬೇಜವಾಬ್ದಾರಿಯಿಂದ ಶೌಚಗೃಹ ನಾರುತ್ತಿದೆ. ಒಳಗೆ ಹೋಗಬೇಕೆಂದರೆ ಮೂಗುಮುಚ್ಚಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಕೊಳವೆಬಾವಿ ಕೆಟ್ಟು ನಿಂತು ತಿಂಗಳು ಕಳೆದರೂ ಸರಿಪಡಿಸಿಲ್ಲ. ನೀರನ್ನು ಸರಿಯಾಗಿ ಕೊಡದ ಮತ್ತು ಬಳಸದ ಕಾರಣ ರೋಗ ರುಜಿನಗಳು ಹರಡುವ ಕೇಂದ್ರವಾಗಿ ಮಾರ್ಪಟ್ಟಿದೆ. ಅಲ್ಲದೆ ಬಸ್ ನಿಲ್ದಾಣಕ್ಕೆ ಸರಿಯಾದ ಸಮಯಕ್ಕೆ ಬಸ್‌ಗಳು ಬರುತ್ತಿಲ್ಲ ಎಂಬ ಆರೋಪ ಇದೆ. ಶಾಲಾ ಮಕ್ಕಳು, ಹಾಸನ, ಚಿಕ್ಕಮಗಳೂರಿಗೆ ಹೋಗುವವರಿಗೆ ತೊಂದರೆಯಾಗುತ್ತಿದೆ. ಬಸ್ ನಿಲ್ದಾಣದೊಳಕ್ಕೆ ಪ್ರವೇಶ ದ್ವಾರ ಸರಿಪಡಿಸಿಲ್ಲ, ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿಗಳ ವೈಫಲ್ಯವೇ ಕಾರಣ, ಇಂತಹ ಅಧಿಕಾರಿಗಳಿಂದ ಬೇಲೂರಿಗೆ ಕಳಂಕ ಬರುತ್ತಿದೆ. ಈ ವಿಚಾರವಾಗಿ ಸಾರಿಗೆ ಸಚಿವರ ಗಮನಕ್ಕೆ ತಂದು ನಿರ್ಲಕ್ಷೃ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ತಿಳಿಸಲಾಗುವುದು. ಸಮಸ್ಯೆ ಬಗ್ಗೆ ನನ್ನ ಗಮನಕ್ಕೂ ತರುವುದಿಲ್ಲ. ತಕ್ಷಣವೇ ಈಗಿರುವ ಎಲ್ಲ ಸಮಸ್ಯೆಗಳ ನಿವಾರಣೆಗೆ ಮುಂದಾಗಬೇಕು. ಇಲ್ಲದಿದ್ದಲ್ಲಿ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬೇಲೂರು ಬಸ್ ಡಿಪೋ ವ್ಯವಸ್ಥಾಪಕಿ ಸಾಜಿಯಾ ಭಾನು ಮಾತನಾಡಿ, ಬಸ್ ನಿಲ್ದಾಣ ಪ್ರವೇಶ ದ್ವಾರದ ವಿಚಾರವಾಗಿ ಮೇಲಧಿಕಾರಿಗಳಾದ ಜಿಲ್ಲಾ ವ್ಯವಸ್ಥಾಪಕರಿಗೆ ಪತ್ರ ಬರೆದ ಕಾರಣ ಇಂಜಿನಿಯರ್ ಬಂದು ಸ್ಥಳ ಪರಿಶೀಲಿಸಿದ್ದಾರೆ. ಸದ್ಯದಲ್ಲೇ ಕೆಲಸ ಮಾಡಿಸಲಾಗುವುದು. ಶೌಚಗೃಹಕ್ಕೆ ನೀರಿನ ಸಮಸ್ಯೆ ಇದ್ದು ಅದನ್ನು ಸರಿಪಡಿಸಲು ಕ್ರಮ ಕೈಗೊಂಡರೂ ವಿಫಲವಾಯಿತು. ಈಗ ತಾತ್ಕಾಲಿಕವಾಗಿ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಜತೆಗೆ ಕೊಳವೆ ಬಾವಿ ಕೊರೆಸಲು ಪಾಯಿಂಟ್ ಗುರುತಿಸಿದ್ದು, ಸದ್ಯದಲ್ಲೇ ಕೊರೆಸಲಾಗುವುದು. ಮತ್ತು ಶೌಚಗೃದ ಸ್ವಚ್ಛತೆ ಬಗ್ಗೆ ಹದಿನೈದು ದಿನಕ್ಕೊಮ್ಮೆ ಭೇಟಿ ನೀಡಿ ಪರಿಸೀಲಿಸಿ ಸ್ವಚ್ಛಗೊಳಿಸುವಂತೆ ಗುತ್ತಿಗೆದಾರರಿಗೆ ತಿಳಿಸುತ್ತೇವೆ ಎಂದರು.
ಕಳ್ಳೇರಿ ಗ್ರಾಪಂ ಅಧ್ಯಕ್ಷ ಅಬ್ದುಲ್ ಹಕೀಂ, ಹಳೇಬೀಡು ಗ್ರಾಪಂ ಸದಸ್ಯ ಅಶೋಕ್, ಬಿಜೆಪಿ ನಗರಾಧ್ಯಕ್ಷ ವಿನಯ್ ಇತರರು ಇದ್ದರು.