ದೇಗುಲಗಳ ಮೇಲಿನ ಹಸ್ತಕ್ಷೇಪಕ್ಕೆ ಆಕ್ರೋಶ

ದೇಗುಲಗಳ ಮೇಲಿನ ಹಸ್ತಕ್ಷೇಪಕ್ಕೆ ಆಕ್ರೋಶ
Published on

ಕುಶಾಲನಗರ: ದೇವಾಲಯಗಳಲ್ಲಿ ಸರ್ಕಾರದ ಹಸ್ತಕ್ಷೇಪಕ್ಕೆ ಸಂಬಂಧಿಸಿದಂತೆ ಕುಶಾಲನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾ ಸಂಘದ ಜಿಲ್ಲಾಮಟ್ಟದ ಪರಿಷತ್ತು - 2024ರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ದೇವಾಲಯಗಳ ಚರ, ಸ್ಥಿರ ಆಸ್ತಿ ರಕ್ಷಣೆ, ಈ ಮೂಲಕ ಧರ್ಮದ ಅಸ್ತಿತ್ವ ಉಳಿಸಿಕೊಳ್ಳಲು ದೇವಾಲಯಗಳ ಒಗ್ಗಟ್ಟಿನ ಅಗತ್ಯತೆ ಬಗ್ಗೆಯೂ ಇದೇ ಸಂದರ್ಭ ಚರ್ಚೆಗಳು ನಡೆದವು.

ಕಾರ್ಯಕ್ರಮ ಉದ್ಘಾಟಿಸಿದ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಹಿಂದೆ ಹೇಗಿದ್ದವರು ಈಗ ಹೇಗಿದ್ದೇವೆ ಎನ್ನುವುದರ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಂದೊದಗಿದೆ. ಮನೋದೌರ್ಬಲ್ಯ ಇದ್ದವರಲ್ಲಿ ರೋಗ-ರುಜಿನ ಸಾಮಾನ್ಯ. ಜಾಗೃತ ಸಮಾಜ ಕರ್ತವ್ಯದಿಂದ ವಿಮುಖರಾದಾಗ ರೋಗಗ್ರಸ್ತ ಸಮಾಜ ನಿರ್ಮಾಣ ಆಗುತ್ತದೆ. ದೇವಾಲಯಗಳು ಸಂಸ್ಕಾರ ಹೇಳಿ ಕೊಡುವ, ಜಾಗೃತಿ ಮೂಡಿಸುವ, ವ್ಯಕ್ತಿಯ ಪರಿಪೂರ್ಣ ವ್ಯಕ್ತಿತ್ವ ರೂಪಿಸುವ ಕೇಂದ್ರ ಆಗಿತ್ತು. ಆಧುನಿಕ ಶಿಕ್ಷಣ ಪಡೆಯುವ ಧಾವಂತದಲ್ಲಿ ತಾಯಿ ಬೇರು ಕತ್ತರಿಸಿ ಟಿಸಿಲುಗಳಿಗೆ ಗೊಬ್ಬರ ಹಾಕುವ ವಾತಾವರಣ ನಿರ್ಮಾಣ ಆಗಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಮಕ್ಕಳಿಗೆ ಶಿಕ್ಷಣ ಕೊಡುತ್ತಿದ್ದೇವೆಯೇ ಹೊರತೂ ಸಂಸ್ಕಾರ ಕಲಿಸುತ್ತಿಲ್ಲ. ಹಿಂದು ಸಂಸ್ಥತಿ ಉಳಿಯಬೇಕೆಂದರೆ ದೇವಾಲಯ ಉಳಿಯಬೇಕು. ದೇವಸ್ಥಾನದ ಆಸ್ತಿಗಳು ಕಡಿಮೆ ಆಗಿದ್ದು, ಬೇರೆ ಮತಗಳ ಆರಾಧನ ಕೇಂದ್ರಗಳ ಆಸ್ತಿ ವೃದ್ಧಿಯಾಗಿದೆ. ಇದಕ್ಕೆ ನಾವುಗಳೇ ಕಾರಣ. ನಾವು ಬದಲಾಗುವುದರ ಮೂಲಕ ವ್ಯವಸ್ಥೆ ಬದಲು ಮಾಡಬೇಕಿದೆ ಎಂದು ಪ್ರತಿಪಾದಿಸಿದರು.

ದೇವಾಲಯಗಳ ಮಹಾಸಂಘದ ಸಂಯೋಜಕ ಮೋಹನ್ ಗೌಡ ಮಾತನಾಡಿ, ಸ್ವಾತಂತ್ರ್ಯ ಬಂದು 74 ವರ್ಷಗಳಾದರೂ ಹಿಂದೂಗಳಿಗೆ ಸ್ವಾತಂತ್ರ್ಯ ಬಂದಿದೆಯಾ ಎಂದು ಪ್ರಶ್ನಿಸಿಕೊಳ್ಳುವ ವಾತಾವರಣ ಇದೆ. ರಾಜರ ಕಾಲದಲ್ಲಿ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದ ಕಾರಣ ಕಾಲ ಕಾಲಕ್ಕೆ ಮಳೆ, ಬೆಳೆ ಚೆನ್ನಾಗಿ ಆಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. 1927ರಲ್ಲಿ ಬ್ರಿಟಿಷರು ದೇವಾಲಯಗಳ ನಿಯಂತ್ರಣ ಕಾನೂನು ತಂದರು. ಈ ಸಂದರ್ಭದಲ್ಲಿ ಮುಸ್ಲಿಂ, ಕ್ರೈಸ್ತರೂ ಈ ಕಾಯಿದೆಯಲ್ಲಿ ಸೇರಿದ್ದರು. ಆದರೆ ಇವರಿಂದ ತೀವ್ರ ಪ್ರತಿಭಟನೆ ಎದುರಾದ ನಂತರ ಕಾಯಿದೆಯಿಂದ ಈ ಎರಡೂ ಧರ್ಮವನ್ನು ಹೊರಗಿಡಲಾಯಿತು. ಈಗಲೂ ಅದೇ ಸ್ಥಿತಿ ಮುಂದುವರಿದಿದೆ. ಹಿಂದು ದೇವಾಲಯಗಳನ್ನು ಸರ್ಕಾರೀಕರಣ ಮಾಡಲಾಯಿತಾದರೂ ಇತರ ಧರ್ಮಗಳ ಆರಾಧನಾ ಸ್ಥಳಗಳನ್ನು ಮುಟ್ಟಿಲ್ಲ ಎಂದು ತಿಳಿಸಿದರು.

ಸರ್ಕಾರದಿಂದ ಹುನ್ನಾರ: ಈಗ ದೇವಾಲಯಗಳ ಮೇಲೆ ಔರಂಗಜೇಬನ ಜಿಜಿಯಾ ಟ್ಯಾಕ್ಸ್ ರೀತಿಯ ತೆರಿಗೆ ಹಾಕುವ ಹುನ್ನಾರ ಸರ್ಕಾರದಿಂದ ನಡೆದಿದೆ. ದೇವಾಲಯಗಳನ್ನು ಸರ್ಕಾರಿ ಹಿಡಿತದಿಂದ ಮುಕ್ತಿ ಮಾಡಬೇಕಿದೆ. ದೇವಸ್ಥಾನಗಳ ಸಂಘಟನೆ ಆಗಬೇಕಿದೆ. ದೇವಾಲಯಗಳ ಪ್ರತಿನಿಧಿಗಳು ಒಗ್ಗಾಟಗಬೇಕು. ಸರ್ಕಾರದ ಕಪಿಮುಷ್ಠಿಯಿಂದ ಮುಕ್ತಿ ಪಡೆಯಬೇಕು ಎಂದು ಮೋಹನ್ ಗೌಡ ಹೇಳಿದರು.

ಜಾತ್ಯತೀತತೆಯ ವಿಶ್ಲೇಷಣೆ ಈಗ ತಪ್ಪಿ ಹೋಗಿದೆ ಅನ್ನಿಸುತ್ತದೆ. ಜಗತ್ತಿನಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗುತ್ತಿದ್ದಾರೆ. ವಕ್ಭ್ ಬೋರ್ಡ್ ಆಸ್ತಿ ರಕ್ಷಣೆಗೆ ಹಣ ಮೀಸಲಿಡುವ ಸರ್ಕಾರ ದೇವಾಲಯದ ಆಸ್ತಿ ರಕ್ಷಣೆಗೆ ಬಜೆಟ್‌ನಲ್ಲಿ ನಯಾ ಪೈಸೆ ಇಡುತ್ತಿಲ್ಲ. ಕಾಶಿ ಕಾರಿಡಾರ್ ಉತ್ತರಪ್ರದೇಶದ ಪ್ರವಾಸೋದ್ಯಮ ಚಿತ್ರಣ ಬದಲಿಸಿತು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ನಂತರ ಏನಾಯಿತು ಎನ್ನುವುದು ಈಗ ಗೊತ್ತಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಭಕ್ತರಿಗೆ ಒಪ್ಪಿಸಲಿ: ಸನಾತನ ಸಂಸ್ಥೆಯ ಧರ್ಮಪ್ರಚಾರಕ ರಮಾನಂದ ಗೌಡ ಮಾತನಾಡಿ, ದೇವಸ್ಥಾನಗಳ ನಿರ್ವಹಣೆ ಉತ್ತಮವಾಗಿ ನಡೆಯಬೇಕು. ಸರ್ಕಾರದ ಕಪಿಮುಷ್ಠಿಯಲ್ಲಿ ಇರುವ ದೇವಾಲಯಗಳನ್ನು ಭಕ್ತರಿಗೆ ಒಪ್ಪಿಸಬೇಕು. ದೇವರು ವಾಸ ಮಾಡುವ ಚೈತನ್ಯದ ಕ್ಷೇತ್ರಗಳಾದ ದೇವಸ್ಥಾನ, ಧರ್ಮ, ರಾಷ್ಟ್ರ, ಸಮಾಜಕ್ಕೆ ಪರಸ್ಪರ ನಂಟು ಇದೆ. ನಮ್ಮ ದೇವಸ್ಥಾನಗಳು ಧರ್ಮಶಿಕ್ಷಣದ ಕೇಂದ್ರವಾಗಬೇಕು. ಧರ್ಮ ಶಿಕ್ಷಣ ಕೊಡದಿದ್ದರೆ ಮುಂದಿನ ಪೀಳಿಗೆ ಗೊಂದಲಕ್ಕೆ ಒಳಗಾಗಬಹುದು ಎಂದರು.

ಕುಶಾಲನಗರ ದೇವಾಲಯಗಳ ಒಕ್ಕೂಟದ ಅಧ್ಯಕ್ಷ ಎಂ.ಕೆ. ದಿನೇಶ್ ಮಾತನಾಡಿ ನಮ್ಮಲ್ಲಿನ ನಿರಾಭಿಮಾನ ಈಗಿನ ಈ ಸ್ಥಿತಿಗೆ ಕಾರಣ. ದೇವಾಲಯಗಳು ಸಂಘಟನೆ ಆಗುತ್ತಿರುವುದು ಉತ್ತಮ ಬೆಳವಣಿಗೆ. ಸರ್ಕಾರ ಏನೇ ಕಾನೂನು ಮಾಡಬಹುದು. ಇದರ ವಿರುದ್ಧ ತಿರುಗಿ ನಿಲ್ಲುವ ಕಾಲ ಈಗ ಬಂದಿದೆ. ಒಗ್ಗಟ್ಟು ಇದ್ದರೆ ಏನು ಬೇಕಾದರೂ ಸಾಧಿಸಬಹುದು. ಮನೆಗಳಲ್ಕಿ ಸಂಸ್ಕೃತಿ ಬಗ್ಗೆ ಹೆಚ್ಚಿನ ತಿಳಿವಳಿಕೆ ಕೊಡಬೇಕು. ದೇವಾಲಯಗಳಿಗೆ ಬರುವವರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಆಗಬೇಕು ಎಂದರು. ಕಾರ್ಯಕ್ರಮದ ಆರಂಭದಲ್ಲಿ ಸೋಮವಾರಪೇಟೆಯ ಬಸವಕುಮಾರ ಶಾಸ್ತ್ರೀ ಮತ್ತು ಮಡಿಕೇರಿಯ ಹಿರೇಮಠ ಶಾಸ್ತ್ರಿ ವೇದಮಂತ್ರ ಪಠಿಸುವ ಮೂಲಕ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net