ವಿದ್ಯುತ್ ಲೋಡ್​ಶೆಡ್ಡಿಂಗ್​ಗೆ ಆಕ್ರೋಶ

31NRGL6 HESCOM GRID
Published on


ನರೇಗಲ್ಲ: ಕಳೆದೆರಡು ದಿನಗಳಿಂದ ಐಪಿ ಸೆಟ್(ರೈತರ ಪಂಪ್​ಸೆಟ್) ವಿದ್ಯುತ್ ಲೋಡ್​ಶೆಡ್ಡಿಂಗ್ ಪ್ರಾರಂಭಿಸಿದ್ದು, ಕೇವಲ ಮೂರು ತಾಸು ಮಾತ್ರ ವಿದ್ಯುತ್ ಪೂರೈಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ರೈತರು ಗುರುವಾರ ಜಕ್ಕಲಿ ರಸ್ತೆಯ ಕೆಇಬಿ ಗ್ರಿಡ್​ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರೈತರಾದ ವಿರೂಪಾಕ್ಷಪ್ಪ ರಡ್ಡೇರ, ಎಂ.ಎಸ್. ಧಡೇಸೂರಮಠ ಮಾತನಾಡಿ, ಮಳೆ ಇಲ್ಲದ ಕಾರಣ ಪ್ರಸಕ್ತ ಸಾಲಿನ ಮುಂಗಾರು ಸಂಪೂರ್ಣ ಕೈಕೊಟ್ಟಿದೆ. ನೀರಾವರಿ ಜಮೀನಿನಲ್ಲಾದರೂ ಬೆಳೆ ಉಳಿಸಿಕೊಳ್ಳೋಣ ಎಂದು ಬಿತ್ತನೆ ಮಾಡಿದ್ದೇವೆ. ಆದರೆ, ಈಗ ಅನಿಯಮಿತ ಲೋಡ್ ಶೆಡ್ಡಿಂಗ್ ಪ್ರಾರಂಭಿಸಿದ್ದು, ಕೇವಲ ಮೂರು ತಾಸು ತ್ರೀ ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ಇದರಿಂದ ಬಿತ್ತಿದ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ರೈತರಾದ ಎಸ್.ಬಿ. ಜುಟ್ಲದ, ಸೋಮಶೇಖರಯ್ಯ ಓದಿಸೂಮಠ ಮಾತನಾಡಿ, ಈ ಹಿಂದಿನಂತೆ 7 ಗಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ಪೂರೈಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು.
ಇಇ ರವಿಕಿರಣ, ಎಇಇ ಚೇತನ ಹಾದಿಮನಿ ಸ್ಥಳಕ್ಕಾಗಮಿಸಿ ರೈತರನ್ನು ಉದ್ದೇಶಿಸಿ ಮಾತನಾಡಿ, ಮೇಲಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಆದ್ದರಿಂದ, ರೈತರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.
ಇದಕ್ಕೆ ಜಗ್ಗದ ರೈತರು ನಮಗೆ ವಿದ್ಯುತ್ ಪೂರೈಕೆಯಾಗುವವರೆಗೂ ಪ್ರತಿಭಟನೆ ಕೈಬಿಡಲಾಗುವುದಿಲ್ಲ ಎಂದು ಪ್ರತಿಭಟನೆ ಮುಂದುವರಿಸಿದರು. ಮೇಲಧಿಕಾರಿಗಳಿಗೆ ಫೋನ್ ಮೂಲಕ ಸಂರ್ಪಸಿದ ಇಇ ಪ್ರತಿಭಟನಾಕಾರರೊಂದಿಗೆ ಮಾತನಾಡಿಸಿದರೂ ಪ್ರಯೋಜನವಾಗಲಿಲ್ಲ. ಸಂಜೆ 4 ಗಂಟೆಗೆ ಕೆಇಬಿಯಿಂದ ವೀರಪ್ಪಜ್ಜನ ರಸ್ತೆಯ ಕೆಇಬಿ ಗ್ರೀಡ್​ಗೆ ಪ್ರತಿಭಟನೆ ಸ್ಥಳಾಂತರಿಸಲಾಯಿತು. ಗ್ರಿಡ್​ಗೆ ಮುತ್ತಿಗೆ ಹಾಕಿದ ರೈತರು ವಿದ್ಯುತ್ ಪೂರೈಕೆ ಮಾಡದಿದ್ದರೆ ಗ್ರಿಡ್​ಗೆ ಬೆಂಕಿ ಹಚ್ಚುವುದಾಗಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ದಿಕ್ಕು ತೋಚದಂತಾದ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಪೂರೈಕೆ ಪ್ರಾರಂಭಿಸಿದರು. ಯಾವುದೇ ಕಾರಣಕ್ಕೂ 7 ಗಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ಸಂಪರ್ಕ ಕಡಿತಗೊಳಿಸಬಾರದು ಎಂದು ಎಚ್ಚರಿಸಿದರು.
ಎಸ್.ಎ. ಗಡ್ಡಿ, ಎಚ್.ಎಸ್. ದೇಸಾಯಿಗೌಡ್ರ, ಎಸ್.ಕೆ. ಸಂಕನೂರ, ಎಸ್.ಬಿ. ಹಿರೇಹಾಳ, ಸುರೇಶ ಜಕ್ಕಲಿ, ವೀರಪ್ಪ ಕುಷ್ಟಗಿ, ಎ.ಕೆ. ಸಂಕನಗೌಡ್ರ, ಹನಮಪ್ಪ ಹಾಲವರ, ಎಂ.ವಿ. ತೇಜಪ್ಪನವರ, ಪ್ರದೀಪ ಹುಯಿಲಗೋಳಮಠ, ಕಳಕಪ್ಪ ಜೋಗಿ, ಎಸ್.ಕೆ. ಮಾವಿನಕಾಯಿ, ಹುಸೇನಸಾಬ ದರ್ಗಾದ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net