ಮೂಡಿಗೆರೆಯಲ್ಲಿ ಜೆಜೆಎಂ ಕಾಮಗಾರಿ ವಿಳಂಬಕ್ಕೆ ಆಕ್ರೋಶ

mdg 1 (5)
Published on

ಮೂಡಿಗೆರೆ: ಜೆಜೆಎಂ ಕಾಮಗಾರಿ ವಿಳಂಬ, ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು, ಕಾಫಿ ತೋಟ ಮತ್ತು ಮನೆಗಳ ಮೇಲೆ ಹಾದು ಹೋಗಿರುವ ವಿದ್ಯುತ್‌ಲೈನ್, ಕೋಳಿ ಮಾಂಸದ ಅಂಗಡಿ ಸ್ಥಳಾಂತರ, ವೋಲ್ಟೇಜ್ ಸಮಸ್ಯೆ, ಪ.ಜಾತಿ, ಪಂಗಡಕ್ಕೂ ಕೃಷಿ ಇಲಾಖೆ ಸೌಲಭ್ಯ ಜಾರಿಗೊಳಿಸುವ ಕುರಿತು ಗೋಣಿಬೀಡಿನಲ್ಲಿ ನಡೆದ ಗ್ರಾಪಂ ಗ್ರಾಮ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.

ಜೆಜೆಎಂ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದ್ದು, ಕೆಲವೆಡೆ ಮೆಸ್ಕಾಂನಿಂದ ಸಮಸ್ಯೆಯಾಗಿದೆ. ತಾಲೂಕಿನಲ್ಲಿ 84 ಕಡೆ ಜೆಜೆಎಂ ಕಾಮಗಾರಿ ನಡೆಯುತ್ತಿದ್ದು, 17 ಕಡೆ ಪೂರ್ಣಗೊಂಡಿದೆ. 20ಕ್ಕಿಂತ ಹೆಚ್ಚು ಮನೆಗಳಿದ್ದರೆ ಅಂತಹ ಪ್ರದೇಶದಲ್ಲಿ ಜೆಜೆಎಂ ಕಾಮಗಾರಿ ಆರಂಭಿಸಬಹುದು. ತಾಲೂಕಿನಲ್ಲಿ 20ಕ್ಕಿಂತ ಕಡಿಮೆ ಮನೆಯಿರುವ 128 ಕಡೆ ಮಂಜೂರಾಗಿದ್ದ ಜೆಜೆಎಂ ಯೋಜನೆ ರದ್ದುಪಡಿಸಲಾಗಿದೆ. ಕಡಿಮೆ ಮನೆಯಿರುವ ಪ್ರದೇಶವನ್ನು ಗುರುತಿಸಿ ಗ್ರಾಪಂ ನಿರ್ಣಯ ಕೈಗೊಂಡು ತಾಪಂ ಇಒಗೆ ಕಳುಹಿಸಿದರೆ ಅವರು ಮಂಜೂರಾತಿ ನೀಡಬಹುದಾಗಿದೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಿರಿಯ ಇಂಜಿನಿಯರ್ ಕೇಶವ ಮಾಹಿತಿ ನೀಡಿದರು.

ಜಿ.ಅಗ್ರಹಾರ ಗ್ರಾಮದಲ್ಲಿರುವ ಗ್ರಾಮಠಾಣಾ ಜಾಗದಲ್ಲಿ 40 ಮನೆ ನಿರ್ಮಿಸಿ 50 ವರ್ಷದಿಂದ ವಾಸವಾಗಿದ್ದರೂ ಇದುವರೆಗೂ ಹಕ್ಕುಪತ್ರ ನೀಡಿಲ್ಲ ಎಂದು ಗ್ರಾಮಸ್ಥ ಸಂತೋಷ್ ಸಭೆ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಆಡಳಿತಾಧಿಕಾರಿ ನವೀನ್, ಗ್ರಾಮಠಾಣಾ ಜಾಗದಲ್ಲಿ ಮನೆ ನಿರ್ಮಿಸಿದ್ದರೆ ಅದಕ್ಕೆ ಕಂದಾಯ ಇಲಾಖೆಯಿಂದ ಹಕ್ಕುಪತ್ರ ನೀಡಲು ಅವಕಾಶವಿಲ್ಲ. ಗ್ರಾಮ ಠಾಣಾ ಜಾಗ ಹೊರತುಪಡಿಸಿ ಇತರೆ ಜಾಗದಲ್ಲಿ ಮನೆ ನಿರ್ಮಿಸಿದ್ದರೆ 94 ಡಿ ಅಡಿ ಹಕ್ಕುಪತ್ರ ನೀಡಲು ಅವಕಾಶವಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net