ಯಾವಗಲ್ ವಿರುದ್ಧದ ಟೀಕೆಗೆ ಆಕ್ರೋಶ

9 yavagall
Published on

ನರಗುಂದ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿ.ಆರ್. ಯಾವಗಲ್ ಅವರ ಸೋಲಿಗೆ ಕೆಪಿಸಿಸಿ ಮಾಧ್ಯಮ ವಕ್ತಾರ ಡಾ. ಸಂಗಮೇಶ ಕೊಳ್ಳಿಯವರು ನೇರ ಕಾರಣರು. 2023ರಿಂದಲೇ ಕಾಂಗ್ರೆಸ್ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಪಕ್ಷದ ಹಿರಿಯರ ವಿರುದ್ಧ ಟೀಕೆ ಮಾಡುವಾಗ ಬಹಳಷ್ಟು ಎಚ್ಚರ ವಹಿಸಬೇಕು ಎಂದು ನರಗುಂದ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ವೀರೇಶ ಚುಳಕಿ ಆಗ್ರಹಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಡಾ. ಸಂಗಮೇಶ ಹೇಳಿಕೆಗೆ ತಿರುಗೇಟು ನೀಡಿದ ಅವರು, ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಜತೆಗೆ ಪಕ್ಷ ಹಾಗೂ ಕಾರ್ಯಕರ್ತರ ಬೆಳವಣಿಗೆಗೆ ಮಾಜಿ ಶಾಸಕ ಬಿ.ಆರ್. ಯಾವಗಲ್ ಅವಿರತವಾಗಿ ಶ್ರಮಿಸಿದ್ದಾರೆ. ಆದರೆ, ಮತಕ್ಷೇತ್ರದ ಕೆಲವೊಂದು ಕಾರ್ಯಕ್ರಮಗಳಲ್ಲಿ ನಿರಂತರ ಕಡೆಗಣಿಸಲಾಗುತ್ತಿದೆ. ಈ ಕುರಿತು ಯಾವಗಲ್ ಅವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವುದು ನಿಜ. ಆದರೆ, ಈ ವಿಚಾರ ಮುಂದಿಟ್ಟುಕೊಂಡು ಯಾವಗಲ್ ವಿರುದ್ಧ ಕೆಪಿಸಿಸಿಗೆ ದೂರು ನೀಡಲು ಡಾ. ಸಂಗಮೇಶ ಯಾರು ಎಂದು ಪ್ರಶ್ನಿಸಿದರು.

ನರಗುಂದ ಕಾಂಗ್ರೆಸ್‌ನಲ್ಲಿ ತಂದೆ- ಮಕ್ಕಳು ವಿವಿಧ ಹುದ್ದೆಗಳನ್ನು ಪಡೆದು ಅಧಿಕಾರ ಅನುಭವಿಸುತ್ತಿದ್ದಾರೆ ಎಂದು ಆರೋಪಿಸುವ ಮುನ್ನ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಿ.ಆರ್. ಯಾವಗಲ್ ಅವರ ಕೃಪಾ ಕಟಾಕ್ಷದಿಂದ ನಿಮ್ಮ ತಂದೆ ಎಸ್.ಡಿ. ಕೊಳ್ಳಿಯವರ ಸತತ 20 ವರ್ಷಗಳಿಂದ ಕೆಪಿಸಿಸಿ ಸದಸ್ಯರಾಗಿದ್ದಾರೆ. ಕೆಸಿಸಿ ಬ್ಯಾಂಕ್, ಟಿಎಪಿಸಿಎಂಸ್, ಪಿಎಲ್‌ಡಿ ಅಧ್ಯಕ್ಷರಾಗಿ ಮಲಪ್ರಭಾ ಸಹಕಾರಿ ಎಣ್ಣಿ ಗಿರಣಿ ನಿರ್ದೇಶಕರಾಗಿಯೂ ಅಧಿಕಾರ ಅನುಭವಿಸಿದ್ದಾರೆ ಎಂದು ತಿಳಿಸಿದರು.

ಯಾವಗಲ್ ವಿರುದ್ಧ ಬಳಸಿರುವ ಪಕ್ಷ ಉಚ್ಚಾಟನೆ ಪದಕ್ಕೆ ಕ್ಷಮೆಯಾಚಿಸಿ ಮಾತು ಹಿಂಪಡೆಯಬೇಕು. ಇಲ್ಲದಿದ್ದರೆ ಅವರು ಭಾಗವಹಿಸುವ ಎಲ್ಲ ಕಾರ್ಯಕ್ರಮಗಳಲ್ಲಿ ಘೇರಾವ್ ಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು. ಶರಣಪ್ಪ ಗವಾರಿ, ವಿಜಯ ಚಲವಾದಿ, ಹನುಮರಡ್ಡಿ ಭೀಮರಡ್ಡಿಯವರ, ಮಿಲಿಂದ ಕಾಳೆ, ಬಸವರಾಜ ಪಾಟೀಲ, ಸುನೀಲ ಕಳಸಣ್ಣವರ, ಅಶೋಕ ತಾಳದವರ, ಬಸವರಾಜ, ಶರಣಪ್ಪ ಜಂಗಣ್ಣವರ, ಪ್ರಕಾಶ ಭಜಂತ್ರಿ, ಪ್ರಕಾಶ ಹಡಗಲಿ, ಹನುಮಂತ ರಾಮಣ್ಣವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net