ಪೊಲೀಸ್ ಠಾಣೆ ಎದುರು ಶವ ಇಟ್ಟು ಆಕ್ರೋಶ

IMG-20250617-WA0176
Published on

 ಗುಂಡ್ಲುಪೇಟೆ: ಪಟ್ಟಣದಲ್ಲಿ ಸೋಮವಾರ ರಾತ್ರಿ ಶಿವು ಎಂಬಾತನ ಮೇಲೆ ನಿಜಾಮುದ್ದೀನ್ ಮತ್ತು ಸ್ನೇಹಿತ ಹಲ್ಲೆ ಮಾಡಿ ಕೊಲೆಗೈದಿರುವ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ ಮೃತನ ಸಂಬಂಧಿಕರು ಮಂಗಳವಾರ ಪಟ್ಟಣದ ಪೊಲೀಸ್ ಠಾಣೆ ಎದುರಿಗೆ ಮೃತ ದೇಹವಿಟ್ಟು ಪ್ರತಿಭಟನೆ ನಡೆಸಿದರು.

ಘಟನೆ ಬಗ್ಗೆ ಮೃತ ಶಿವು ಕುಟುಂಬಸ್ಥರು ಸೋಮವಾರ ರಾತ್ರಿ ಪಟ್ಟಣದ ಠಾಣೆಗೆ ಹೋಗಿ ದೂರು ನೀಡಿದರೂ ಕರ್ತವ್ಯದಲ್ಲಿದ್ದ ಸಿಬ್ಬಂದಿ ಬಂಟಪ್ಪ ದೂರು ಸ್ವೀಕರಿಸದೆ ಬೇರೆ ದೂರು ಬರೆದುಕೊಂಡಿದ್ದಾರೆ. ಅಲ್ಲದೆ, ಎಫ್‌ಐಆರ್‌ನಲ್ಲಿ ಆರೋಪಿಗಳ ಹೆಸರನ್ನು ಕೈ ಬಿಟ್ಟಿದ್ದಾರೆ. ಸೋಮವಾರ ರಾತ್ರಿ ನಿಜಾಮುದ್ದೀನ್ ಮತ್ತು ಸ್ನೇಹಿತ ಸೇರಿ ಹಲ್ಲೆ ನಡೆಸಿದ್ದರಿಂದ ಶಿವು ಮೃತಪಟ್ಟಿದ್ದಾನೆ. ಆದರೆ, ಪೊಲೀಸರು ಶಿವು ಎದೆ ನೋವಿನಿಂದ ಮೃತಪಟ್ಟಿದ್ದಾನೆ ಎಂದು ಹೇಳುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಪ್ರಕರಣವನ್ನು ದಾರಿತಪ್ಪಿಸುತ್ತಿದ್ದಾರೆ. ಆದ್ದರಿಂದ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಆಗಮಿಸಿ ನ್ಯಾಯ ದೊರಕಿಸಬೇಕು ಎಂದು ಒತ್ತಾಯಿಸಿ ಶವವನ್ನು ಠಾಣೆ ಎದುರು ಇಟ್ಟು ರಸ್ತೆ ತಡೆ ನಡೆಸಿದರು.

ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮಾತನಾಡಿ, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಸಮಾಜಕಲ್ಯಾಣ ಇಲಾಖೆಯಿಂದ ದೊರಕುವ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಕೈಬಿಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net