ಆಲದ ಮರ ಕಟಾವಿಗೆ ಮುಂದಾಗಿರುವುದಕ್ಕೆ ಆಕ್ರೋಶ

16-JUNE-GPT-6
ಗುಂಡ್ಲುಪೇಟೆ ತಾಲೂಕಿನ ವೀರನಪುರ ಕ್ರಾಸ್ ಸಮೀಪವಿರುವ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಆವರಣದಲ್ಲಿರುವ ಆಲದ ಮರಗಳು.
Published on

ಗುಂಡ್ಲುಪೇಟೆ: ಪಟ್ಟಣ ಹೊರವಲಯದ ವೀರನಪುರ ಕ್ರಾಸ್ ಬಳಿಯಲ್ಲಿರುವ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಆವರಣದಲ್ಲಿರುವ 50ಕ್ಕೂ ಹೆಚ್ಚು ವರ್ಷಗಳ ಆಲದ ಮರಗಳ ಕಟಾವಿಗೆ ಮುಂದಾಗಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಶಾಲೆ ಆವರಣದಲ್ಲಿ ಕಟ್ಟಡ ಕಾಮಗಾರಿ ಕೈಗೊಳ್ಳಲು ವಿಶಾಲವಾಗಿ ಬೆಳೆದು ಉತ್ತಮ ಆಮ್ಲಜನಕ ಹಾಗೂ ನೆರಳು ನೀಡುತ್ತಿರುವ ಆಲದ ಮರಗಳನ್ನು ಕತ್ತರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಹತ್ತಾರು ಎಕರೆ ಪ್ರದೇಶದ ವಿಸ್ತೀರ್ಣದಲ್ಲಿರುವ ಶಾಲಾವರಣದಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಮಾಡಲು ಸಾಕಷ್ಟು ಸ್ಥಳಾವಕಾಶವಿದ್ದರೂ ಅಧಿಕಾರಿಗಳು 9 ಆಲದ ಮರಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಅರಣ್ಯ ಇಲಾಖೆ ಬಫರ್ ವಲಯದ ಅಧಿಕಾರಿಗಳ ಸಲಹೆಯನ್ನು ನಿರ್ಲಕ್ಷಿಸಿ ಅನುಮತಿ ಪಡೆದುಕೊಂಡಿದ್ದು ಜೂನ್ 17ರಂದು ಬಹಿರಂಗ ಹರಾಜಿಗೂ ಸಿದ್ಧತೆ ನಡೆಸಿರುವುದು ಪರಿಸರಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಮರಗಳನ್ನು ಉಳಿಸಲು ನಾನಾ ಸಂಘಟನೆಗಳು ಹೋರಾಟಕ್ಕೆ ಇಳಿದಿವೆ. ಪರಿಸರವಾದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಕೈಗೊಂಡಿದ್ದಾರೆ. ಅಕ್ಕಪಕ್ಕದ ಗ್ರಾಮಸ್ಥರು ಇದರ ವಿರುದ್ಧ ದನಿ ಎತ್ತಿದ್ದಾರೆ. ಕರ್ನಾಟಕ ಕಾವಲು ಪಡೆ ಸದಸ್ಯರು ಶಾಲೆ ಹಾಗೂ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿ ಮರಗಳ ಹರಾಜು ಮತ್ತು ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಅರಣ್ಯ ಇಲಾಖೆ ಹರಾಜು ನಡೆಸಿದರೆ ಅರಣ್ಯ ಇಲಾಖೆ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಸಸಿಗಳನ್ನು ನೆಟ್ಟು ಅರಣ್ಯ ಬೆಳೆಸಬೇಕಾದ ಅರಣ್ಯ ಇಲಾಖೆಯೇ ಮರಗಳ ಹನನಕ್ಕೆ ಮುಂದಾಗಿರುವುದು ದುರ್ದೈವ ಎಂದು ಎಪಿಎಂಸಿ ನಿರ್ದೇಶಕ ಮಾಡ್ರಹಳ್ಳಿ ಮಹದೇವಪ್ಪ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net