ತಾಪಂ ಆಡಳಿತಾಧಿಕಾರಿ ತರಾಟೆಗೆ

TP savanur
Published on

ಸವಣೂರ: ಸಾಮಾನ್ಯ ಸಭೆ ಆಯೋಜನೆ ಕುರಿತಂತೆ ತಾಪಂ ಆಡಳಿತಾಧಿಕಾರಿ, ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರದೀಪ ಎಲ್. ಅವರನ್ನು ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ತರಾಟೆಗೆ ತೆಗೆದುಕೊಂಡರು.

ಪಟ್ಟಣದ ಹೊರವಲಯದ ತಾಪಂ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯ ಆರಂಭದಲ್ಲೇ, ಶಾಸಕರಿಗೆ ಮಾಹಿತಿ ನೀಡುವ ಸೌಜನ್ಯ ಇಲ್ಲವಾ, ನಿಮಗೆ ಮನಬಂದಂತೆ ಸಭೆ ಕರೆಯುತ್ತಿರಾ ಎಂದು ಅಧಿಕಾರಿಗಳ ಮೇಲೆ ಗರಂ ಆದರು. ತಹಸೀಲ್ದಾರ್ ಗಣೇಶ ಸವಣೂರ ಹಾಗೂ ತಾಪಂ ಇಒ ನವೀನಪ್ರಸಾದ ಕಟ್ಟಿಮನಿ ಅವರು ಸಮಜಾಯಿಸಿ ನೀಡಿದ ನಂತರ ಸಭೆ ಮುಂದುವರಿಸಿದರು.

ತಾಲೂಕಿನಲ್ಲಿ 650 ಜನರಿಗೆ ನಾಯಿ ಕಡಿತವಾಗಿದೆ ಎಂದು ವರದಿಯಾಗಿದೆ. ರೋಗಿಗಳ ಆರೋಗ್ಯ ಹಾಗೂ ನಾಯಿ ಕಡಿತ ತಡೆಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಎಫ್. ಹನಕನಹಳ್ಳಿ ಅವರನ್ನು ರುದ್ರಪ್ಪ ಲಮಾಣಿ ಪ್ರಶ್ನಿಸಿದರು.

ಹನಕನಹಳ್ಳಿ ಮಾತನಾಡಿ, ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ತಾಲೂಕು ಆರೋಗ್ಯ ಇಲಾಖೆ ಹಾಗೂ ಪಶು ಸಂಗೋಪನೆ ಇಲಾಖೆ ಜಂಟಿಯಾಗಿ ಜನರಲ್ಲಿ ಜಾಗೃತಿ ಮತ್ತು ನಾಯಿಗಳಿಗೆ ರೋಗ ನಿರೋಧಕ ಚಿಕಿತ್ಸೆ ನೀಡಲು ಪಶು ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು. ಪಶು ವೈದ್ಯ ಮಹೇಶ ಸವಣೂರು ಮಾತನಾಡಿ, ಬೀದಿನಾಯಿಗಳನ್ನು ಸ್ಥಳೀಯ ಆಡಳಿತ ಮತ್ತು ಸಾಕು ನಾಯಿಗಳನ್ನು ಮಾಲೀಕರು ಹಿಡಿದು ತಂದರೆ ಚುಚ್ಚುಮದ್ದು ಉಚಿತವಾಗಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಶಾಲೆಗಳಲ್ಲಿ ಗಣಿತ, ವಿಜ್ಞಾನ, ಇಂಗ್ಲಿಷ್ ಭಾಷೆಗಳ ಶಿಕ್ಷಕರು ಇರುವಂತೆ ನೋಡಿಕೊಳ್ಳಬೇಕು. ಶಿಕ್ಷಕರು ಇಲ್ಲದ ಶಾಲೆಗಳಿಗೆ ಹೆಚ್ಚುವರಿ ಶಿಕ್ಷಕರನ್ನು ನಿಯೋಜನೆ ಮಾಡಿ ವಾರದ ಮೂರು ದಿನಗಳವರೆಗೆ ಬೋಧನೆ ಮಾಡುವಂತೆ ನಿರ್ದೇಶನ ನೀಡಬೇಕು. ನರೇಗಾ ಯೋಜನೆಯಲ್ಲಿ ಅಂಗನವಾಡಿ, ಶಾಲೆಗಳ ಶೌಚಗೃಹ, ಬೋಜನಾಲಯ, ಶಾಲಾ ಕಂಪೌಂಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಬಿಆರ್‌ಸಿ ಎಂ.ಎನ್. ಅಡಿವೆಪ್ಪನವರ ಅವರಿಗೆ ರುದ್ರಪ್ಪ ಲಮಾಣಿ ಸೂಚಿಸಿದರು.

ತಹಸೀಲ್ದಾರ್ ಗಣೇಶ ಸವಣೂರ, ತಾಪಂ ಆಡಳಿತಾಧಿಕಾರಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರದೀಪ ಎಲ್., ತಾಪಂ ಇಒ ನವೀನಪ್ರಸಾದ ಕಟ್ಟಿಮನಿ, ತಾಪಂ ವ್ಯವಸ್ಥಾಪಕ ಡಿ.ಎಸ್. ಪ್ಯಾಟಿ, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. ಸಭೆಯನ್ನು ಅಕ್ಷರ ದಾಸೋಹ ನಿರ್ದೇಶಕ ಕಲ್ಮೇಶ ಸುಣದೊಳ್ಳಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net