

ಚನ್ನಗಿರಿ: ಕಾವೇರಿ ವ್ಯಾಜ್ಯ ಬಗೆಹರಿಸಲು ಕಾಂಗ್ರೆಸ್ ಸರ್ಕಾರ ಪ್ರಮಾಣಿಕವಾಗಿ ಪ್ರಯತ್ನ ಮಾಡುತ್ತಿಲ್ಲ. ರಾಜ್ಯದ ಜನರಿಗೆ ಮೀಸಲಿರುವ ನೀರನ್ನು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಬಿಡಬಾರದು ಎಂದು ಜೆಡಿಎಸ್, ಬಿಜೆಪಿ, ರೈತಸಂಘ ಹಾಗೂ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಪಟ್ಟಣದ ಗಾಂಧಿ ವೃತ್ತದಿಂದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ಕಲ್ಲುಸಾಗರ ರಸ್ತೆ, ಗಣಪತಿ ವೃತ್ತ ಹಾಗೂ ನೃಪತುಂಗ ರಸ್ತೆ ಮೂಲಕ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಪಿ.ಎಸ್. ಯರ‌್ರಿಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪಾಂಡೋಮಟ್ಟಿ ಡಾ. ಗುರುಬಸವ ಸ್ವಾಮಿಗಳು, ಕಾವೇರಿ ಕರ್ನಾಟಕ ಜನರಿಗೆ ಸೇರಿದೆ. ಅದನ್ನು ಬಳಸುವ ಹಕ್ಕು ನಮ್ಮವರಿಗೆ ಮಾತ್ರ ಇದೆ. ಕಿತ್ತುಕೊಳ್ಳುವಂತ ಕೆಲಸ ಬೇರೆ ಯಾರು ಮಾಡಬಾರದು ಎಂದರು.
ರಾಜ್ಯದ ಜನರಿಗೆ ಕುಡಿಯಲು ನೀರು ಇಲ್ಲದಿರುವ ಪರಿಸ್ಥಿತಿಯಲ್ಲಿ ಪಕ್ಕದ ರಾಜ್ಯಕ್ಕೆ ನೀರು ನೀಡುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಕಾವೇರಿ ನೀರು ಬಿಡಬಾರದು ಎಂದರು.
ಡಾ.ರಾಜ್‌ಕುಮಾರ್ ಅಭಿಮಾನಿ ಬಳಗದ ತಾಲೂಕು ಅಧ್ಯಕ್ಷ ಗೌ. ಹಾಲೇಶ್ ಮಾತನಾಡಿ, ನೆಲ, ಜಲ, ಭಾಷೆಗೆ ಕುತ್ತು ಬಂದ ಸಮಯದಲ್ಲಿ ಕನ್ನಡಿಗರೆಲ್ಲರೂ ಒಂದಾಗಿ ಹೋರಾಟ ಮಾಡಬೇಕು. ಕೆಆರ್‌ಎಸ್‌ನಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೂ ನೀರನ್ನು ತಮಿಳುನಾಡಿಗೆ ಬಿಡಲು ರಾಜ್ಯ ಸರ್ಕಾರ ಮುಂದಾಗಿರುವುದು ಸರಿಯಲ್ಲ ಎಂದರು.
ಪ್ರತಿಭಟನೆಯಲ್ಲಿ ಚನ್ನಗಿರಿ ಹಿರೇಮಠದ ಕೇದಾರಲಿಂಗ ಶಾಂತವೀರ ಶ್ರೀಗಳು, ರೈತ ಸಂಘದ ತಾಲೂಕು ಅಧ್ಯಕ್ಷ ಜಿ.ಎಸ್. ನಾಗೇಂದ್ರಪ್ಪ, ಗೌರವಾಧ್ಯಕ್ಷ ಡಿ.ಎಂ. ಜಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರಿಬಸಪ್ಪ, ಡಾ. ರಾಜ್ ಅಭಿಮಾನಿಗಳ ಸಂಘದ ಕಾರ್ಯದರ್ಶಿ ಬುಳ್ಳಿ ನಾಗರಾಜ್, ಜೆಡಿಎಸ್ ತಾಲೂಕು ಅಧ್ಯಕ್ಷ ಗಾಧ್ರಿರಾಜು, ಬಿಜೆಪಿ ತಾಲೂಕು ಅಧ್ಯಕ್ಷ ಗಿರೀಶ್ ಮರವಂಜಿ, ಉಪಾಧ್ಯಕ್ಷ ಕಾಯಿ ಮಂಜಣ್ಣ, ಹೊದಿಗೆರೆ ಯೋಗೇಶ್, ಕೆ. ಪಂಚಾಕ್ಷರಿ, ನಟರಾಜ್ ರಾಯ್ಕರ್ ಇದ್ದರು.