ಸರ್ಕಾರದ ವಿರುದ್ಧ ಖಾಸಗಿ ಬಸ್ ಮಾಲೀಕರ ಆಕ್ರೋಶ

21 smg 14 Bus stand
ಖಾಸಗಿ ಬಸ್ ನಿಲ್ದಾಣ ಸಮೀಪ ನಡುರಸ್ತೆಯಲ್ಲೇ ನಗರ ಸಾರಿಗೆ ಬಸ್ ನಿಲುಗಡೆ ಮಾಡಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿರುವುದು.
Published on

ಬೆಂಗಳೂರು: ರಾಜ್ಯ ಸರ್ಕಾರ ಖಾಸಗಿ ಬಸ್ಸುಗಳಲ್ಲೂ ಕಡ್ಡಾಯವಾಗಿ ಜಿಪಿಎಸ್, ಪ್ಯಾನಿಕ್ ಬಟನ್ ಮತ್ತು ಸಿಸಿ ಕ್ಯಾಮರಾ ಅಳವಡಿಸಲು ಆದೇಶ ಮಾಡಿದೆ. ಇದಕ್ಕೆ ಕೆರಳಿರುವ ಖಾಸಗಿ ಬಸ್ ಮಾಲೀಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಕಾಲೇಜು ವಿದ್ಯಾರ್ಥಿನಿ ಮೇಲೆ ಬಸ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣ ಬಳಿಕ ಕೇಂದ್ರ ಸರ್ಕಾರ ಎಲ್ಲಾ ಖಾಸಗಿ, ಸರ್ಕಾರಿ ಬಸ್ಸುಗಳಲ್ಲೂ ಜಿಪಿಎಸ್,ಪ್ಯಾನಿಕ್ ಬಟನ್, ಸಿಸಿ ಕ್ಯಾಮರಾ ಅವಳವಡಿಸಲೇಬೇಕೆಂದು ಆದೇಶ ಮಾಡಿತ್ತು. ಈ ಹಿನ್ನೆಲೆಯಲ್ಲಿ ಈಗಾಗಲೇ ಬಿಎಂಟಿಸಿಯಲ್ಲಿ ಯೋಜನೆ ಜಾರಿಗೆ ತರಲಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಇದೀಗ ಖಾಸಗಿ ಬಸ್ಸುಗಳಲ್ಲೂ ಕಡ್ಡಾಯವಾಗಿ ಜಿಪಿಎಸ್, ಪ್ಯಾನಿಕ್ ಬಟನ್, ಸಿಸಿ ಕ್ಯಾಮರಾ ಅಳವಡಿಸಲು ಆದೇಶ ಮಾಡಿದೆ. ಇದರಿಂದಾಗಿ ಕೆರಳಿರುವ ಖಾಸಗಿ ಬಸ್ ಮಾಲೀಕರು ಈಗಾಗಲೇ ಶಕ್ತಿ ಯೋಜನೆಯಿಂದ ಪ್ರಯಾಣಿಕರಿಲ್ಲದೆ ನಾವು ಬೀದಿಗೆ ಬಿದ್ದಿದ್ದೇವೆ. ಇಂತಹ ಸಂದರ್ಭದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಪ್ಯಾನಿಕ್ ಬಟ್ಟನ್, ಜಿಪಿಎಸ್ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರದ ವತಿಯಿಂದ ಹಣ ಕೊಡಲಿ ಹಾಕಿಸಿಕೊಳ್ಳುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಮೀಷನ್ ಆಸೆಗೆ ಆದೇಶ?
ಈಗಾಗಲೇ ಶಕ್ತಿ ಯೋಜನೆಯಿಂದ ನಮ್ಮಉದ್ಯಮ ನೆಲಕಚ್ಚಿದೆ. ಈ ಸಮಯದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಲು ಆಗುವುದಿಲ್ಲ. ಸತ್ತ ಹೆಣ್ಣಕ್ಕೆ ಶೃಂಗಾರ ಮಾಡಲು ನಮ್ಮ ಕೈಯಲ್ಲಿ ಆಗಲ್ಲ. ಇದರಿಂದ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಜಿಪಿಎಸ್, ಪ್ಯಾನಿಕ್ ಬಟ್ಟನ್, ಸಿಸಿ ಕ್ಯಾಮರಾ ಕಂಪನಿಗಳಿಂದ ಕಮೀಷನ್ ಸಿಗುತ್ತದೆ. ಕಮೀಷನ್ ಆಸೆಗೆ ಬಿದ್ದು, ಈ ಆದೇಶವನ್ನು ಸರ್ಕಾರ ಈಗ ಹೊರಡಿಸಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಖಾಸಗಿ ಬಸ್‌ಗಳನ್ನ ಟ್ರ್ಯಾಕ್ ಮಾಡಲು ಸಿದ್ದತೆ
ಸ್ಟೇಟ್ ಕಂಟ್ರೋಲ್ ರೂಂನಿಂದ ಬಸ್‌ಗಳ ಬಗ್ಗೆ ಮಾಹಿತಿಯನ್ನು ಸಾರಿಗೆ ಇಲಾಖೆ ಕಲೆ ಹಾಕಲಿದೆ. ದೆಹಲಿ ನಿರ್ಭಯ ಪ್ರಕರಣದ ಬಳಿಕ ಇದೀಗ ರಾಜ್ಯದಲ್ಲಿ ಖಾಸಗಿ ಬಸ್‌ಗಳನ್ನ ಟ್ರ್ಯಾಕ್ ಮಾಡಲು ಸಿದ್ದತೆ ನಡೆಸಿದೆ. ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಖಾಸಗಿ ಬಸ್‌ಗಳಲ್ಲೂ ಜಿಪಿಎಸ್ ಟ್ರ್ಯಾಕ್ ಸಿಸ್ಟಂ, ಬಸ್‌ನ ಡೋರ್ ಆಟೋಮ್ಯಾಟಿಕ್ ಮೂಲಕ ಪ್ಯಾನಿಕ್ ಬಟನ್ ಸಿಸ್ಟಂ ಅಳವಡಿಕೆಗೆ ಆದೇಶ ಹೊರಡಿಸಿದೆ. ಈ ಮೂಲಕ ಬಸ್ ಎಲ್ಲೆಲ್ಲಿ ಸಂಚಾರ ಮಾಡುತ್ತದೆ. ಯಾವ ಮಾರ್ಗದಲ್ಲಿ ಓಡುತ್ತಿದೆ ಎಂಬ ಮಾಹಿತಿ ಕಲೆ ಹಾಕಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net