

ವಿಜಯವಾಣಿ ಸುದ್ದಿಜಾಲ ಮಂಡ್ಯ
ಮೈಶುಗರ್ ಕಾರ್ಖಾನೆಯ 2013-14ನೇ ಸಾಲಿನ ವಾರ್ಷಿಕ ಲೆಕ್ಕಪತ್ರ ಮಂಡನೆ ಹಾಗೂ ಷೇರುದಾರರ 80ನೇ ವಾರ್ಷಿಕ ಸಾಮಾನ್ಯ ಸಭೆಗೆ ಸಂಬಂಧಿಸಿದಂತೆ ಸೋಮವಾರ ಆಯೋಜಿಸಿದ್ದ ಆನ್‌ಲೈನ್ ವಿಡಿಯೋ ಸಂವಾದ ಅರ್ಧಕ್ಕೆ ಮೊಟಕುಗೊಂಡಿತು.
ಕಾಟಾಚಾರಕ್ಕೆ ಎಂಬಂತೆ ಆಯೋಜಿಸಿದ್ದ ಸಂವಾದದಲ್ಲಿ ಅಸ್ಪಷ್ಟ ಮಾತುಗಳು, ದೃಶ್ಯಗಳಿಂದ ಸಭೆ ಗೊಂದಲದಲ್ಲಿ ಮುಳುಗಿತ್ತು. ಈ ಅವ್ಯವಸ್ಥೆ ವಿರುದ್ಧ ರೈತರು, ಷೇರುದಾರರು ಆಕ್ರೋಶ ವ್ಯಕ್ತಪಡಿಸಿದರು. ಪರಿಣಾಮ ಯಾವುದೇ ನಿರ್ಧಾರವಿಲ್ಲದೆ ಸಭೆ ಸ್ಥಗಿತಗೊಂಡಿತು.
ಕಾರ್ಖಾನೆಯ ಅಧ್ಯಕ್ಷ ಎಂ.ಮಹೇಶ್ವರರಾವ್ ನೇತೃತ್ವದಲ್ಲಿ ಮೂರು ಕಡೆ ವಿಡಿಯೋ ಸಂವಾದ ಏರ್ಪಡಿಸಲಾಗಿತ್ತು. ಬೆಂಗಳೂರು ಪ್ರಧಾನ ಕಚೇರಿ, ಮೈಶುಗರ್ ಆವರಣ ಹಾಗೂ ಮೈಶುಗರ್ ಪ್ರೌಢಶಾಲೆಯಲ್ಲಿ ವಿಡಿಯೋ ಸಂವಾದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕಾರ್ಖಾನೆ ವ್ಯಾಪ್ತಿಯಲ್ಲಿ 14 ಸಾವಿರ ಷೇರುದಾರರಿದ್ದು, ಈ ಪೈಕಿ ಕೇವಲ 150 ಜನರಿಗೆ ಮಾತ್ರ ಸಭೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿತ್ತು. ಕಂಪನಿಯ ಆವರಣದಲ್ಲಿ 50 ಷೇರುದಾರರು ಹಾಗೂ ಮೈಶುಗರ್ ಪ್ರೌಢಶಾಲೆ ಆವರಣದಲ್ಲಿ 100 ಷೇರುದಾರರು ಭಾಗವಹಿಸಿದ್ದರು.
ಸರಿಯಾಗಿ ಕೇಳಿಸದ ಧ್ವನಿ: ಸಭೆ ಆರಂಭದಲ್ಲಿ ಎಂ.ಮಹೇಶ್ವರರಾವ್ ಅವರು 2013-14ನೇ ಸಾಲಿನ ವಾರ್ಷಿಕ ಲೆಕ್ಕ ಮಂಡಿಸಲು ಆರಂಭಿಸಿದರು. 3 ಕಡೆ ಸಂವಾದ ಏರ್ಪಡಿಸಿದ್ದರಿಂದ ಯಾವ ಕಡೆ ಯಾರು ಮಾತನಾಡುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿರಲಿಲ್ಲ. ಪರಿಣಾಮ ಅಧಿಕಾರಿಗಳಿಂದ ಹಿಡಿದು ಷೇರುದಾರರು ಮಾತುಗಳು ಸ್ಪಷ್ಟವಾಗಿ ಕೇಳಿಸುತ್ತಿರಲಿಲ್ಲ. ಧ್ವನಿ ಹಾಗೂ ಎಲ್‌ಇಡಿ ಟಿವಿಯಲ್ಲಿನ ದೃಶ್ಯಗಳು ಸ್ಪಷ್ಟವಾಗಿ ಕೇಳಿಸದ ಪರಿಣಾಮ ಸಭೆ ಗೊಂದಲದ ಗೂಡಾಯಿತು.
ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತನಾಯಕಿ ಸುನಂದಾ ಜಯರಾಂ, ಸಿ.ಕುಮಾರಿ, ಕೆ.ಬೋರಯ್ಯ, ಎಂ.ಬಿ.ಶ್ರೀನಿವಾಸ್, ಮುದ್ದೇಗೌಡ ಇತರರು, ನೀವು ಮಾತನಾಡುವುದು ಯಾರಿಗೂ ತಿಳಿಯುತ್ತಿಲ್ಲ. ಈ ಸಭೆಯನ್ನು ರದ್ದು ಮಾಡಿ, ನೇರವಾಗಿಯೇ ಎಲ್ಲ ಷೇರುದಾರರು ಹಾಗೂ ರೈತರನ್ನು ಒಂದೆಡೆ ಸೇರಿಸಿ ಸಭೆ ನಡೆಸುವಂತೆ ಆಗ್ರಹಿಸಿದರು.
ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶವ್ಯಕ್ತಪಡಿಸಿದಲ್ಲದೆ, ಕಾಟಾಚಾರದ ಸಂವಾದ ಬೇಕಾಗಿಲ್ಲ. ಕೂಡಲೇ ಸಭೆ ರದ್ದುಪಡಿಸುವಂತೆ ಆಗ್ರಹಿಸಿ ಧಿಕ್ಕಾರದ ಘೋಷಣೆಗಳೊಂದಿಗೆ ಹೊರನಡೆದರು.
ಇನ್ನು ಸಭೆಯ ನಂತರ ಒ ಆ್ಯಂಡ್ ಎಂಗೆ ವಹಿಸುವ ವಿಚಾರದಲ್ಲಿ ಅಭಿಪ್ರಾಯ ಸಂಗ್ರಹ ಮಾಡಲು ಸಿದ್ಧತೆ ಕೈಗೊಳ್ಳಲಾಗಿತ್ತು. ಆದರೆ ಸಭೆ ಮೊಟಕುಗೊಂಡಿದ್ದರಿಂದ ಆ ಪ್ರಕ್ರಿಯೆಯೂ ಸ್ಥಗಿತಗೊಂಡಿತು. ಅಂತೆಯೇ ಗೊಂದಲದಿಂದ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಬಹುತೇಕ ರೈತರು ಕಾರ್ಖಾನೆಯನ್ನು ಒ ಆ್ಯಂಡ್ ಎಂ ಮುಖಾಂತರ ಚಾಲನೆ ನೀಡುವ ಕುರಿತು ತಮ್ಮ ಅಭಿಪ್ರಾಯ ಮಂಡಿಸಲು ಆಗಮಿಸಿದ್ದರು. ಸಭೆಯ ಮಧ್ಯದಲ್ಲೂ ಕೆಲವು ರೈತರು ಲೆಕ್ಕಪತ್ರ ಮಂಡಿಸುವುದನ್ನು ಬಿಟ್ಟು ಕಾರ್ಖಾನೆ ಯಾವಾಗ ಪ್ರಾರಂಭ ಮಾಡುತ್ತೀರಾ ಎಂಬ ಪ್ರಶ್ನೆಗಳನ್ನು ತೂರಿಬಿಟ್ಟರು. ಆ ಪ್ರಶ್ನೆಗಳಿಗೆ ಯಾವುದೇ ಉತ್ತರಗಳು ಅಧಿಕಾರಿ ವರ್ಗದಿಂದ ಸಿಗಲೇ ಇಲ್ಲ.
ಬಿಗಿ ಭದ್ರತೆ: ಕಾರ್ಖಾನೆಯ ಎರಡೂ ಕಡೆ ವಿಡಿಯೋ ಸಂವಾದ ಏರ್ಪಡಿಸಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ರೈತರು ಹಾಗೂ ಷೇರುದಾರರಿಗಿಂತ ಪೊಲೀಸರು, ಕಾರ್ಖಾನೆ ಅಧಿಕಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಮೈಶುಗರ್ ಕಾರ್ಖಾನೆ ವ್ಯಾಪ್ತಿಯಲ್ಲಿ 14 ಸಾವಿರ ಷೇರುದಾರರಿದ್ದು, ಬಹುತೇಕ ಷೇರುದಾರರಿಗೆ ಪುಸ್ತಕ ತಲುಪಿಲ್ಲ. ಇದರಲ್ಲಿ ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ. ಇದರಿಂದ ಷೇರುದಾರರಿಗೆ ಹಕ್ಕುಚ್ಯುತಿ ಉಂಟಾಗಿದೆ ಎಂದು ರೈತ ನಾಯಕಿ ಸುನಂದಾ ಜಯರಾಂ ಕಿಡಿಕಾರಿದರು.
ಸಂವಾದವನ್ನು ಸರಿಯಾಗಿ ವ್ಯವಸ್ಥೆ ಮಾಡಿಲ್ಲ. ಕಾಟಾಚಾರಕ್ಕೆ ಎನ್ನುವಂತೆ ಸಭೆ ಕರೆದಿರುವುದು ಸರಿಯಲ್ಲ. ಕಾರ್ಖಾನೆಯ ಅಧಿಕಾರಿಗಳು ಕಾನೂನು ಚೌಕಟ್ಟಿನಲ್ಲಿ ಏನು ಮಾಡುತ್ತಿದ್ದೀರಾ. ರೈತರು, ಷೇರುದಾರರು ಹಾಗೂ ಕಾರ್ಖಾನೆಯ ಜತೆ ಹುಡುಗಾಟ ಆಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, 6 ವರ್ಷದ ನಂತರ ಸಭೆ ನಡೆಸುತ್ತಿದ್ದೀರಾ. ಇದಕ್ಕೆ ಹೊಣೆ ಯಾರು?, ವಾರ್ಷಿಕ ವರದಿಯಲ್ಲಿ ಲೋಪದೋಷಗಳಿವೆ. ಲೆಕ್ಕಪರಿಶೋಧಕರ ವರದಿಗೆ ಲೆಕ್ಕಪರಿಶೋಧಕರ ಹೆಸರು ಹಾಗೂ ಸಹಿ ಮಾಡಿಲ್ಲ ಏಕೆ?, ಕಾರ್ಖಾನೆಯ ಸ್ಥಿರ ಆಸ್ತಿಯ ಮೇಲೆ ಸವಕಳಿ ಎಂದು ತೋರಿಸಿದ್ದೀರಾ ಪ್ರಶ್ನೆಗಳ ಸುರಿಮಳೆಗೈದರು.
ಯಾವುದೇ ಆಸ್ತಿಯು ವರ್ಷದಿಂದ ವರ್ಷಕ್ಕೆ ದರ ಹೆಚ್ಚಾಗುತ್ತದೆ. ಆದರೆ ಆಸ್ತಿಗೆ ಸವಕಳಿ ಎಂದು ತೋರಿಸಿರುವುದು ಏಕೆ?, ನಿಮ್ಮ ವರದಿ ಪ್ರಕಾರವೇ ಕಾರ್ಖಾನೆಯ ಯಂತ್ರಗಳು ಸುಸ್ಥಿತಿಯಲ್ಲಿವೆ ಎಂದು ಹೇಳಿದ್ದೀರಾ. ಆದರೂ ಇದ್ದ ಸ್ಥಿತಿಯಲ್ಲಿಯೇ ಒ ಆ್ಯಂಡ್ ಎಂಗೆ ಕೊಡಲು ಏಕೆ ನಿರ್ಧರಿಸಿದ್ದೀರಾ ಎಂದು ಕೆಲವು ಪ್ರಶ್ನೆಗಳನ್ನು ಮುಂದಿಟ್ಟರು. ಇದಕ್ಕೆ ಉತ್ತರ ನೀಡಿದ ನಂತರ ಸಾಮಾನ್ಯ ಸಭೆ ಕರೆಯಿರಿ ಎಂದು ಸಭೆಯಿಂದ ಹೊರನಡೆದರು.