ಶುದ್ಧ ಕುಡಿವ ನೀರಿಗಾಗಿ ಪ್ರತಿಭಟನೆಗಿಳಿದ ರೈತರು

dj mlk pratibatane
Published on


ಮೊಳಕಾಲ್ಮೂರು: ಮೊಳಕಾಲ್ಮೂರು ತಾಲೂಕಿನಲ್ಲಿ ಶುದ್ಧ ಕುಡಿವ ನೀರಿನ ಕೊರತೆ, ಸಾಂಕ್ರಾಮಿಕ ರೋಗಗಳ ಬಾಧೆ ತಡೆಗಟ್ಟುವಲ್ಲಿ ಗ್ರಾಪಂ ಆಡಳಿತಾಧಿಕಾರಿಗಳು ವಿಫಲರಾಗಿದ್ದಾರೆಂದು ಆರೋಪಿಸಿ ರೈತ ಸಂಘದ ಪದಾಧಿಕಾರಿಗಳು ತಾಪಂ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಗ್ರಾಮೀಣ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಕಸ ಹಾಕಲಾಗುತ್ತಿದೆ. ಸಾಂಕ್ರಾಮಿಕ ರೋಗಕ್ಕೆ ಇದು ಆಹ್ವಾನ ನೀಡುತ್ತಿದೆ. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಎಲ್ಲಿದ್ದಾರೆ ಕರೆಸ್ರಪೋ ಎಂದು ಪ್ರತಿಭಟನಾಕಾರರು ಕೂಗು ಹಾಕಿದರು.

ಪ್ರತಿ ಊರಲ್ಲೂ ವಿದ್ಯುತ್ ದೀಪಗಳು ಹಗಲು-ರಾತ್ರಿ ಎನ್ನದೆ ಉರಿಯುತ್ತಿವೆ. ಶಾಲೆ ಪಕ್ಕದಲ್ಲಿ ತಿಪ್ಪೆ ಗುಂಡಿಗಳಿವೆ. ಇದರ ಬಗ್ಗೆ ಕಿಂಚಿತ್ತೂ ಗಮನಹರಿಸುತ್ತಿಲ್ಲ. ಅವ್ಯವಸ್ಥೆ ಸರಿಪಡಿಸುವಂತೆ ಕಳೆದ 2 ತಿಂಗಳ ಹಿಂದೆಯೇ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ಕೃಷಿ ಪಂಪ್‌ಸೆಟ್‌ಗಳಿಂದ ಸರ್ಕಾರಕ್ಕೆ ಭಾರಿ ನಷ್ಟ ಉಂಟಾಗುತ್ತಿದೆ, ಅವುಗಳಿಗೆ ಮೀಟರ್ ಅಳವಡಿಸಬೇಕು ಎಂದು ನೆಪ ಹೇಳುವ ಸರ್ಕಾರ, ಅನವಶ್ಯಕ ಸೋರಿಕೆ ತಡೆಯುವತ್ತ ಗಮನಹರಿಸಬೇಕು. ಅನ್ನದಾತರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಸರಿಯಲ್ಲ ಎಂದರು.

ನರೇಗಾ ಯೋಜನೆ ಬಡ ಹಾಗೂ ಕಾರ್ಮಿಕ ವರ್ಗಕ್ಕೆ ವರದಾನವಾಗಿದ್ದರೂ ಅದು ಉಳ್ಳವರ ಪಾಲಾಗಿದೆ ಎಂದು ಆರೋಪ ಕೇಳಿ ಬಂದಿದೆ. ಅದಕ್ಕೆ ಆಸ್ಪದ ಕೊಡಬಾರದು. ರೈತರ ಹೊಲಗಳಿಗೆ ನಮ್ಮ ದಾರಿ, ನಮ್ಮ ಹೊಲ, ಸಾರ್ವಜನಿಕ ಶೌಚಗೃಹ ನಿರ್ಮಾಣಕ್ಕೆ ಒತ್ತುಕೊಡಬೇಕಿದೆ ಎಂದರು.

ಊರಿನ ಪ್ರತಿ ಶಾಲೆಯಲ್ಲಿ ಶೌಚಗೃಹ ಹಾಗೂ ಆಟದ ಮೈದಾನ ಲಭ್ಯತೆಗೆ ಸೂಕ್ತ ಕ್ರಮವಹಿಸಬೇಕು. ವಿಶೇಷವಾಗಿ ವಸತಿ ನಿಲಯಗಳಲ್ಲಿ ಸಮಗ್ರ ಮೂಲ ಸೌಕರ್ಯಗಳ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಪ್ರತಿ ಊರಲ್ಲಿ ಹಿಂದುಳಿದ ಸಮುದಾಯಗಳಿಗೆ ರುದ್ರಭೂಮಿ ಖಾತ್ರಿಪಡಿಸಬೇಕು. ನ್ಯಾಯಸಮ್ಮತ ಸಾರ್ವಜನಿಕ ಹಿತಾಸಕ್ತಿ ಬೇಡಿಕೆಗಳನ್ನು ಕಾಲ ಮಿತಿಯಲ್ಲಿ ಬಗೆಹರಿಸದಿದ್ದರೆ ಪ್ರತಿ ಗ್ರಾಪಂ ಮಟ್ಟದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ ತಾಪಂ ಇಒ ಎಚ್.ಹನುಮಂತಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ರೈತಸಂಘದ ರಾಜ್ಯ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ತಾಲೂಕು ಅಧ್ಯಕ್ಷ ಎಸ್.ಮಂಜುನಾಥ, ಕಾರ್ಯಾಧ್ಯಕ್ಷ ಚಂದ್ರಣ್ಣ, ರೈತ ಪ್ರಾಂತ ಸಂಘದ ತಾಲೂಕು ಉಪಾಧ್ಯಕ್ಷ ದಾನಸೂರನಾಯಕ, ಪಾಪಯ್ಯ, ಗುರಪ್ಪ, ತಿಪ್ಪೇಸ್ವಾಮಿ, ಮೂರ್ತಿ, ಕಾಮಯ್ಯ, ಮಹೇಶ್, ಸಣ್ಣಪ್ಪ, ಎಚ್.ವೀರಣ್ಣ, ನಾಗರಾಜ, ಕರಿಯಣ್ಣ, ಗೌತಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net