ಬೆಳೆಗಾರರ ಮತ್ತೊಂದು ಗುಂಪಿನ ಪ್ರತಿಭಟನೆ

TUM COS CHN
Published on

 ಚನ್ನಗಿರಿ: ಅಧಿಕಾರಿಗಳು ಪರಿಶೀಲಿಸಿದ ಅಡಕೆಯಲ್ಲಿ ಸರಿಯಿಲ್ಲ ಎಂದು ಗುರುತಿಸಲಾದ 3.5 ಕ್ವಿಂ.ನಲ್ಲೂ ಗುಣಮಟ್ಟದ ಅಡಕೆ ಇದೆ. ಇದನ್ನು ಮರು ಪರಿಶೀಲನೆ ಮಾಡುವಂತೆ ಆಗ್ರಹಿಸಿ ಅಡಕೆ ಬೆಳೆಗಾರರ ಒಂದು ಗುಂಪು ಶನಿವಾರ, ತುಮ್‌ಕೋಸ್ ಎದುರು ಪ್ರತಿಭಟನೆ ನಡೆಸಿತು.

ರೈತರಾದ ತಿಪ್ಪೇಸ್ವಾಮಿ, ಗಂಗಾಧರಪ್ಪ ತುಮ್‌ಕೋಸ್‌ಗೆ ಮಾರಿದ್ದ 71 ಚೀಲ ರಾಶಿ ಅಡಕೆ ಪರಿಶೀಲಿಸಲಾಗಿದೆ. ಗೊರಬಲು ಎಂದು ಗುರುತಿಸಿದ್ದರಲ್ಲೂ ಗುಣಮಟ್ಟದ ಅಡಕೆ ಇದೆ. ಅದನ್ನು ಆರಿಸಲು ಬಂದವರು ಉತ್ತಮ ಅಡಕೆಯನ್ನು ಗೊರಬಲು ಎಂದು ಗುರುತಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಬೆಳೆಗಾರರು ತಿರಸ್ಕರಿಸಿದ ಅಡಕೆಯನ್ನೇ ಸುರಿದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಸಂಸ್ಥೆ ಎದುರು ಪ್ರತಿಭಟನೆ ನಡೆಸಿ, ಕಳಪೆ ಅಡಕೆ ಖರೀದಿಸಲಾಗಿದೆ ಎಂದು ದೂರಿದ್ದರೋ ಅವರ ಅಡಕೆ ಚೀಲಗಳನ್ನೂ ಜನರ ಎದುರು ಸುರಿದು ಆರಿಸಿ ನಂತರ ಮಾರಾಟಕ್ಕೆ ಬಿಡಲಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತುಮ್‌ಕೋಸ್ ನಿರ್ದೇಶಕ ಎನ್. ಗಂಗಾಧರ್ ಮಾತನಾಡಿ, ಸಂಸ್ಥೆ ಪ್ರಾರಂಭವಾದಾಗಿನಿಂದ ಮೊದಲ ಬಾರಿಗೆ ಬೇರೊಬ್ಬ ಅಧಿಕಾರಿಗಳು ಭಾಗವಹಿಸಿ ಅಡಕೆ ಪರಿಶೀಲನೆ ನಡೆಸಿದ್ದಾರೆ.

ಸಂಸ್ಥೆಯ ಹೆಸರಿಗೆ ಧಕ್ಕೆ ತರಲು ಕೆಲವರು ವ್ಯವಸ್ಥಿತವಾಗಿ ಕೆಲಸ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪರಿಶೀಲನೆ ನೆಪದಲ್ಲಿ ಅಧಿಕಾರಿಗಳು ಬೇರೆಯವರನ್ನು ಕರೆತಂದು 71 ಚೀಲ ಅಡಕೆ ಆರಿಸಿದ್ದಾರೆ. 3.5 ಕ್ವಿಂ. ಅಂದರೆ ಅರ್ಧದಷ್ಟು ಅಡಕೆ ಉತ್ತಮವಾಗಿರುವುದು ನಿಜವಾಗಿದೆ.

ಈ ರೈತರ ಚೀಲಗಳ ಬಗ್ಗೆ ಆರೋಪಿಸಿದವರ ಅಡಕೆಯೂ ಪರಿಶೀಲನೆ ಆಗಲಿ ಎಂದು ಆಗ್ರಹಿಸಿದರು. ಉತ್ತಮ ಬೆಲೆ ನಿರೀಕ್ಷೆಯಲ್ಲಿ, ರೈತರು ವರ್ಷವೆಲ್ಲ ಕಷ್ಟಪಟ್ಟು ಬೆಳೆದ ಅಡಕೆಯನ್ನು ಸಂಸ್ಥೆಗೆ ತಂದು ಮಾರಾಟ ಮಾಡುತ್ತಾರೆ. ರೈತರ ಅನುಕೂಲತೆಗಾಗಿ ಶೇ. 2ರಷ್ಟು ಬೇರೆ ಅಡಕೆ ಇದ್ದರೂ ಮಾರಾಟಕ್ಕೆ ಸಂಸ್ಥೆಯು ವಿನಾಯಿತಿ ನೀಡಿದೆ. ಈ ಅವಕಾಶವನ್ನು ದುರುದ್ದೇಶಕ್ಕೆ ಬಳಕೆ ಮಾಡುವುದು ಸರಿಯಲ್ಲ ಎಂದರು.

ತುಮ್‌ಕೋಸ್ ಅಧ್ಯಕ್ಷ ಆರ್.ಎಂ. ರವಿ ಮಾತನಾಡಿ, ಅಧಿಕಾರಕ್ಕೆ ಬಂದ 5 ವರ್ಷದಲ್ಲಿ ಇಂತಹ ಘಟನೆಗಳಿಗೆ ಅವಕಾಶ ನೀಡಿಲ್ಲ. ನನ್ನ ಆಡಳಿತವಧಿಯಲ್ಲಿ ಅಂತಹ ಕೆಲಸ ನಡೆದಿದ್ದಲ್ಲಿ ಮೊದಲು ಅವರ ರಾಜೀನಾಮೆ ಪಡೆದು ಸಂಸ್ಥೆಯಿಂದ ಹೊರಗೆ ಕಳುಹಿಸುವ ಕೆಲಸ ಮಾಡುತ್ತಿದ್ದೆ. ಸಂಸ್ಥೆ ವಿರುದ್ಧ ಆರೋಪಿಸುವವರಿಗೆ ಜನರೇ ಪಾಠ ಕಲಿಸಲಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿದ್ದವರು ಇನ್ನೊಬ್ಬರ ಮೇಲೆ ಆರೋಪ ಮಾಡುವ ಮುನ್ನ ಯೋಚಿಸಲಿ ಎಂದರು.

ನಿರ್ದೇಶಕರಾದ ಎಂ.ಎಸ್. ದೇವೇಂದ್ರಪ್ಪ, ಎಂ.ಸಿ. ದೇವರಾಜ್, ನಾಗೇಂದ್ರಪ್ಪ, ಪುನೀತ್, ಎ.ಎಸ್. ಚಂದ್ರಶೇಖರ್, ಬಿ.ಎಸ್. ಯೋಗೇಶ್, ಉದಯಕುಮಾರ್ ಅಜ್ಜಿಹಳ್ಳಿ, ಮಲ್ಲಪ್ಪ ಹೊನ್ನೇಬಾಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net