ಆಡಳಿತ ವರ್ಗದ ವಿರುದ್ಧ ಆಕ್ರೋಶ, ಶಾಸಕ ಯತ್ನಾಳ ವಿರುದ್ಧ ಆರೋಪ, ಸಚಿವ ಎಂ.ಬಿ. ಪಾಟೀಲರಲ್ಲಿ ರಮೇಶ ಬಿದನೂರ ಮಾಡಿದ ಮನವಿ ಏನು ಗೊತ್ತಾ?

ramesh bidanur 1
ರಮೇಶ ಬಿದನೂರ, ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ನಿರ್ದೇಶಕ
Published on

ವಿಜಯಪುರ: ರಾಜಕೀಯ ವೈಷಮ್ಯ ಮತ್ತು ಅಲ್ಪಸಂಖ್ಯಾತರು ಹೆಚ್ಚು ಇರುವ ಪ್ರದೇಶವೆಂಬ ಕಾರಣಕ್ಕೆ ನಗರದ ಕೆಲ ಭಾಗದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿಲ್ಲ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ. ಪಾಟೀಲ ಅವರು ಕೂಡಲೇ ಮಳೆಹಾನಿಯಿಂದ ಸಮಸ್ಯೆ ಎದುರಿಸುತ್ತಿರುವ ಪ್ರದೇಶಗಳತ್ತ ಗಮನ ಹರಿಸಬೇಕೆಂದು ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ನಿರ್ದೇಶಕ ರಮೇಶ ಬಿದನೂರ ಮನವಿ ಮಾಡಿದರು.

ಅಲ್ಪಸಂಖ್ಯಾತರ ಮತಗಳಿಂದಲೇ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ಯತ್ನಾಳರು ಅಭಿವೃದ್ಧಿ ವಿಚಾರ ಬಂದಾಗ ಮಾತ್ರ ಅಲ್ಪಸಂಖ್ಯಾತರು ಹೆಚ್ಚಿರುವ ಪ್ರದೇಶಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಹೀಗಾಗಿ ನಗರದ ನಗರದ ದಕ್ಷಿಣ ಭಾಗದ ರಾಮನಗರ, ಕಣ್ಣನ್ ನಗರದಿಂದ ಸರದಾರ ವಲ್ಲಭಬಾಯಿ ಪಟೇಲ್ ವೃತ್ತದವರೆಗೆ ಮಳೆಯಿಂದಾಗಿ ಪ್ರತೀ ವರ್ಷ ಹಾನಿಯುಂಟಾಗುತ್ತಿದ್ದರೂ ಗಮನ ಹರಿಸುತ್ತಿಲ್ಲವೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಹರಿಹಾಯ್ದರು.

ಪ್ರತಿ ಮಳೆಗಾಲದಲ್ಲಿ ವಿಜಯಪುರ ನಗರ ಸಂಪೂರ್ಣ ಹದಗೆಡುತ್ತಿದ್ದು, ಜಿಲ್ಲಾಡಳಿತ ಹಾಗೂ ಮಹಾನಗರಪಾಲಿಕೆ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿವೆ. ಕಳೆದ ಐದಾರು ವರ್ಷಗಳಿಂದ ಮಳೆ ಮಳೆ ಹಾನಿಗೆ ಕಾರಣವೇನು? ಸಮಸ್ಯೆಯ ಪರಿಣಾಮ ಎಂಥದ್ದು? ಪರಿಹಾರ ಏನು? ಎಂಬುದರ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುತ್ತಲೇ ಬರಲಾಗಿದೆ. ಸುಮಾರು 2.5 ಕಿಮೀ ರಸ್ತೆ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಭ್ರಷ್ಟಾಚಾರದ ಪ್ರತೀಕವಾಗಿದೆ. ರಸ್ತೆ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆಯೇ ಇಲ್ಲ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಎಲ್ಲೂ ಅಂಡರ್ ಪಾಸ್ ನಿರ್ಮಿಸಿಲ್ಲ. ಹೀಗಾಗಿ ಸಮಸ್ಯೆ ಉಲ್ಭಣವಾಗುತ್ತಿದೆ ಎಂದರು.

2009 ರಲ್ಲಿ ಪ್ರವಾಹ ಬಂದಾಗ ಅಲ್ಲಿನ ಕೋಟೆಗೋಡೆ ಹತ್ತಿರದ ಕಂದಕ ಸ್ವಚ್ಛಗೊಳಿಸಲಾಗಿತ್ತು. ಅಲ್ಲಿಂದ ಈವರೆಗೆ ಯಾವುದೇ ಸ್ವಚ್ಛತೆ ಮಾಡಿಲ್ಲ. ಚರಂಡಿಯೂ ಸಮರ್ಪಕವಾಗಿಲ್ಲ. ಹೀಗಾಗಿ ಬಡತನದ ರೇಖೆಗಿಂತ ಕಡಿಮೆ ಇರುವ, ದುಡಿಯುವ ವರ್ಗದ ಜನರೇ ಹೆಚ್ಚಿರುವ ಈ ಭಾಗದಲ್ಲಿ ಜನ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದಾಗ ಅವರು ಒಳಚರಂಡಿ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರಾದರೂ ಈವರೆಗೂ ಕಾರ್ಯಗತಗೊಂಡಿಲ್ಲ. ಹೀಗಾಗಿ ಕೂಡಲೇ ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು. ಅಲ್ಲದೇ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗುವುದು ಎಂದ ಬಿದನೂರ ಅವರು, ಸೆಪ್ಟೆಂಬರ್ ಮೊದಲ ವಾರದೊಳಗಾಗಿ ದುರಸ್ಥಿ ಕಾರ್ಯ ಕೈಗೊಳ್ಳದೇ ಹೋದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net