ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ

Outrage against the police department
ಬಾಗಲಕೋಟೆ ನಗರಸಭೆ ಎದುರು ಸೋಮವಾರ ಹಮ್ಮಿಕೊಂಡಿದ್ದ ಹಿಂದು ಸುರಕ್ಷಾ ಆಂದೋಲನದಲ್ಲಿ ತಹಸೀಲ್ದಾರ ಅಮರೇಶ ಪಮ್ಮಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಹಿಂದು ಜಾಗರಣ ವೇದಿಕೆ ಪ್ರಾಂತ ಸಹ ಸಂಚಾಲಕ ಶ್ರೀಕಾಂತ ಹೊಸಕೇರಿ, ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಮುಖಂಡರಾದ ಜಿ.ಎನ್. ಪಾಟೀಲ, ಕಿರಣ ಪವಾಡಶೆಟ್ಟರ, ಅಯ್ಯನಗೌಡ ಹೆರೂರ ಇತರರು ಇದ್ದರು.
Published on

ಬಾಗಲಕೋಟೆ: ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಬೃಹತ್ ಹೋರಾಟದ ಕೈಗೊಳ್ಳಲಾಗುವುದು ಎಂದು ಹಿಂದು ಜಾಗರಣ ವೇದಿಕೆ ಪ್ರಾಂತ ಸಹ ಸಂಚಾಲಕ ಶ್ರೀಕಾಂತ ಹೊಸಕೇರಿ ಎಚ್ಚರಿಸಿದರು.

ಇಲ್ಲಿನ ನಗರಸಭೆ ಎದುರು ಸೋಮವಾರ ಹಮ್ಮಿಕೊಂಡಿದ್ದ ಹಿಂದು ಸುರಕ್ಷಾ ಆಂದೋಲನದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು, ಹಿಂದುಗಳ ಸುರಕ್ಷತೆಗೆ ಹಿಂದು ಕಾರ್ಯರ್ತರು ಹೋರಾಟ ಮಾಡುತ್ತಿದ್ದಾರೆ. ತಪ್ಪುಗಳು ಕಂಡಾಗ ಪ್ರಶ್ನಿಸುತ್ತಾರೆ. ಆದರೇ ಪೊಲೀಸ್ ಅಧಿಕಾರಿಗಳು ಹಿಂದುಗಳ ಪರ ಕಾರ್ಯಕರ್ತರನ್ನು ಟಾರ್ಗೇಟ್ ಮಾಡುವುದು ತರವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಪಿಎಸ್‌ಐ ಮಾಂಗ್, ಸಿಪಿಐ ರಾಮಣ್ಣ ಬಿರಾದಾರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ನಮ್ಮ ಮೇಲೆ ಆಕ್ರೋಶ ವ್ಯಕ್ತಪಡಿಸುವ ಬದಲು ಗಾಂಜಾ ಮಾರಾಟ ಮಾಡುವವರನ್ನು, ವೇಶ್ಯಾವಾಡಿಕೆಗೆ ಪ್ರೋತ್ಸಾಹಿಸುವವರನ್ನು ಹಿಡಿರಿ. ಮತಾಂಧ ಗೂಂಡಾಗಳ ಕಸಾಯಿ ಖಾನೆ ಬಂದ್ ಮಾಡಲಿ ಎಂದು ಸವಾಲು ಹಾಕಿದರು.

ಧರ್ಮಕ್ಕಾಗಿ ಹೋರಾಟ ಮಾಡುತ್ತೇವೆ. ಧರ್ಮ ರಕ್ಷಣೆ ಕಾರ್ಯ ಮುಂದುವರೆಯಲಿದೆ. ನ್ಯಾಯ ಕೇಳಿ ಬರುವವರ ಮೇಲೆಯೇ ಅನ್ಯಾಯವಾಗಬಾರದು. ಇಂದು ನಗರದ ಜನರಷ್ಟೇ ಭಾಗವಹಿಸಿದ್ದಾರೆ. ಮುಂದೆ ಜಿಲ್ಲೆಯ ಜನರು ಭಾಗವಹಿಸಲಿದ್ದಾರೆ. ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಸ್ಥಳದಲ್ಲಿಯೇ ಪ್ರತಿಭಟನೆ ಮಾಡುತ್ತಿದ್ದೇವೆ. ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ ಎಂದರು.

ಹಲ್ಲೆಗೆ ಒಳಗಾದ ವಿಕ್ರಮ ದೇಶಪಾಂಡೆ ಮಾತನಾಡಿ, ಹಿಂದೂಗಳಿಗೆ ಅನ್ಯಾಯ ಆದಾಗ ನ್ಯಾಯ ಕೇಳುವುದು ಅನ್ಯಾಯವೇ? ಹೋರಾಟ ಮಾಡುವುದು ಅನ್ಯಾಯವೇ? ಲಾಠಿಗೆ ಹೆದರುವುದಿಲ್ಲ, ಬೆದರಿಕೆಗೆ ಬಗ್ಗುವುದಿಲ್ಲ. ಅನ್ಯಾಯವಾದಾಗ ಕೇಳಲು ಬಂದೇ ಬರುತ್ತೇವೆ ಎಂದು ಹೇಳಿದರು.

ಹಿಂದೂಗಳಿಗೆ ಅನ್ಯಾಯವಾದಾಗ ದೂರು ದಾಖಲಿಸಲು ಹೋದರೆ ಅವರನ್ನು ಹೆದರಿಸಿ ದೂರು ಕೊಡದಂತೆ ಮಾಡಲಾಗುತ್ತಿದೆ. ಅದು ನಿಲ್ಲಬೇಕು. ದೂರು ತೆಗೆದುಕೊಂಡು ಅನ್ಯಾಯ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಇಂತಹ ವಿಷಯದಲ್ಲಿ ಸುಮ್ಮನೇ ಇರುವುದಿಲ್ಲ ಎಂದು ತಿಳಿಸಿದರು.

ನೀಲಕಂಠ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿಂದೂಗಳು ಒಗ್ಗಟ್ಟಾಗಿರಬೇಕು. ಒಗ್ಗಟ್ಟಿನ ಕೊರತೆಯಿಂದಾಗಿ ಬಿಸಿಲಿನಲ್ಲಿ ಕೂಡಬೇಕಾಗಿದೆ. ಹಲವು ಹಿಂದೂ ರಾಷ್ಟ್ರಗಳು ಮುಸ್ಲಿಂ ರಾಷ್ಟ್ರಗಳಾಗಿವೆ. ಇಲ್ಲಿಯೂ ಅದೇ ಪರಿಸ್ಥಿತಿ ಬರಲಿದೆ. ಶಾಸಕನ, ಸಚಿವನ ಪರ ನಿಲ್ಲವುದು ಸರಿಯಲ್ಲ. ಅವರ ಹಿಂಬಾಲಕರಾಗಿ ಕೆಲಸ ಮಾಡಬೇಡಿ. ಶಾಂತವಾಗಿದ್ದರೆ ಹೆದರಿಕೊಳ್ಳುತ್ತಾರೆ ಎಂದುಕೊಳ್ಳಬೇಡಿ. ಇನ್ನೊಮ್ಮೆ ಇಂತಹ ಘಟನೆ ನಡೆದರೆ ಪೊಲೀಸ್ ಠಾಣೆ ಎದುರು ಹೋರಾಟ ನಡೆಸಲಾಗುವುದು. ತಪ್ಪಿತಸ್ಥರ ಅಧಿಕಾರಿಗಳು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡ ಜಿ.ಎನ್. ಪಾಟೀಲ ಮಾತನಾಡಿ, ಹಿಂದೂ ರಾಷ್ಟ್ರದಲ್ಲಿ ಹಿಂದೂಗಳ ಧ್ವನಿ ಕುಗ್ಗಿಸುವುದು ಖಂಡನೀಯ. ಸರ್ಕಾರದ ಅಡಿಯಾಳಗಿ ಅಧಿಕಾರಿಗಳು ಕೆಲಸ ಮಾಡದೇ, ಕಾನೂನಿಗೆ ತೆಲೆ ಭಾಗಿ ಕೆಲಸ ಮಾಡಬೇಕು. ನಮ್ಮ ಹೋರಾಟ ಯಾರು ಹತ್ತಿಕ್ಕಲು ಸಾಧ್ಯವಾಗಿಲ್ಲ ಎಂದು ಹೇಳಿದರು. ತಹಸೀಲ್ದಾರ ಅಮರೇಶ ಪಮ್ಮಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಕಿರಣ ಪವಾಡಶೆಟ್ಟರ, ಅಯ್ಯನಗೌಡ ಹೆರೂರ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net