ಉಪಾಧ್ಯಕ್ಷರ ನಡವಳಿಕೆ ವಿರುದ್ಧ ಆಕ್ರೋಶ

Published on

ಗಂಗೊಳ್ಳಿ: ಗುಜ್ಜಾಡಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷರ ನಡವಳಿಕೆ ವಿರುದ್ಧ ಗುರುವಾರ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುಜ್ಜಾಡಿ ಗ್ರಾಪಂ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರು ಕೇಳಿದ ಎಲ್ಲ ಮಾಹಿತಿ ಒದಗಿಸಿದ್ದರೂ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಪದೇ ಪದೆ ಅನಗತ್ಯ ವಿಚಾರ ತೆಗೆದು ಪುನಃ ಗಲಾಟೆ ಮಾಡುವುದು ಸಮಂಜಸವಲ್ಲ. ಅವರು ಕೇಳಿದ ಪ್ರತಿಯೊಂದು ವಿಷಯಗಳಿಗೆ ಸ್ಪಷ್ಟ ಉತ್ತರ ನೀಡಲಾಗಿದೆ. ಆದರೂ ಸಭೆ ಕಾರ್ಯಕಲಾಪಗಳನ್ನು ವ್ಯರ್ಥ ಮಾಡುತ್ತಿರುವ ಗ್ರಾಪಂ ಉಪಾಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಆಗ್ರಹಿಸಿದರು.

ಗುಜ್ಜಾಡಿ ಗ್ರಾಪಂನಲ್ಲಿ ಅವ್ಯವಹಾರ ನಡೆದಿದೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದ ಗ್ರಾಪಂ ಉಪಾಧ್ಯಕ್ಷರ ನಡವಳಿಕೆ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕುಂದಾಪುರ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಅವರಿಗೆ ಈ ಹಿಂದೆ ಗ್ರಾಪಂ ವತಿಯಿಂದ ದೂರು ನೀಡಲಾಗಿತ್ತು. ಆದರೆ ಈವರೆಗೆ ಯಾವುದೇ ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ವಿರುದ್ಧ ಅವಿಶ್ವಾಸ ಗೊತ್ತುವಳಿ ನಿರ್ಣಯಕ್ಕೆ ಗ್ರಾಪಂ ಸದಸ್ಯರು ಸಿದ್ಧತೆ ನಡೆಸಿದ್ದಾರೆ. ಗ್ರಾಪಂ ಸದಸ್ಯರ ಆಡಳಿತಾವಧಿ ಒಂದು ವರ್ಷ ಬಾಕಿ ಇರುವಂತೆಯೇ ಅವಿಶ್ವಾಸ ಗೊತ್ತುವಳಿ ನಿರ್ಣಯದ ನಡೆ ಕುತೂಹಲ ಕೆರಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net