ಸಂಕೇತ್ ಪೂವಯ್ಯ ವಿರುದ್ಧ ಆಕ್ರೋಶ

27mdk05 mahesh jaini
Published on

ಮಡಿಕೇರಿ:

ಕಳೆದ ಚುನಾವಣೆ ಸಂದರ್ಭದಲ್ಲಿ ಜೆ.ಡಿ.ಎಸ್. ಬಿಟ್ಟು ಯಾವುದೋ ಆಮಿಷಕ್ಕೆ ಒಳಗಾಗಿ ಕಾಂಗ್ರೆಸ್ ಸೇರಿ ಈಗ ಎಂ ಎಲ್ ಸಿ ಕನಸು ಕಾಣುತ್ತಿರುವ ಸಂಕೇತ ಪೂವಯ್ಯ ಅವರ ಸರ್ಟಿಫಿಕೇಟ್ ಕರ್ನಾಟಕದ ಸಂಸತ್ ಸದಸ್ಯರುಗಳಲ್ಲೇ ಅನುದಾನ ಬಳಕೆಯಲ್ಲಿ ಅಗ್ರ ಸ್ಥಾನದಲ್ಲಿರುವ ಸಂಸದ ಪ್ರತಾಪ್ ಸಿಂಹ ಅವರಿಗೆ ಬೇಕಿಲ್ಲ ಎಂದು ಕೊಡಗು ಬಿಜೆಪಿ ವಕ್ತಾರ ಮಹೇಶ್ ಜೈನಿ ಹೇಳಿದ್ದಾರೆ. ಇತ್ತೀಚೆಗೆ ವಿರಾಜಪೇಟೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ಸಂಸದ ಪ್ರತಾಪ್ ಸಿಂಹ ಅವರ ನೇರ ಮತ್ತು ಸತ್ಯದ ನುಡಿಯಿಂದ ಮುಖಭಂಗಕ್ಕೆ ಒಳಗಾಗಿರುವ ಕೊಡಗಿನ ಕಾಂಗ್ರೆಸ್ ಮತ್ತು ಅದರ ವಕ್ತಾರ ಸಂಕೇತ್ ಪೂವಯ್ಯ ಗಲಿ ಬಿಲಿ ಗೊಂಡಿದ್ದಾರೆ.

ಮುಂದೆ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ನಾಯಕತ್ವ ಮತ್ತು ಯುವ ಸಂಸದ ಪ್ರತಾಪ್ ಸಿಂಹ ಅವರ ಅಭಿವೃದ್ಧಿ ಕೆಲಸಕ್ಕೆ ಕೊಡಗು ಮತ್ತು ಮೈಸೂರಿನ ಮತದಾರರರು ಮನ್ನಣೆ ನೀಡುವುದು ಖಚಿತ ಅಂದು ಅರಿತಿರುವ ಸಂಕೇತ್ ಪೂವಯ್ಯ ಸುಳ್ಳು ಆರೋಪಗಳನ್ನು ಸಂಸದ ಪ್ರತಾಪ್ ಸಿಂಹ ಮೇಲೆ ಮಾಡುತ್ತಿದ್ದಾರೆ ಎಂದು ಮಹೇಶ್ ಜೈನಿ ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ.

ಸಂಸದ ಪ್ರತಾಪ್ ಸಿಂಹ ವಿಶೇಷ ಪ್ರಯತ್ನದ ಮೂಲಕ ಕೇಂದ್ರದ ಎನ್ ಡಿ ಆರ್ ಎಫ್‌ನಿಂದ ಕೊಡಗಿನ ಸುಮಾರು ೪೪ ಸಾವಿರ ಕಾಫಿ ಬೆಳೆಗಾರರಿಗೆ ೧೩೪ ಕೋಟಿ ರೂ. ಪರಿಹಾರವನ್ನು ಕನಿಷ್ಠ ೫೬ ಸಾವಿರ ದ ವರೆಗೆ ನೀಡಿರುವುದು ಕೇಂದ್ರದ ನರೇಂದ್ರ ಮೋದಿ ಸರ್ಕಾರ. ಇದರ ಜತೆಯಲ್ಲೇ ಕರಿಕೆ, ಸಂಪಾಜೆ, ಚೆಂಬು, ಪೆರಾಜೆ ಭಾಗಗಳಲ್ಲಿ ಹಳದಿ ರೋಗಕ್ಕೂ ಮೊದಲ ಬಾರಿಗೆ ಪರಿಹಾರ ನೀಡಿರುವುದು ಸಂಕೇತ್ ಅವರಿಗೆ ತಿಳಿದಿರಲಿ. ಯಾವುದೇ ದಲ್ಲಾಳಿಗಳ ಹಾವಳಿ ಇಲ್ಲದೆ ನೇರವಾಗಿ ರೈತರ ಖಾತೆಗೆ ಹಣ ತಲುಪಿಸಿದ್ದು ನರೇಂದ್ರ ಮೋದಿ ಸರ್ಕಾರ. ಸಂಕೇತ್ ಅವರ ಪಕ್ಷದ ಸರ್ಕಾರವೇ ಅಧಿಕಾರದಲ್ಲಿ ಇದ್ದರೂ ಆನೆ ಹಾವಳಿ ಬಗ್ಗೆ ತುಟಿ ಬಿಚ್ಚದೆ ಕುಳಿತಿದ್ದ ಕಾಂಗ್ರೆಸ್ ವಕ್ತಾರ ಮುಂದೆ ಲೋಕಸಭೆ ಚುನಾವಣೆ ಇರುವುದನ್ನು ಗಮನಿಸಿ ಆನೆ ಹಾವಳಿ ಬಗ್ಗೆ ಪ್ರಸ್ತಾವ ಮಾಡಿರುವುದು ಹಾಸ್ಯಾಸ್ಯಸ್ಪದ. ಬಿಜೆಪಿ ಸರ್ಕಾರವಿದ್ದಾಗ ರೈಲ್ವೆ ಬ್ಯಾರಿಕೆಡ್ ನಿರ್ಮಾಣ, ಕಂದಕಗಳ ನಿರ್ಮಾಣ, ನಾಗರಹೊಳೆ ವ್ಯಾಪ್ತಿಯಲ್ಲಿ ಸೋಲಾರ್ ಬೇಲಿ ನಿರ್ಮಾಣ ಮಾಡಿದ್ದು ಇದೆಲ್ಲಾ ಸಂಕೇತ್ ಪೂವಯ್ಯ ಅವರಿಗೆ ಮರೆತೇ ಹೋಯಿತೇ ಎಂದು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net