ಪಂಚಾಚಾರ್ಯರ ವಿರುದ್ಧ ಆಕ್ರೋಶ, ಬಸವಣ್ಣನವರ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗಿಲ್ಲ ಎಂದ ಅರವಿಂದ ಕುಲಕರ್ಣಿ

ARAVINDA KULAKARNI PRESS MEET AGAINST RAMBHAPURI SHREE
ವಿಜಯಪುರ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ಹುಣಶ್ಯಾಳ ಪಿಬಿ ಶ್ರೀಮಠದ ಸಂಗನಬಸವ ಸ್ವಾಮೀಜಿ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು.
Published on

ವಿಜಯಪುರ: ‘ವಿಶ್ವಗುರು ಬಸವಣ್ಣನವರು ಪಂಚಾಚಾರ್ಯರ ತತ್ವಗಳಿಗೆ ಮಾರುಹೋಗಿ 12ನೇ ಶತಮಾನದಲ್ಲಿ ಪಂಚಾಚಾರ್ಯರ ಧರ್ಮ ಸ್ವೀಕರಿಸಿದರೆಂದು’ ಹೇಳಿರುವ ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ಹುಣಶ್ಯಾಳ ಪಿಬಿ ಶ್ರೀಮಠದ ಸಂಗನಬಸವ ಸ್ವಾಮೀಜಿ ಆಕ್ರೋಶ ಹೊರಹಾಕಿದರು.

ದಾವಣಗೆರೆಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ರಂಭಾಪುರಿ ಜಗದ್ಗುರುಗಳು ವಿಶ್ವಗುರು ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ‘ವೀರಶೈವ ಧರ್ಮದಲ್ಲಿ ಪಂಚಪೀಠಗಳಲ್ಲಿ ಇರುವಷ್ಟು ಮಹತ್ವ ಪಾವಿತ್ರೃ ಬೇರೆ ಮಠಗಳಿಗಿಲ್ಲ’ ಎನ್ನುವ ಮೂಲಕ ಇತರೆ ಮಠಗಳನ್ನು ಅವಮಾನಿಸಿದ್ದಾರೆ. ಹೀಗಾಗಿ ಕೂಡಲೇ ರಂಭಾಪುರಿ ಶ್ರೀಗಳು ತಮ್ಮ ಹೇಳಿಕೆ ವಾಪಸ್ ಪಡೆಯಬೇಕೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.

ಬಸವಣ್ಣನವರದ್ದು 12ನೇ ಶತಮಾನವಾದರೆ ಪಂಚಾಚಾರದ್ದು 15ನೇ ಶತಮಾನ. ಇದನ್ನು ಅರಿತುಕೊಳ್ಳದೆ ಮನಸ್ಸಿಗೆ ಬಂದಂತೆ ಮಾತನಾಡಿಕೊಳ್ಳುವುದು ಇವರ ಪೀಠಕ್ಕೆ ಶೋಭೆ ತರುವಂತಹುದ್ದಲ್ಲ. ಬಸವಣ್ಣನವರು ಹೊಸ ಪಂಗಡ ಅಥವಾ ಹೊಸ ಪಂಥವನ್ನು ಸೃಷ್ಟಿಸಿಲ್ಲವೆಂದು ಹೇಳುತ್ತಾ, ಬಸವ ತತ್ವಗಳನ್ನು ಪಂಚಪೀಠಗಳು ಪ್ರಚಾರ ಮಾಡುತ್ತಿವೆ ಆದರೆ ಬಸವ ತತ್ವದ ಅನುಯಾಯಿಗಳು ರೇಣುಕಾಚಾರ್ಯರ ತತ್ವ ಪ್ರಚಾರ ಮಾಡುವುದಿಲ್ಲವೆಂದಿರುವುದನ್ನು ಗಮನಿಸಿದರೆ ಪಂಚಾಚಾರ್ಯರಿಗೆ ತಮ್ಮ ತತ್ವದ ಮೇಲೆ ತಮಗೆ ನಂಬಿಕೆಯಿಲ್ಲ ಎಂಬುದು ಗೊತ್ತಾಗುತ್ತದೆ. ಪಂಚಾಚಾರ್ಯರ ತತ್ವಗಳು ಸುಳ್ಳು ಮತ್ತು ಗೊಳ್ಳಿನಿಂದ ಕೂಡಿದ್ದರಿಂದಲೇ ತಮ್ಮ ತತ್ವಗಳನ್ನು ಬಿಟ್ಟು ಬಸವಣ್ಣನವರ ತತ್ವಗಳನ್ನು ಪ್ರಚಾರ ಮಾಡಲು ಮುಂದಾಗಿದ್ದಾರೆ. ವೇದ, ಆಗಮ, ಶಾಸ್ತ್ರಗಳಲ್ಲಿ ಮತ್ತು ಬಸವಣ್ಣನವರ ಆದಿಯಾಗಿ ಎಲ್ಲ ಶರಣರು ರಚಿಸಿದ ವಚನ ಸಾಹಿತ್ಯದಲ್ಲಿ ಎಲ್ಲಿಯೂ ಪಂಚಾಚಾರ ಬಗ್ಗೆ ಉಲ್ಲೇಖವಿಲ್ಲ. ಇವರ ಹೇಳಿಕೆಯನ್ನು ಗಮನಿಸಿದರೆ ಪಂಚಾಚಾರ್ಯರಿಗೆ ಬಸವ ತತ್ವಗಳನ್ನಾಗಲಿ, ವಚನ ಸಾಹಿತ್ಯವನ್ನಾಗಲಿ ಬಿಟ್ಟರೆ ಇವರಿಗೆ ಬದುಕೆ ಇಲ್ಲ ಎಂದರು.

ಪಂಚಾಚಾರ್ಯರು ಹೇಳುವ ತತ್ವಗಳು ಯಾವವು? ಯಾವ ತತ್ವಗಳನ್ನು ಅನುಸರಿಸಿಕೊಂಡು ಬಂದಿದ್ದೀರಿ? ನಿಮ್ಮದು ವಚನ ಸಾಹಿತ್ಯವೋ? ಅಥವಾ ಶೈವ ಸಾಹಿತ್ಯವೋ? ನಿಮ್ಮ ಯಾವ ಸಾಹಿತ್ಯವನ್ನು ಬಸವಣ್ಣನವರು ಉಪಯೋಗ ಮಾಡಿದ್ದಾರೆಂದು ಬಹಿರಂಗ ಪಡಿಸಿರಿ ಎಂದು ಸವಾಲು ಎಸೆದರಲ್ಲದೇ, ಬಸವಣ್ಣನವರು ಸಮಾನತೆ ತಂದುಕೊಟ್ಟವರು. ಆದರೆ ಜಗದ್ಗುರುಗಳು ಎಂದು ಹೇಳಿಕೊಳ್ಳುವ ಪಂಚಾಚಾರ್ಯರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅವರಿಗೆ ಪ್ರತ್ಯೇಕ ಎತ್ತರದ ಆಸನದ ವ್ಯವಸ್ಥೆ ಬೇಕು. ಉಳಿದ ಪಂಚಾಚಾರ್ಯರರ ಪೀಠಕ್ಕೆ ಸಂಬಂಧಿಸಿದ ಮಠಾಧೀಶರು ಅವರ ಕೆಳಗಿನ ಆಸನದಲ್ಲಿ ಇರುತ್ತಾರೆ. ಇಂಥವರಿಗೆ ಸಮಾನತೆಯ ಅರ್ಥ ಗೊತ್ತಿದೆಯೇ ?. ಬಸವಣ್ಣನವರು ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲವೆಂದು ಹೇಳಿ ವಿಶ್ವಕ್ಕೆ ಗುರುವಾಗಿದ್ದಾರೆ. ಪಂಚಾಚಾರ್ಯರು ಹೆಚ್ಚೆಂದರೆ ಕರ್ನಾಟಕ ರಾಜ್ಯ ಸೇರಿದಂತೆ ದೇಶದ ಕೆಲವೇ ಕೆಲವು ರಾಜ್ಯಗಳಲ್ಲಿ ಇವರ ಪರಿಚಯ ಅಷ್ಟೇ ಎಂದರು.

ಬಸವಣ್ಣನವರು ಜಾತಿರಹಿತವಾದ ಲಿಂಗಾಯತ ಧರ್ಮವನ್ನು ಕರುಣಿಸಿದವರು. ಲಿಂಗಾಯತರಿಗೆ ಅಲ್ಪಸಂಖ್ಯಾತರ ಸ್ಥಾನ ಮಾನಕ್ಕಾಗಿ ಹೋರಾಟ ಮಾಡುವ ಸಂದರ್ಭದಲ್ಲಿ ಪಂಚಾಚಾರ್ಯರು ಅದನ್ನು ತಪ್ಪಿಸಲು ಅಡ್ಡಗಾಲು ಹಾಕಿರುವುದು ಏತಕ್ಕೆ? ಇದು ಇವರ ಮಾನವ ಧರ್ಮವೇ ಹೇಗೆ? ವೀರಶೈವರೂ ಲಿಂಗಾಯತ ಪದದ ವಿರೋಧಿಗಳು. ನೀವು ಚತುರಾಚಾರ್ಯರೇ? ಅಥವಾ ಪಂಚಾಚಾರ್ಯರೇ? ಚತುರಾಚಾರ್ಯರ ಪುರಾಣ ಏನು ಹೇಳುತ್ತದೆ? ಕೇದಾರದಲ್ಲಿ ನೀವು ಪ್ರಧಾನ ಅರ್ಚಕರೇ ಹೊರತು ಮಠಾಧಿಪತಿಯಲ್ಲ. ಪೂಜಾರಿ ಎಂಬ ಪದ ಜಗದ್ಗುರು ಪದವಲ್ಲ ಎಂಬುದನ್ನು ಅರಿತುಕೊಂಡು ಇನ್ನು ಮುಂದಾದರು ಬಸವಣ್ಣವರ ಕುರಿತು ಇಲ್ಲಸಲ್ಲದ ಹೇಳಿಕೆಗಳನ್ನು ಬಿಟ್ಟು ಅವರ ಅನುಯಾಯಿಗಳಾಗಿ ಮುಂದುವರೆದರೆ ಮಾತ್ರ ನೀವು ಬೆಳೆಯಲು ಸಾಧ್ಯ ಎಂದರು.

ವಿಜಯಾನಂದ ಕಾಶಪ್ಪನವರು ಪತ್ರಿಕಾ ಹೇಳಿಕೆ ನೀಡಿ ಕೂಡಲ ಸಂಗಮಕ್ಕೆ ಪಂಚಾಚಾರ್ಯರನ್ನು ಕರೆಯಿಸಿ ಪಾವನ ಮಾಡಲು ಹೊರಟ್ಟಿದ್ದಾರೆ. ಹಾಗಿದ್ದರೆ ಕೂಡಲ ಸಂಗಮ ಅಪವಿತ್ರವೇ ಇದನ್ನು ಅಪವಿತ್ರಗೊಳಿಸಿದವರು ಯಾರು ? ಇದನ್ನು ಸಾಬೀತು ಪಡಿಸಬೇಕೆಂದು ಅರವಿಂದ ಕುಲಕರ್ಣಿ ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net