

ಶ್ರೀರಂಗಪಟ್ಟಣ: ನಾಲೆ ಏರಿ ಒತ್ತುವರಿ ಹಾಗೂ ಮಾರಾಣಾಂತಿಕ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ನೀಡುವಂತೆ ತಾಲೂಕು ಕಚೇರಿ ಮುಂಭಾಗ ಧರಣಿನಿರತ ರೈತ ಹಾಗೂ ಪ್ರಗತಿಪರ ಹೋರಾಟಗಾರರು ಒಬ್ಬಟ್ಟು ತಯಾರಿಸಿ, ಜಾಗಟೆ ಭಾರಿಸಿ ಪ್ರತಿಭಟಿಸಿದರಲ್ಲದೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ತಾಲೂಕಿನ ದರಸಗುಪ್ಪೆ ಗ್ರಾಮದ ರೈತ ಹೋರಾಟಗಾರ ಪ್ರಭಾಕರ್ ಸಿಡಿಎಸ್ ಪಿಕಪ್ ನಾಲೆಯ ಒತ್ತುವರಿ, ಏರಿ ರಸ್ತೆಯ ದುರಸ್ತಿ ಹಾಗೂ ತಮ್ಮ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸೂಕ್ತ ನ್ಯಾಯ ಕೊಡಿಸುವಂತೆ 14 ದಿನಗಳಿಂದ ಧರಣಿ ನಡೆಸುತ್ತಿದ್ದೂ ಯುಗಾದಿ ಹಬ್ಬದಮದೂ ಹೋರಾಟ ನಿರತರಾಗಿದ್ದರು. ಇವರ ಈ ಹೋರಾಟಕ್ಕೆ ಮಂಡ್ಯ ರಕ್ಷಣಾ ವೇದಿಕೆ ಬಿ.ಶಂಕರ್ ಬಾಬು, ರೈತ ಮುಖಂಡ ಕಿರಂಗೂರು ಪಾಪು, ಕರವೇ ಅಧ್ಯಕ್ಷ ಚಂದಗಾಲು ಶಂಕರ್, ಪ್ರಜ್ಞಾವಂತರ ವೇದಿಕೆಯ ಚಿಕ್ಕತಮ್ಮೇಗೌಡ ಸೇರಿದಂತೆ ಹಲವು ಸಂಘಟನೆ ಮುಖಂಡರು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನಾನಿರತ ಸ್ಥಳದಲ್ಲೇ ನಾಡಧ್ವಜಗಳೊಂದಿಗೆ ಮಾವಿನ ತೋರಣ ಕಟ್ಟಿ, ಮಹಾತ್ಮ ಗಾಂಧೀಜಿ ಹಾಗೂ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು. ನಂತರ ಜಾಗಟೆ ಬಡಿದು, ಒಬ್ಬಟ್ಟು ತಯಾರಿಸಿ, ತಿನ್ನುವ ಮೂಲಕ ನ್ಯಾಯಕ್ಕಾಗಿ ತಾಲೂಕು ಆಡಳಿತ ಹಾಗೂ ನೀರಾವರಿ ಇಲಾಖೆಯ ಅಧಿಕಾರಿ-ಸಿಬ್ಬಂದಿ ಹಾಗೂ ಕ್ಷೇತ್ರದ ಶಾಸಕರ ವಿರುದ್ಧ ಕಹಿ ಹಬ್ಬದ ಆಚರಣೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟಗಾರ ಪ್ರಭಾಕರ್ ಮಾತನಾಡಿ, ದರಸಗುಪ್ಪೆ ಸರ್ವೇ 1,033ರ 62ನೇ ತೂಬಿನ ಸಿಡಿಎಸ್ ಪಿಕಪ್ ನಾಲೆಯು ಒತ್ತುವರಿ ಆಗಿದ್ದು, ಇದರ ತೆರವು ಹಾಗೂ ದುರಸ್ತಿ ಶೀಘ್ರವಾಗಿ ಆಗಬೇಕಿದೆ. ಈ ಬಗ್ಗೆ ಧ್ವನಿ ಎತ್ತಿ 14 ದಿನಗಳಿಂದ ಪ್ರತಿಭಟಿಸುತ್ತಿದ್ದರೂ ತಾಲೂಕು ಆಡಳಿತ ಹಾಗೂ ನೀರಾವರಿ ಇಲಾಖೆ ಕಿಂಚಿತ್ತೂ ಕ್ರಮವಹಿಸಿಲ್ಲ. ನ್ಯಾಯಾಂಗ ತನಿಖೆಯಾಗುವವರೆಗೆ ಹಾಗೂ ತಮ್ಮ ಮೇಲಿನ ಹಲ್ಲೆಗೆ ಸೂಕ್ತ ಪರಿಹಾರ ಕೊಡಿಸುವವರೆಗೆ ತಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಸಿದರು. ಇದಕ್ಕೆ ಸ್ಥಳದಲ್ಲಿದ್ದ ವಿವಿಧ ಸಂಘಟನೆಗಳ ಹೋರಾಟಗಾರರು ಸಹ ದನಿಗೂಡಿಸಿ ಬೆಂಬಲಿಸುವ ಘೋಷಣೆ ಮಾಡಿದರು.