ನಾಗಮಂಗಲ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಆಕ್ರೋಶ

19 NMG 01 (4)
ನಾಗಮಂಗಲದ ಅಂಬೇಡ್ಕರ್ ಭವನದಲ್ಲಿ ಪುರಸಭೆ ಆಡಳಿತಾಧಿಕಾರಿ ನಂದೀಶ್ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಶ್ರೀನಿವಾಸ್, ವರದರಾಜು ಇದ್ದರು
Published on

ನಾಗಮಂಗಲ: ಯಾವುದೇ ವಿಚಾರವನ್ನು ಸದಸ್ಯರ ಗಮನಕ್ಕೆ ತಾರದೆ ಪುರಸಭೆ ಮುಖ್ಯಾಧಿಕಾರಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಸದಸ್ಯರು ಮುಖ್ಯಾಧಿಕಾರಿ ವಿರುದ್ಧ ಕಿಡಿಕಾರಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಕ್ಷಾತೀತವಾಗಿ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಸಭೆ ನಡೆಸದಿದ್ದರೂ ನಡಾವಳಿಯಲ್ಲಿ ಸಭೆ ನಡೆಸಿರುವುದಾಗಿ ದಾಖಲು ಮಾಡಲಾಗಿದೆ ಎಂದು ಆರೋಪಿಸಿದರು.

ಜನರಿಂದ ಆಯ್ಕೆಗೊಂಡ ಸದಸ್ಯರನ್ನು ಕಡೆಗಣಿಸುವುದಾದರೆ ನಾವುಗಳು ಯಾಕೆ ಬೇಕು. ಸೌಜನ್ಯಕ್ಕೂ ಯಾವೊಂದು ವಿಚಾರವನ್ನು ಸದಸ್ಯರ ಗಮನಕ್ಕೆ ತಾರದೆ ಮುಖ್ಯಾಧಿಕಾರಿಯೇ ಎಲ್ಲ ತೀರ್ಮಾನ ಮಾಡುತ್ತಿದ್ದಾರೆ. ಸಾಮಾನ್ಯ ಸಭೆ ಮಾಡಿರುವುದಾಗಿ ಸಭಾ ನಡಾವಳಿ ಬರೆದುಕೊಂಡಿರುವ ಮುಖ್ಯಾಧಿಕಾರಿ ಶ್ರೀನಿವಾಸ್, ಯಾವೊಬ್ಬ ಸದಸ್ಯನ ಗಮನಕ್ಕೂ ತಾರದೆ ಹಾಗೂ ಸದಸ್ಯರ ಅನುಪಸ್ಥಿತಿಯಲ್ಲಿ ಸಾಮಾನ್ಯ ಸಭೆ ಹೇಗೆ ಮಾಡಿದರು? ಇದಕ್ಕೆ ಅವಕಾಶ ಮಾಡಿಕೊಟ್ಟವರು ಯಾರು ಎಂದು ಆಡಳಿತಾಧಿಕಾರಿ ಹಾಗೂ ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್ ಸಮ್ಮುಖದಲ್ಲಿಯೇ ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಸದಸ್ಯರು ಇದನ್ನು ಪಕ್ಷಾತೀತವಾಗಿ ಖಂಡಿಸಿದ್ದರಿಂದ, ಆಡಳಿತಾಧಿಕಾರಿ ನಂದೀಶ್ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂಬ ನಿರ್ಣಯಗಳನ್ನು ಸದಸ್ಯರು ಸಮ್ಮತಿಸಿಲ್ಲವೆಂದು ಬರೆಸುವ ಮೂಲಕ ಸದಸ್ಯರನ್ನು ಸಮಾಧಾನಪಡಿಸಿದರು.

ಕೆಲವು ಕಾಮಗಾರಿಗಳ ಅನುಮೋದನೆಗೆಂದು ಅನುದಾನ ಮೀಸಲಿಡಬೇಕೆಂಬ ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಪ್ರಸ್ತಾವನೆಗೆ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ವಾರ್ಡ್‌ಗಳಿಗೆ ಈವರೆಗೂ ಸೌಲಭ್ಯ ಕಲ್ಪಿಸಿಲ್ಲ. ಅಲ್ಲದೆ ತಾಲೂಕು ಆಡಳಿತಸೌಧ ಆವರಣದಲ್ಲಿ ಪಾರ್ಕ್ ನಿರ್ಮಾಣ, ಜೂನಿಯರ್ ಕಾಲೇಜು ಕಾಂಪೌಂಡ್ ನಿರ್ಮಾಣಕ್ಕೆ ಲಕ್ಷಾಂತರ ರೂ. ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಿರುವುದು ಸರಿಯಲ್ಲ. ಮೊದಲು ಸೌಲಭ್ಯ ಕಲ್ಪಿಸುವತ್ತ ಆದ್ಯತೆ ನೀಡಲಿ ಎಂದು ಒತ್ತಾಯಿಸಿದರು.


ಈ ಸಂದರ್ಭ ಮುಖ್ಯಾಧಿಕಾರಿ ಪ್ರತಿಕ್ರಿಯಿಸಿ, ನನ್ನ ಕಷ್ಟವನ್ನೂ ಅರ್ಥ ಮಾಡಿಕೊಳ್ಳಿ ಎಂದು ಮನವಿ ಮಾಡಿದಾಗ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ತಕ್ಷಣ ಮುಖ್ಯಾಧಿಕಾರಿ, ಇಲ್ಲಿನ ರಾಜಕೀಯ ಯಾವ ರೀತಿ ಎಂದು ನಿಮಗೆ ಗೊತ್ತಿಲ್ಲವೇ ಎಂದಾಗ ಸದಸ್ಯರು ಮತ್ತಷ್ಟು ಆಕ್ರೋಶಗೊಂಡರು. ಅಲ್ಲದೆ ರಾಜಕೀಯ ಒತ್ತಡಕ್ಕೆ ಸೌಲಭ್ಯಗಳನ್ನು ಕಡೆಗಣಿಸಿ ಪಾರ್ಕ್ ನಿರ್ಮಾಣ ಮಾಡುವ ನಡೆ ಸರಿಯಲ್ಲ ಎಂದು ಸದಸ್ಯರು ಆಕ್ರೋಶ ಹೊರಹಾಕಿದರು. ತದನಂತರ ಮಾತನಾಡಿದ ಆಡಳಿತಾಧಿಕಾರಿ, ಪ್ರಸ್ತಾವನೆಯಲ್ಲಿ ಸೌಲಭ್ಯಗಳಿಗೂ ಒತ್ತು ನೀಡುವುದಾಗಿ ಭರವಸೆ ನೀಡಿದರು.

ಅನಧಿಕೃತ ಘಟಕಗಳು ವಶಕ್ಕೆ: ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪುರಸಭೆಯ ಸುಪರ್ದಿಗೆ ತೆಗೆದುಕೊಳ್ಳುವಂತೆ ಸದಸ್ಯ ಶಂಕರಲಿಂಗೇಗೌಡ ಮನವಿ ಮಾಡಿದರು. ಈ ವಿಚಾರವಾಗಿ ಸಂಪೂರ್ಣ ಮಾಹಿತಿ ಪಡೆದ ಆಡಳಿತಾಧಿಕಾರಿ ಎಲ್ಲ ಅನಧಿಕೃತ ಘಟಕಗಳನ್ನು ಪುರಸಭೆಯ ಸುಪರ್ದಿಗೆ ತೆಗೆದುಕೊಳ್ಳುವಂತೆ ಸೂಚಿಸಿದರು.

ಪ್ರತಿಬಾರಿ ಸಭೆಯಲ್ಲಿಯೂ ವಾರ್ಡ್ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡುತ್ತೇವೆ. ಪರಿಹರಿಸುವುದಾಗಿ ಭರವಸೆ ನೀಡಿ ಸಭಾ ನಡಾವಳಿಯಲ್ಲಿಯೂ ಬರೆಯುತ್ತೀರಿ. ಆದರೆ ಈವರೆಗೂ ಯಾವೊಂದು ಕೆಲಸ ಮಾಡಿಲ್ಲ. ಕೆಲಸ ಮಾಡದಿದ್ದ ಮೆಲೆ ಯಾಕೆ ಭರವಸೆ ನೀಡಬೇಕು. ಜನರಿಗೆ ಹೆದರಿ ವಾರ್ಡ್‌ಗೆ ಹೋಗದಂತಾಗಿದೆ ಎಂದು 2ನೇ ವಾರ್ಡ್ ಸದಸ್ಯೆ ರತ್ನಮ್ಮ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು

ಸೂಪರ್ ಮಾರ್ಕೆಟ್‌ಗೆ ಚಾಲನೆ ನೀಡುವ ಕುರಿತಾಗಿ ಚರ್ಚಿಸಲಾಯಿತು. ಸಭೆಯಲ್ಲಿ ಸ್ಥಾಯಿಸಮಿತಿ ಅಧ್ಯಕ್ಷ ವರದರಾಜು, ಸದಸ್ಯರಾದ ತಿಮ್ಮಪ್ಪ, ರಮೇಶ್, ಚನ್ನಪ್ಪ, ವಿಜಯ್‌ಕುಮಾರ್, ಶಂಕರಲಿಂಗೇಗೌಡ, ಜಾಪರ್ ಷರೀಫ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net