

ಸುಂಟಿಕೊಪ್ಪ : ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಎಂಬ ಮಾತಿನಂತೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಸದಸ್ಯರ ಸ್ವ ಹಿತಾಸಕ್ತಿಗೆ ಬಲಿಯಾಗುತ್ತಿದ್ದು, ಸಾರ್ವಜನಿಕರು ಪಂಚಾಯಿತಿ ಆಡಳಿತ ಮಂಡಳಿ ವಿರುದ್ಧ ಹಿಡಿಶಾಪ ಹಾಕಿದ್ದಾರೆ.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಗ್ರೇಡ್ 1 ಪಂಚಾಯಿತಿಯ ಸಾಮಾನ್ಯ ಸಭೆಯನ್ನು ಗುರುವಾರ ಕರೆಯಲಾಗಿತ್ತು. ಸಭೆಗೆ ಸದಸ್ಯರಾದ ಪಿ.ಆರ್.ಸುನಿಲ್‌ಕುಮಾರ್, ಮಂಜುನಾಥ್, ಬಿ.ಎಂ.ಸುರೇಶ್, ಪಿ.ಎಫ್.ಸಬಾಸ್ಟೀನ್, ಶಾಂತಿ, ವಸಂತಿ, ಮಂಜುಳಾ, ಗೀತಾ ಹಾಗೂ ಹಸೀನಾ ಆಗಮಿಸಿದ್ದರು. ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಪ್ರಸಾದ್ ಕುಟ್ಟಪ್ಪ, ರಫೀಕ್‌ಖಾನ್, ಜೀನಾಸುದ್ದಿನ್, ಶಬ್ಬೀರ್, ಆಲಿಕುಟ್ಟಿ ಐ.ಸೋಮನಾಥ್, ಮಂಗಳಾ, ರೇಷ್ಮಾ, ವನಿತಾ ಹಾಗೂ ನಾಗರತ್ನ ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಕೋರಂ ಕೊರತೆಯಿಂದ ಸಭೆಯನ್ನು ಮುಂದೂಡಲಾಯಿತು. 3 ತಿಂಗಳಿನಿಂದ 2 ಸಾಮಾನ್ಯ ಸಭೆ ಹಾಗೂ 1 ವಿಶೇಷ ಸಭೆಯನ್ನು ಆಯೋಜಿಸಲಾಗಿದ್ದು, ಕೆಲವು ವೈಯಕ್ತಿಕ ಪ್ರತಿಷ್ಠೆಗೋಸ್ಕರ ಸಾಮಾನ್ಯ ಸಭೆ ಬಲಿಯಾಗುತ್ತಿದೆ ಎಂದು ಸಾರ್ವಜನಿಕರು ಸದಸ್ಯರ ವಿರುದ್ಧ ಆಕ್ರೋಶ ಹೊರಹಾಕಿದರು.
ಕಳೆದ 1 ವರ್ಷದಿಂದ ಸುಲಲಿತವಾಗಿ ಪಂಚಾಯಿತಿ ಸಾಮಾನ್ಯ ಸಭೆ ನಡೆಯುತ್ತಿದ್ದು, ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದ ಸಾಮಾನ್ಯ ಸಭೆಯು ಪರಿಪೂರ್ಣವಾಗಿ ನಡೆದಿತ್ತು. ಆದರೆ ಅಕ್ಟೋಬರ್ ತಿಂಗಳಿನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಹುತೇಕ ಸದಸ್ಯರು ಖಾಸಗಿ ಆಸ್ಪತ್ರೆಯೊಂದಕ್ಕೆ ನಿರಾಕ್ಷೇಪಣಾ ಪತ್ರ ನೀಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಗದ್ದಲ ಎಬ್ಬಿಸಿ ಸಭೆಯನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿ ಸಭೆಯನ್ನು ರದ್ದುಪಡಿಸಲಾಯಿತು. ಅನಂತರ ಸಾಮಾನ್ಯಸಭೆ ನಡೆಯದೆ ಗ್ರಾಮಸ್ಥರ 50ಕ್ಕೂ ಅಧಿಕ ಅರ್ಜಿಗಳು ವಿಲೇವಾರಿಯಾಗದೆ ಉಳಿದುಕೊಂಡಿವೆ. ಪಂಚಾಯಿತಿಯಲ್ಲಿ ಜನಸಾಮಾನ್ಯರ ಕೆಲಸ ಕಾರ್ಯಗಳಿಗೂ ಕತ್ತರಿ ಬಿದ್ದಿದೆ.
ಈ ಬಾರಿ 40ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು ಒಟ್ಟು 90 ಅರ್ಜಿಗಳು ಸಾಮಾನ್ಯ ಸಭೆಯ ಅನುಮೋದನೆಗಾಗಿ ಕಾದಿವೆ. ಗುರುವಾರವು ಸಭೆ ನಡೆಯದ ಹಿನ್ನೆಲೆಯಲ್ಲಿ ಅರ್ಜಿಗಳೂ ವಿಲೇವಾರಿಗೊಳ್ಳದೆ ಅರ್ಜಿ ಸಲ್ಲಿಸಿದ್ದ ಗ್ರಾಮಸ್ಥರು ಮತ್ತಷ್ಟು ದಿನ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ ಎಂದು ಅರ್ಜಿದಾರರು ದೂರಿದರು.
ಜನರ ಸಮಸ್ಯೆಗಿಂತ ಸ್ವಹಿತಾಸಕ್ತಿಯೇ ಹೆಚ್ಚು : ಗ್ರಾ.ಪಂ. ಸದಸ್ಯರಿಗೆ ಸುಂಟಿಕೊಪ್ಪದ ಪ್ರಮುಖ ಸಮಸ್ಯೆಗಳು ಕಣ್ಣಿಗೆ ಕಾಣದಂತಾಗಿದೆ. ಆರೋಗ್ಯ ಕೇಂದ್ರದ ಸುತ್ತಮುತ್ತಲು ಕಾಡು ಗಿಡಗಂಟಿಗಳು ಬೆಳೆದು ನಿಂತು ಹಾವು ಮುಂಗುಸಿಗಳ ಅವಾಸ ಸ್ಥಾನವಾಗಿದೆ. ಹಗಲು ಮತ್ತು ರಾತ್ರಿ ಪಾಳಯದಲ್ಲಿ ವೈದ್ಯಾಧಿಕಾರಿಗಳು ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಜನಸಾಮಾನ್ಯರ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ. ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಗ್ರಾಮಸ್ಥರಿಗೆ ಮನೆ ಕಟ್ಟಲು, ವ್ಯಾಪಾರಸ್ಥರಿಗೆ ವಾಣಿಜ್ಯ ಸಂಕೀರ್ಣ ಪರವಾನಗಿ, ಭೂದಾಖಲೆಯ 9 ಮತ್ತು 11ಎ ದಾಖಲಾತಿ ನೀಡಬೇಕಾಗಿದ್ದು, ಸಾಮಾನ್ಯ ಸಭೆ ನಡೆಯದೆ ಇರುವುದರಿಂದ ತೊಡಕುವುಂಟಾಗಿದೆ. ಸದಸ್ಯರಿಗೆ ಜನ ಸಾಮಾನ್ಯರ ಸಮಸ್ಯೆಗಿಂತ ಸ್ವಹಿತಾಸಕ್ತಿ ಹೆಚ್ಚಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.