

ಚಿಕ್ಕಮಗಳೂರು: ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ವರವಾಗುವ ಬದಲು ಶಾಪವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಸೆಕ್ಸ್ ಕಡಿಮೆ ಮಾಡಿದ್ದೆವು. ಆದರೆ ಈಗ ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡಿದೆ. ಹೀಗಾದರೆ ರಾಜ್ಯದ ಮುಂದಿನ ಗತಿ ಏನು? ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿಟಿ ರವಿ ಪ್ರಶ್ನಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಂ.ಬಿ.ಪಾಟೀಲ್ ಅವರು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯನ್ನು ಸಮರ್ಥನೆ ಮಾಡಿಕೊಂಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಈಗಾಗಲೇ ರಾಜ್ಯದಲ್ಲಿ ನಾಲ್ಕು ಜನ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ಕಡೆ ಗುತ್ತಿಗೆದಾರರು ಮತ್ತೊಂದು ಕಡೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಬೆಲೆ ಏರಿಕೆಯ ಬರೆಯು ರಾಜ್ಯದ ಜನರ ಮೇಲೆ ಬಿದ್ದಿದೆ. ಆದರೂ ಇದನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಉತ್ಪಾದನಾ ವೆಚ್ಚ ಜಾಸ್ತಿಯಾದರೆ ಇಲ್ಲಿ ಹೂಡಿಕೆ ಮಾಡಲು ಯಾವ ಬಂಡವಾಳಶಾಹಿಗಳು ಮುಂದೆ ಬರುವುದಿಲ್ಲ. ಈಗಾದಲ್ಲಿ ರಾಜ್ಯ ಸದ್ಯದಲ್ಲಿಯೇ ರೋಗಗ್ರಸ್ತ ರಾಜ್ಯವಾಗಲಿದೆ. ರಾಜ್ಯಕ್ಕೆ ಬರುವ ಉದ್ದಿಮೆಗಳೆಲ್ಲವೂ ನೆರೆ ರಾಜ್ಯದ ಪಾಲಾಗುತ್ತಿವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.