ಕಾನೂನು ಉಲ್ಲಂಘಿಸಿ ಧಾರ್ಮಿಕ ಸಭೆ

IMG-20200703-WA0138
Published on

ವಿಜಯವಾಣಿ ಸುದ್ದಿಜಾಲ ಶ್ರೀರಂಗಪಟ್ಟಣ

ಕರೊನಾ ಭೀತಿಯ ಹಿನ್ನೆಲೆಯಲ್ಲಿ ಸಭೆ, ಸಮಾರಂಭ ನಡೆಸದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಶುಕ್ರವಾರ ಪಟ್ಟಣದಲ್ಲಿ ಜೈನ ಸಮುದಾಯದವರು ಬೃಹತ್ ಧಾರ್ಮಿಕ ಸಭೆ ಮಾಡಿರುವುದು ಜನರ ಆಕ್ರೋಶದ ಜತೆಗೆ ಆತಂಕಕ್ಕೂ ಕಾರಣವಾಗಿದೆ.

ಜೈನ ಧರ್ಮದ ಚಾತುರ್ಮಾಸ್ಯ ಪ್ರವೇಶ ಅಂಗವಾಗಿ ಪಟ್ಟಣದ ಜೈನ ಬಸದಿಯಲ್ಲಿ ಆಯೋಜಿಸಿದ್ದ ಧಾರ್ಮಿಕ ಸಭೆಗೆ ಮಂಡ್ಯ, ಮೈಸೂರು, ಬೆಂಗಳೂರು ಮತ್ತಿತರ ಭಾಗಗಳಿಂದ ಸಮುದಾಯದ ನೂರಾರು ಜನರು ಆಗಮಿಸಿದ್ದರು.

ಸಮುದಾಯದ ಗುರುಗಳಾದ ಶ್ರವಣಕುಮಾರ ಕುಮುದ್ರತ ಜೈನ ಮುನಿಗಳು ಮೈಸೂರಿನಿಂದ ಪಟ್ಟಣಕ್ಕೆ ಆಗಮಿಸಿದ್ದಾರೆ. ಸ್ವತಃ ಗುರುಗಳೇ, ‘ಅಧಿಕ ಸಂಖ್ಯೆಯಲ್ಲಿ ಜನರು ಸೇರುವುದು ಬೇಡ’ ಎಂದು ತಿಳಿಸಿದ್ದರೂ, 600ಕ್ಕೂ ಹೆಚ್ಚು ಜನರು ಸೇರಿ ಆಚರಿಸುವ ಮೂಲಕ ನಿರ್ಲಕ್ಷೃ ತೋರಿದ್ದಾರೆ.

ಈಗಾಗಲೇ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಕರೊನ ಪ್ರಕರಣ ಖಾತೆ ತೆರೆದಿದೆ. ಇಂತಹ ಸಂದರ್ಭದಲ್ಲಿ ಮಂಡ್ಯ ಮತ್ತು ಹೊರ ಜಿಲ್ಲೆಗಳಿಂದ ಆಗಮಿಸಿ ಸಭೆ ಮಾಡುವ ಅವಶ್ಯಕತೆ ಏನಿತ್ತು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಆದರೆ, ಇದಕ್ಕೆ ಅಸಡ್ಡೆ ಉತ್ತರಗಳನ್ನು ನೀಡಿ ಧಮ್ಕಿ ಹಾಕಿದ್ದಾರೆನ್ನುವ ಆರೋಪಗಳು ಕೇಳಿಬಂದಿವೆ.

ಪಟ್ಟಣದಲ್ಲಿ ಜೈನ ಸಮುದಾಯದವರು ಧಾರ್ಮಿಕ ಸಭೆ ನಡೆಸಲು ಅನುಮತಿಗಾಗಿ ಸಲ್ಲಿಸಿದ್ದ ಮನವಿಯನ್ನು ನಿರಾಕರಿಸಲಾಗಿತ್ತು. ಆದರೂ, ಸಭೆ ನಡೆಸಿರುವ ಕುರಿತು ಸಾಕಷ್ಟು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಸಿಡಿಪಿಒ ಸೇರಿದಂತೆ ಇತರ ಅಧಿಕಾರಿಗಳನ್ನು ಕಳುಹಿಸಲಾಗಿತ್ತು. ಒಂದು ವೇಳೆ ನಿಯಮ ಉಲ್ಲಂಘಿಸಿರುವುದು ಸಾಬೀತಾದಲ್ಲಿ ಪ್ರಕರಣ ದಾಖಲಿಸಲಾಗುವುದು.

ಎಂ.ವಿ.ರೂಪಾ, ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net