

ಪಾವಗಡ: ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿರುವುದನ್ನು ವಿರೋಧಿಸಿ ವಾಲ್ಮೀಕಿ ಸಮುದಾಯ, ಅಹಿಂದ ಒಕ್ಕೂಟ, ದಲಿತಪರ ಒಕ್ಕೂಟ ಹಾಗೂ ಕೆ.ಎನ್.ರಾಜಣ್ಣ ಅಭಿಮಾನಿ ಬಳಗದಿಂದ ಗುರುವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟಿಸಿ, ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ವಾಲ್ಮೀಕಿ ಸಮುದಾಯ,ಕೆ.ಎನ್.ಆರ್ ಅಭಿಮಾನಿಗಳು ನಿರೀಕ್ಷಣಾ ಮಂದಿರದಲ್ಲಿ ಜಮಾವಣೆಗೊಂಡು ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ರಸ್ತೆ ತಡೆದು ಪ್ರತಿಭಟಿಸಿದರು.
ನಂತರ ತಾಲೂಕು ಕಚೇರಿ ಆವರಣಕ್ಕೆ ಬಂದು ಕೆ.ಎನ್ ರಾಜಣ್ಣ ಅವರನ್ನು ಸಚಿವ ಸಂಪುಟದಲ್ಲಿ ಸಚಿವರನ್ನಾಗಿ ಆಯ್ಕೆ ಮಾಡಿಕೊಳ್ಳಬೇಕೆಂದು ಆಗ್ರಹಿಸಿ, ತಹಸೀಲ್ದಾರ್ ಡಿ.ಎನ್.ವರದರಾಜು ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ವಾಲ್ಮೀಕಿ ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಪಾಳೇಗಾರ ಲೋಕೇಶ್ ಮಾತನಾಡಿ, ರಾಜ್ಯದ ಹಿಂದುಳಿದ ವರ್ಗಗಳ ನೇತಾರರು, ಪಕ್ಷತಿತ ನಾಯಕರು, ಸಹಕಾರಿ ಧುರೀಣರಾಗಿರುವ ರಾಜಣ್ಣ ಅವರನ್ನು ಯಾವುದೇ ನೋಟಿಸ್ ನೀಡದೇ ಏಕಾಏಕಿ ಸಂಪುಟದಿಂದ ವಜಾಗೊಳಿಸಿರುವುದು ಖಂಡನೀಯ ಎಂದರು.
ಕೆಒಎಪ್ ನಿರ್ದೇಶಕ ಅಂಜಿನಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ, ರೈತ ಮುಖಂಡ ನರಸಿಂಹರೆಡ್ಡಿ, ವಕೀಲ ನರಸಿಂಹ ಕೃಷ್ಣ, ನಾರಾಯಣಮೂರ್ತಿ, ಡಿಸಿಸಿ ಶ್ರೀನಿವಾಸ್, ಓಂಕಾರ್ ನಾಯಕ, ಲಕ್ಷಿ$್ಮ ನಾರಾಯಣ ಸೇರಿದಂತೆ ಸಮುದಾಯದ ಮುಖಂಡರು ಇದ್ದರು.