ಅಮಿತ್ ಷಾ, ಸಿ.ಟಿ.ರವಿ ವಿರುದ್ಧ ಆಕ್ರೋಶ

1
ದೊಡ್ಡಬಳ್ಳಾಪುರದ ತಾಲೂಕು ಕಚೇರಿ ವೃತ್ತದಲ್ಲಿ ಅಮಿತ್ ಶಾ, ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್‌ನಿಂದ ಪ್ರತಿಭಟನೆ ಮಾಡಲಾಯಿತು. ಕೆಪಿಸಿಸಿ ಸದಸ್ಯರಾದ ಜಿ.ಲಕ್ಷ್ಮೀಪತಿ, ಹೇಮಂತ್ ರಾಜು, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಪಿ ಜಗನಾಥ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ, ಕಸಬಾ ಬ್ಲಾಕ್ ಅಧ್ಯಕ್ಷ ಅಪ್ಪಿವೆಂಕಟೇಶ್, ದೊಡ್ಡಬಳ್ಳಾಪುರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ನಿರ್ದೇಶಕ ಅಂಜನಮೂರ್ತಿ ಇದ್ದರು.
Published on

ಕೇಂದ್ರ ಗೃಹ ಸಚಿವರನ್ನು ಗಡಿಪಾರು ಮಾಡಿ ಕಾಂಗ್ರೆಸ್ ಕಾರ್ಯಕರ್ತರ ಪಟ್ಟು

ದೊಡ್ಡಬಳ್ಳಾಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಗಡಿಪಾರು ಮಾಡಬೇಕು, ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ಅವಹೇಳನಕಾರಿ ಮಾತನಾಡಿರುವ ಸಿ.ಟಿ.ರವಿ ಅವರನ್ನು ವಿಧಾನ ಪರಿಷತ್ ಸದಸ್ಯ ಸ್ಥಾನದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಮಾಜಿ ಶಾಸಕ ವೆಂಕಟರಮಣಯ್ಯ ಮಾತನಾಡಿ, ಅಮಿತ್ ಶಾ ಅವರಿಗೆ ಗೃಹ ಸಚಿವರಾಗುವ ಅರ್ಹತೆ ಇಲ್ಲ. ಇಂತಹ ವ್ಯಕ್ತಿಗೆ ಗೃಹ ಸಚಿವ ಸ್ಥಾನದಂತಹ ಉನ್ನತ ಹುದ್ದೆ ನೀಡಲಾಗಿದೆ. ಅಂಬೇಡ್ಕರ್ ಬಗ್ಗೆ ಬಿಜೆಪಿಗೆ ಇರುವ ಭಾವನೆ ಅಮಿತ್ ಷಾ ಮೂಲಕ ಹೊರಬಿದ್ದಿದೆ. ಅಮಿತ್ ಷಾ ಅವರನ್ನು ಗೃಹ ಸಚಿವ ಹುದ್ದೆ ಯಿಂದ ಕೆಳಗೆ ಇಳಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ, ರಾಜ್ಯಸಭೆ ಎಲ್ಲಿಯೇ ಆಗಲಿ ಬಿಜೆಪಿ ಬೆಂಕಿ ಹಚ್ಚುವುದನ್ನೇ ಕಾಯಕ ಮಾಡಿಕೊಂಡಿದೆ. ಬಿಜೆಪಿಯವರಿಗೆ ಅಧಿಕಾರ ಬೇಕೇ ಹೊರತು ಅಭಿವೃದ್ಧಿಯಲ್ಲ. ಬರೀ ಬೆಂಕಿ ಹಚ್ಚುವುದನ್ನು ಕಾಯಕ ಮಾಡಿಕೊಂಡು ಜನರನ್ನು ಮರಳು ಮಾಡುವುದೇ ಆಗಿದೆ. ಉದಾಹರಣೆಗೆ ದೊಡ್ಡಬಳ್ಳಾಪುರದ ಅಭಿವೃದ್ಧಿ ದಿಕ್ಕು ಎತ್ತ ಸಾಗುತ್ತಿದೆ ಎಂಬುದು ಜನರ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಆದರೂ ಜನಪರ ಕಾಳಜಿ ಇರುವವರನ್ನು ಜನತೆ ಬೆಂಬಲಿಸಬೇಕು ಎಂದರು.

ಭೂ ನ್ಯಾಯಮಂಡಳಿ ಸದಸ್ಯ ಆದಿತ್ಯ ನಾಗೇಶ್, ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ ವಿಶ್ವನಾಥ್ ರೆಡ್ಡಿ, ಜಿಲ್ಲಾ ಎಸ್ಟಿ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ,ನಗರಸಭೆ ಸದಸ್ಯರಾದ ಎಚ್.ಎಸ್.ಶಿವಶಂಕರ್, ಆನಂದ್, ನಾಗರಾಜ್, ಅಖಿಲೇಶ್, ವಾಣಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇವತಿ ಅನಂತರಾಮ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net