

ಲಕ್ಷ್ಮೇಶ್ವರ: ‘ನಾವೂ ಮನುಷ್ಯರಲ್ಲವೇ? ನಮಗೆ ಬದುಕಲು ಹಕ್ಕಿಲ್ಲವೇ? ನಮ್ಮನ್ನೇಕೆ ನಿಕೃಷ್ಟವಾಗಿ ಕಾಣುತ್ತಿದ್ದೀರಿ? ದಯವಿಟ್ಟು ನಮಗೂ ಮೂಲಸೌಲಭ್ಯ ಕಲ್ಪಿಸಿ ಪುಣ್ಯಕಟ್ಟಿಕೊಳ್ಳಿ’ ಎಂದು ಪಟ್ಟಣದ 15ನೇ ವಾರ್ಡ್‌ನ ಗೋಸಾವಿ ಸಮುದಾಯದವರು ಅಳಲು ತೋಡಿಕೊಂಡರು. ಸಲಿಕೆ ಹಿಡಿದ ಸಮುದಾಯದ ಹೆಣ್ಣು ಮಕ್ಕಳು, ಯುವಕರು ಸ್ವತಃ ಚರಂಡಿ ಸ್ವಚ್ಛಗೊಳಿಸಿ ಅಸಮಾಧಾನ ವ್ಯಕ್ತಪಡಿಸಿದರು.
ತಾವು ವಾಸಿಸುವ ಪ್ರದೇಶದಲ್ಲಿ ತಿಂಗಳುಗಳಿಂದ ಸ್ವಚ್ಛತೆ ಮಾಡದ್ದರಿಂದ ಗಬ್ಬು ನಾರುತ್ತಿದ್ದ ಚರಂಡಿಯನ್ನು ಸಾಮೂಹಿಕವಾಗಿ ಶುಕ್ರವಾರ ಬೆಳಗ್ಗೆ ಸ್ವಚ್ಛಗೊಳಿಸುವ ಮೂಲಕ ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಮುದಾಯದ ಹಿರಿಯ ಬಾಳಪ್ಪ ಗೋಸಾವಿ ಮಾತನಾಡಿ, ಕಳೆದ 60 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. 30ಕ್ಕೂ ಹೆಚ್ಚು ಕುಟುಂಬಗಳ 150ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದು, ಒಂದು ಶೌಚಗೃಹವೂ ಇಲ್ಲ. ನಮ್ಮ ಸಮುದಾಯದ ಹೆಣ್ಣು ಮಕ್ಕಳು ರಾತ್ರಿಯೇ ಶೌಚ ಕ್ರಿಯೆ ಮುಗಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಸ್ವಚ್ಛತೆಯನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಗುಡಿಸಲುಗಳ ಹತ್ತಿರವೇ ದೇವಸ್ಥಾನ ಇರುವುದರಿಂದ ಮತ್ತು ಪಟ್ಟಣದ ಕೇಂದ್ರ ಭಾಗ ಇದಾಗಿದ್ದರಿಂದ ಸ್ವಚ್ಛತೆ ಮಾಡುವಂತೆ, ಚರಂಡಿ ನಿರ್ಮಾಣ, ವಸತಿ ನಿವೇಶನ, ಶೌಚಗೃಹ, ಬೀದಿ ದೀಪ, ಕುಡಿಯುವ ನೀರಿಗಾಗಿ ಕಳೆದ ಅನೇಕ ವರ್ಷಗಳಿಂದ ಮನವಿ ಸಲ್ಲಿಸುತ್ತ ಬಂದಿದ್ದರೂ ಪ್ರಯೋಜನವಾಗಿಲ್ಲ. ಶೌಚಗೃಹ ಚರಂಡಿ ನಿರ್ಮಾಣಕ್ಕೆ ಹಣ ಬಂದರೂ ಕೆಲಸ ಮಾಡಿಲ್ಲ. ಆಶ್ರಯ ನಿವೇಶನಕ್ಕೆ ಹಣ ಪಡೆದುಕೊಂಡಿದ್ದರೂ ನಿವೇಶನವಿಲ್ಲ. ಎಲ್ಲ ದಾಖಲೆಗಳು ನಮ್ಮ ಹತ್ತಿರ ಇವೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ನಮ್ಮ ಗೋಳು ಕೇಳುವ ಜನಪ್ರತಿನಿಧಿಗಳು ಮತ್ತೇ ಇತ್ತ ಕಣ್ಣೆತ್ತಿಯೂ ನೋಡಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಮ ಗೋಸಾವಿ, ನಿಖಿಲ ಗೋಸಾವಿ, ಶಿವರಾಜ ಗೋಸಾವಿ, ಗೋವಿಂದ ಗೋಸಾವಿ, ಬೇಬವ್ವ ಗೋಸಾವಿ, ಜ್ಯೋತಿ ಗೋಸಾವಿ ಇತರರಿದ್ದರು.
ಆಕ್ರೋಶದ ಬಳಿಕ ಎಚ್ಚೆತ್ತ ಅಧಿಕಾರಿಗಳು
ಗೋಸಾವಿ ಜನರೇ ಚರಂಡಿ ಸ್ವಚ್ಛಗೊಳಿಸಿದ ವಿಡಿಯೋ, ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ ಎಚ್ಚೆತ್ತ ಪುರಸಭೆಯವರು ಪೌರ ಕಾರ್ಮಿಕರಿಂದ ಚರಂಡಿ ಸ್ಚಚ್ಛಗೊಳಿಸಿ ತ್ಯಾಜ್ಯ ಎತ್ತುವಳಿ ಕಾರ್ಯ ಮಾಡಿದರು. ಈ ಕುರಿತು ಮುಖ್ಯಾಧಿಕಾರಿ ಮಹೇಶ ಹಡಪದ ಪ್ರತಿಕ್ರಿಯಿಸಿ, ಗೋಸಾವಿ ಸಮಾಜದವರು ಚರಂಡಿ ನಿರ್ಮಾಣಕ್ಕೆ ಕೊಟ್ಟ ಮನವಿಯನ್ವಯ ಸ್ಥಳ ಪರಿಶೀಲಿಸಿ ಚರಂಡಿ ನಿರ್ಮಾಣಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಅನುದಾನದ ಲಭ್ಯತೆಯನ್ವಯ ಚರಂಡಿ ನಿರ್ಮಿಸಲಾಗುವುದು. ಪೌರ ಕಾರ್ಮಿಕರ ಕೊರತೆಯಿಂದ ಸ್ವಚ್ಛತೆ ಕಾರ್ಯ ವಿಳಂಬವಾಗಿದೆ. ಸ್ವಚ್ಛತೆ ಮತ್ತು ಬೇಡಿಕೆಗಳಿಗೆ ಆದ್ಯತೆ ನೀಡಲಾಗುವುದು ಎಂದರು.
ಭಿಕ್ಷೆ ಬೇಡಿ ಶೌಚಗೃಹ ನಿರ್ಮಿಸಿಕೊಳ್ಳುತ್ತೇವೆ. ನಾವು ವಾಸಿಸುವ ಪ್ರದೇಶದ ಸುತ್ತಲೂ ಚರಂಡಿ ವ್ಯವಸ್ಥೆ ಇಲ್ಲ. ನಿಲ್ಲುವ ಕೊಳಚೆ, ತ್ಯಾಜ್ಯ ಸ್ವಚ್ಛಗೊಳಿಸುವುದಿಲ್ಲ. ಸೊಳ್ಳೆ ಕಡಿತ, ಗಬ್ಬು ವಾಸನೆ, ರೋಗ ರುಜಿನಗಳೊಂದಿಗೆ ನರಕಯಾತನೆ ಅನುಭವಿಸುತ್ತಿದ್ದೇವೆ. ನಮ್ಮ ಗೋಳು ಯಾರೋ ಕೇಳೋರಿಲ್ಲ.. ನಮಗೆ ಚರಂಡಿ, ಶೌಚಗೃಹ ನಿರ್ಮಾಣಕ್ಕೆ ಪರವಾನಗಿ ಕೊಡಿ. ನಮ್ಮಿಂದ ಪುರಸಭೆಗೆ ಯಾವುದೇ ಆರ್ಥಿಕ ಹೊರೆ ಬೇಡ. ನಾವೇ ಭಿಕ್ಷೆ ಬೇಡಿ ಚರಂಡಿ, ಶೌಚಗೃಹ ನಿರ್ಮಿಸಿಕೊಳ್ಳುತ್ತೇವೆ. ಬಿಲಾಬಾಯಿ ಗೋಸಾವಿ, ಸ್ಥಳೀಯ ನಿವಾಸಿ