

ಮಲೇಬೆನ್ನೂರು: ಭದ್ರಾ ನಾಲೆಗೆ ನೀರು ಹರಿಸುವಂತೆ ಆಗ್ರಹಿಸಿ ಕೊಮಾರನಹಳ್ಳಿ ಹೆಳವನಕಟ್ಟೆ ಲಕ್ಷ್ಮೀ ರಂಗನಾಥ ದೇವಾಲಯದ ಕೆರೆ ದಂಡೆ ಮೇಲೆ ಗುರುವಾರ ಭದ್ರಾ ಅಚ್ಚುಕಟ್ಟು ಕೊನೆ ಭಾಗದ ರೈತರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಕಾಡಾ ಸಮಿತಿ ತೀರ್ಮಾನದಂತೆ ಸತತ 100 ದಿನ ನೀರು ಹರಿಸಿ, ಭತ್ತದ ಬೆಳೆಗಾರರನ್ನು ರಕ್ಷಿಸಬೇಕು ಎಂದು ಆಗ್ರಹಿಸಿ ಪ್ರತಿಭಟನಾ ನಿರತ ರೈತನೊಬ್ಬ ವಿಷ ಸೇವಿಸಲು ಯತ್ನಿಸಿದ್ದು, ಇತರೇ ರೈತರು ತಡೆದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ಮಾತನಾಡಿ, ಒಂದೆರಡು ದಿನದಲ್ಲಿ ನೀರು ಹರಿಸದಿದ್ದಲ್ಲಿ ಭತ್ತದ ಬೆಳೆ ಒಣಗಲಿದೆ. ಇದಕ್ಕೆ ಸರ್ಕಾರ, ಸಚಿವರು ನೇರ ಹೊಣೆಗಾರರಾಗಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೇಲ್ಭಾಗದ ತೋಟದ ಬೆಳೆಗಾರರಿಗೆ ಬೇಸಿಗೆ ವೇಳೆ ನೀರು ಹರಿಸಲು ಕೊನೆ ಭಾಗದ ರೈತರ ಕಗ್ಗೊಲೆ ಮಾಡಿದೆ ಎಂದು ಸರ್ಕಾರ, ಸಚಿವರ ವಿರುದ್ಧ ರೈತರು ಧಿಕ್ಕಾರ ಕೂಗಿದರು.
ತಾಪಂ ಮಾಜಿ ಸದಸ್ಯ ಐರಣಿ ಅಣ್ಣೇಶ್ ಮಾತನಾಡಿ, ಅಡಕೆ, ತೆಂಗಿನ ಬೆಳೆಗಾರರ ರಕ್ಷಿಸಲು ಭತ್ತದ ಬೆಳೆಗಾರರನ್ನು ಕಾಡಾ ಸಂಕಷ್ಟಕ್ಕೆ ಸಿಲುಕಿಸಿದೆ. ನಮ್ಮ ಅನ್ನಕ್ಕೆ ಕಲ್ಲು ಹಾಕಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಕಾಡಾ ಸಮಿತಿ ಮೊದಲು ನಿರ್ಧರಿಸದಂತೆ ನಾಲೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿ, ಐಸಿಸಿ ನಿರ್ಧಾರದ ಹಿಂದೆ ನಮ್ಮ ಭಾಗದ ರೈತರ ಸಂಕಷ್ಟಕ್ಕೆ ಸಿಲುಕಿಸುವ ಹುನ್ನಾರವಿದೆ. ಭದ್ರಾ ನಾಲೆ ರೈತರ ಸಮಸ್ಯೆಗೆ ಮಳೆಯೊಂದೇ ಪರಿಹಾರ ಎಂದರು.
ಇದಕ್ಕೂ ಮುನ್ನ ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಯ ನೀರು ಬಳಕೆದಾರರ ಮಹಾ ಮಂಡಳದ ಅಧ್ಯಕ್ಷ ವೈ. ದ್ಯಾವಪ್ಪರೆಡ್ಡಿ, ಜನ ಜಾಗೃತಿ ವೇದಿಕೆ ಸದಸ್ಯ ಪಟೇಲ್ ಮಂಜುನಾಥ್, ಜಿಗಳಿ ಆನಂದಪ್ಪ, ರೈತ ಸಂಘದ ಕೊಟ್ರೇಶ್ ಮಾತನಾಡಿದರು.
ಎಸಿ ದುರ್ಗಾಶ್ರೀ, ತಹಸೀಲ್ದಾರ್ ಪೃಥ್ವಿ ಸಾನಿಕಂ, ಉಪತಹಸೀಲ್ದಾರ್ ಆರ್. ರವಿ, ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಆಡಳಿತಾಧಿಕಾರಿ ಅಣ್ಣಪ್ಪ, ಪ್ರಭಾರಿ ಎಇಇ ಧನಂಜಯ ಇದ್ದರು.
ಪ್ರತಿಭಟನೆಯಲ್ಲಿ ಯಲವಟ್ಟಿ, ಜಿಗಳಿ, ಕುಂಬಳೂರು, ನಿಟ್ಟೂರು, ಭಾನುವಳ್ಳಿ, ಕಮಲಾಪುರ, ಹೊಳೆಸಿರಿಗೆರೆ, ಕಡರನಾಯ್ಕನಹಳ್ಳಿ, ಕೊಕ್ಕನೂರು ಗ್ರಾಮಗಳ ರೈತರು ಇದ್ದರು. ಗ್ರಾಮಾಂತರ ಡಿವೈಎಸ್ಪಿ ಬಸವರಾಜ್, ಸಿಪಿಐ ಸುರೇಶ್ ಸಗರಿ, ಪಿಎಸ್‌ಐ ಪ್ರಭು ಕೆಳಗಿನಮನಿ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಿದ್ದರು.
ನಾಲೆಗೆ ನೀರು ಹರಿಸುವುದು ನಮ್ಮ ಕೈಲಿಲ್ಲ: ಸ್ಥಳಕ್ಕೆ ಧಾವಿಸಿದ ಅಧೀಕ್ಷಕ ಎಂಜಿನಿಯರ್ ಸುಜಾತಾ ಮಾತನಾಡಿ, ಈ ಬಾರಿ ಮಳೆ ಕೈಕೊಟ್ಟ ಕಾರಣ ಸಮಸ್ಯೆ ಉದ್ಭವಿಸಿದೆ. ಐಸಿಸಿ ತೀರ್ಮಾನದಂತೆ ನೀರು ನಿಲುಗಡೆ ಮಾಡಲಾಗಿದೆ. ಹಿಂದೆ ಸಾಕಷ್ಟು ಬಾರಿ ಆನ್ ಆಫ್ ಪದ್ಧತಿಯಡಿ ನೀರು ಹರಿಸಲಾಗಿದೆ. ನಾಲೆಗೆ ನೀರು ಹರಿಸುವುದು ತಮ್ಮ ಕೈಲಿಲ್ಲ. ಸರ್ಕಾರ ಆದೇಶ ನೀಡಬೇಕು ಎಂದು ಹೇಳಿದರು.
ಇದಕ್ಕೆ ಹನಗವಾಡಿ ವೀರೇಶ್ ಪ್ರತಿಕ್ರಿಯಿಸಿ, ನಾಲೆಗೆ ನೀರು ಹರಿಸಿ. ಇಲ್ಲವಾದರೆ ಪ್ರತಿ ಎಕರೆಗೆ ರೂ. 30 ಸಾವಿರ ಪರಿಹಾರ ನೀಡಿ ಎಂದು ಆಗ್ರಹಿಸಿದರು.