ಆದರ್ಶ ಗ್ರಾಮ ಕ್ರಿಯಾಯೋಜನೆ ಶೀಘ್ರ ರೂಪಿಸಿ, ಸಿಇಒ ಎನ್.ಎಂ.ನಾಗರಾಜ ಸೂಚನೆ, ನೆಲವಾಗಿಲು ಪಂಚಾಯಿತಿ ಅಯ್ಕೆ

ceo
Published on

ಬೆಂಗಳೂರು ಗ್ರಾಮಾಂತರ: ಹೊಸಕೋಟೆ ತಾಲೂಕು ನಂದಗುಡಿ ಹೋಬಳಿಯ ನೆಲವಾಗಿಲು ಗ್ರಾಮ ಪಂಚಾಯತಿಯನ್ನು 2019-2024ರ ಸಾಲಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ.ಎನ್.ಬಚ್ಚೇಗೌಡ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಅಭಿವೃದ್ಧಿ ಪಡಿಸಲು ಆಯ್ಕೆ ಮಾಡಿದ್ದು, ಶೀಘ್ರ ಕ್ರಿಯಾ ಯೋಜನೆ ರೂಪಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎನ್.ನಾಗರಾಜ ಸೂಚಿಸಿದರು.

ದೇವನಹಳ್ಳಿ ತಾಲೂಕು ಬೀರಸಂದ್ರ ಗ್ರಾಮದ ಜಿಲ್ಲಾ ಪಂಚಾಯತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಸದರ ಆದರ್ಶ ಗ್ರಾಮ ಯೋಜನೆ ಹಂತ-4 ರಲ್ಲಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಕ್ರಿಯಾ ಯೋಜನಾ ಸಭೆಯಲ್ಲಿ ಮಾತನಾಡಿದರು.

ಆದರ್ಶ ಗ್ರಾಮ ಯೋಜನೆಯ ಮೂಲಕ ಗ್ರಾಮದ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಸ್ಥಳೀಯವಾಗಿ ದೊರೆಯುವ ಸಂಪನ್ಮೂಲಗಳ ಸಮರ್ಪಕ ಬಳಕೆ ಮಾಡುವ ಮೂಲಕ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮವಹಿಸಬೇಕು ಎಂದು ಹೇಳಿದರು.

ನೆಲವಾಗಿಲು ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿಬರುವ ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ, ಸ್ಮಶಾನ, ಆಟದ ಮೈದಾನ, ಸಮುದಾಯ ಭವನ ಹಾಗೂ ಇ-ಗ್ರಂಥಾಲಯ ತೆರೆಯಬೇಕು. ಶಿಥಿಲಗೊಂಡ ಶಾಲೆಗಳನ್ನು ಗುರುತಿಸಿ ನವೀಕರಿಸಬೇಕು. ಶಾಲೆಗಳನ್ನು ಸ್ಮಾರ್ಟ್ ಶಾಲೆಗಳನ್ನಾಗಿ ಮಾರ್ಪಡಿಸಬೇಕು. ನಿಗದಿಪಡಿಸಿದ ಅವಧಿಯಲ್ಲಿ ಅಧಿಕಾರಿಗಳು ಆದರ್ಶ ಗ್ರಾಮ ಯೋಜನೆಗೆ ವಿವಿಧ ಇಲಾಖೆಗಳಿಂದ ಕೈಗೊಳ್ಳಬಹುದಾದ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆಯ ಪಟ್ಟಿ ಸಲ್ಲಿಸಲು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಕೆ.ಕರಿಯಪ್ಪ, ಮುಖ್ಯ ಯೋಜನಾಧಿಕಾರಿ ವಿನುತಾರಾಣಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net