

ಮಡಿಕೇರಿ:
ಐತಿಹಾಸಿಕ ದಸರಾ ಸಂಭ್ರಮಕ್ಕೆ ಮಡಿಕೇರಿ ಸಜ್ಜಾಗುತ್ತಿದೆ. ಆಗಾಗ್ಗೆ ದರ್ಶನ ನೀಡುವ ಮಳೆರಾಯ, ಮಂಜು ಕವಿಯುವ ವಾತಾವರಣದ ಮಧ್ಯೆ ಅಲ್ಲಲ್ಲಿ ಅಳವಡಿಸಿರುವ ಬಣ್ಣ ಬಣ್ಣದ ವಿದ್ಯುತ್ ದೀಪಗಳು ನಗರಕ್ಕೆ ವಿಶೇಷ ಕಳೆ ನೀಡಿದೆ. ಭಾನುವಾರ (ಅ.೧೫) ಕರಗಗಳ ನಗರ ಸಂಚಾರದೊಂದಿಗೆ ನಾಡ ಹಬ್ಬ ದಸರಾಕ್ಕೆ ಚಾಲನೆ ಸಿಗಲಿದ್ದು, ಅ.೨೪ರ ತನಕ ಮಡಿಕೇರಿಯಲ್ಲಿ ದಸರಾ ಕಾರ್ಯಕ್ರಮಗಳದ್ದೇ ದರ್ಬಾರ್ ನಡೆಯಲಿದೆ.
ಮೈಸೂರು ದಸರಾ ಎಂದರೆ ಅರಮನೆ, ಅಂಬಾರಿ, ಆನೆಗಳು, ರಾಜಮನೆತನ ಕಣ್ಮುಂದೆ ಬಂದರೆ, ಮಡಿಕೇರಿ ದಸರಾ ವಿಶೇಷ ಕಾರಣಕ್ಕೆ ಗಮನ ಸೆಳೆಯುತ್ತದೆ. ಇಲ್ಲಿ ಝಗಮಗಿಸುವ ಬೆಳಕು, ಅಬ್ಬರದ ಸಂಗೀತ, ಹುಚ್ಚೆದ್ದು ಕುಣಿಯುವ ಯುವ ಸಮೂಹ, ಪೌರಾಣಿಕ ಕತೆಗಳನ್ನು ಹೇಳುವ ಟ್ಯಾಬ್ಲೋಗಳು, ಆ ಟ್ಯಾಬ್ಲೋಗಳಲ್ಲಿ ಬೆಂಕಿಯುಗುಳುವ ರಾಕ್ಷಸರ ಪ್ರತಿಕೃತಿಗಳು ನೆನಪಾಗುತ್ತದೆ. ಮೈಸೂರು ದಸರಾದಂತೆ ಮಡಿಕೇರಿ ದಸರಾಕ್ಕೂ ಐತಿಹಾಸಿಕ ಹಿನ್ನೆಲೆ ಇದೆ. ಧಾರ್ಮಿಕತೆ ನಂಟು ಅಂಟಿಕೊಂಡಿದೆ. ಸ್ಥಳೀಯರಿಗೆ ಭಾವನಾತ್ಮಕತೆಯ ಬಂಧವೂ ಇದೆ. ಹಾಗಾಗಿಯೇ ಮಡಿಕೇರಿ ದಸರಾ ಎಂದರೆ ಸಾಕು ಸ್ಥಳೀಯರು ಎಲ್ಲಾ ಮರೆತು ಹಬ್ಬದ ಯಶಸ್ಸಿಗಾಗಿ ಹಗಲಿರುಳು ದುಡಿಯಲು ಸಜ್ಜಾಗಿಬಿಡುತ್ತಾರೆ.
ಸುಮಾರು ೧೫೦ ವರ್ಷಗಳ ಇತಿಹಾಸ ಇರುವ ಪೇಟೆ ಶ್ರೀರಾಮಮಂದಿರ ಸೇರಿದಂತೆ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ, ಶ್ರೀ ಕೋಟೆ ಮಾರಿಯಮ್ಮ ದೇವಾಲಯ, ಶ್ರೀ ದಂಡಿನ ಮಾರಿಯಮ್ಮ ಶ್ರೀ ಕಂಚಿಕಾಮಾಕ್ಷಿ ದೇವಾಲಯ, ೧೦೫ ವರ್ಷಗಳ ಇತಿಹಾಸ ಇರುವ ದೇಚೂರು ಶ್ರೀ ರಾಮಮಂದಿರ, ಶ್ರೀ ಕೋದಂಡ ರಾಮ ದೇವಾಲಯ, ಶ್ರೀ ಚೌಡೇಶ್ವರಿ ದೇವಾಲಯ, ಶ್ರೀ ಕೋಟೆ ಗಣಪತಿ ದೇವಾಲಯ, ಶ್ರೀ ಕರವಲೆ ಭಗವತಿ ಮಹಿಷ ಮರ್ಧಿನಿ ದೇವಾಲಯ ಹೀಗೆ ೧೦ ದೇವಾಲಯಗಳಿಗೆ ಸಂಬಂಧಿಸಿದ ಮಂಟಪಗಳು ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತವೆ. ಇದಕ್ಕಾಗಿಯೇ ಆಯಾಯಾ ದೇವಾಲಯಗಳಿಗೆ ಸಂಬಂಧಿಸಿದಂತೆ ದಸರಾ ಮಂಟಪ ಸಮಿತಿಗಳನ್ನು ರಚಿಸಿಕೊಂಡಿದ್ದು. ಈಗಾಗಲೇ ಆಯ್ಕೆ ಮಾಡಿಕೊಂಡಿರುವ ಪೌರಾಣಿಕ ಕತೆಗಳ ಆಧಾರದಲ್ಲಿ ಮಂಟಪಗಳ ತಯಾರಿಕಾ ಕಾರ್ಯ ಭರದಿಂದ ನಡೆಯುತ್ತಿದೆ. ಅತ್ಯುತ್ತಮ ಮಂಟಪಗಳಿಗೆ ಬಹುಮಾನಗಳೂ ಇರುವುದರಿಂದ ಒಂದಕ್ಕಿಂದ ಒಂದು ವಿಭಿನ್ನ ಮತ್ತು ಆಕರ್ಷಕವಾಗಿ ಮೂಡಿಬರಲು ಆಯಾಯ ದೇವಾಲಯಗಳ ಸಮಿತಿ ಸದಸ್ಯರು ಗರಿಷ್ಠ ಶ್ರಮ ಹಾಕುತ್ತಿದ್ದಾರೆ.
ಮಡಿಕೇರಿ ದಸರಾದಲ್ಲಿ ಪಾಲ್ಗೊಳ್ಳುವ ದಶಮಂಟಪಗಳು ಮತ್ತು ಅವುಗಳಲ್ಲಿ ಅಳವಡಿಸಿರುವ ಪೌರಾಣಿಕ ಕಥಾ ಹಂದರ ಒಳಗೊಂಡಿರುವ ಕಲಾಕೃತಿಗಳ ಪ್ರದರ್ಶನ ಎಲ್ಲರಿಗೂ ಲಭ್ಯವಾಗುವುದಿಲ್ಲ ಎನ್ನುವುದು ದಸರಾಕ್ಕೆ ಆಗಮಿಸುವವರ ಸಾಮಾನ್ಯ ದೂರು. ಈ ಹಿನ್ನೆಲೆಯಲ್ಲಿ ಈ ಬಾರಿಯ ದಸರಾದಲ್ಲಿ ಹಾಗಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎನ್ನುತ್ತಾರೆ ಮಡಿಕೇರಿ ನಗರ ದಸರಾ ಸಮಿತಿ ಪ್ರಮುಖರು. ಒಂದು ಮಂಟಪ ಕನಿಷ್ಠ ನಾಲ್ಕು ಪ್ರದರ್ಶನ ನೀಡಬೇಕು ಎಂದು ದಸರಾ ಮಂಟಪ ಸಮಿತಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಅತಿ ಹೆಚ್ಚು ಪ್ರದರ್ಶನ ನೀಡುವ ಮಂಟಪಗಳ ಸಮಿತಿಗೆ ವಿಶೇಷ ಬಹುಮಾನವನ್ನೂ ಕೊಡಲು ತೀರ್ಮಾನಿಸಲಾಗಿದೆ. ಗರಿಷ್ಟ ಎರಡು ಟ್ರ್ಯಾಕ್ಟರ್‌ಗಳನ್ನು ಮಾತ್ರ ಬಳಸುವಂತೆಯೂ ಮನವಿ ಮಾಡಲಾಗಿದೆ. ಮಂಟಪಗಳ ವೀಕ್ಷಣೆಗೆ ಅಲ್ಲಲ್ಲಿ ಗ್ಯಾಲರಿಗಳ ನಿರ್ಮಾಣವನ್ನೂ ಮಾಡಲಾಗುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಎತ್ತರದ ಪ್ರದೇಶಗಳಲ್ಲಿ ಪೊಲೀಸರಿಗೆ ವ್ಯೆವ್ ಪಾಯಿಂಟ್‌ಗಳನ್ನು ನಿರ್ಮಿಸಿಕೊಡಲಾಗುತ್ತಿದೆ.
ಮಳೆಯಿಂದಾಗಿ ನಗರದ ರಸ್ತೆಗಳು ಗುಂಡಿ ಬಿದ್ದು ಬಹುತೇಕ ಕಡೆಗಳಲ್ಲಿ ಸಂಪೂರ್ಣ ಹಾಳಾಗಿವೆ. ಈ ಹಿನ್ನೆಲೆಯಲ್ಲಿ ರಸ್ತೆಗಳ ದುರಸ್ತಿಗೆ ನಗರಸಭೆ ವತಿಯಿಂದ ಆದ್ಯತೆ ನೀಡಲಾಗಿದೆ. ಕರಗಗಳು ಮತ್ತು ಮಂಟಪಗಳು ಸಂಚರಿಸುವ ರಸ್ತೆಗಳನ್ನು ಪ್ರಥಮ ಆದ್ಯತೆ ಮೇಲೆ ದುರಸ್ತಿ ಮಾಡಲಾಗುತ್ತಿದೆ. ಗುಣಮಟ್ಟದ ಕಾಮಗಾರಿಗೆ ಸಂಬಂಧಿಸಿದ ಗುತ್ತಿಗೆದಾರರಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ರಸ್ತೆಗಳ ಎರಡೂ ಬದಿ ಕುರುಚಲು ಗಿಡಗಳನ್ನು ತೆರವು ಮಾಡಲಾಗಿದೆ. ನಗರದಲ್ಲಿ ಇರುವ ಎಲ್ಲಾ ಶೌಚಗೃಹಗಳನ್ನು ಸ್ವಚ್ಛಗೊಳಿಸಲಾಗಿದೆ. ನಿರಂತರ ನೀರು ಪೂರೈಕೆ ಆಗುವಂತೆ ವ್ಯವಸ್ಥೆ ಮಾಡಲಾಗಿದೆ. ಶೋಭಾಯಾತ್ರೆಯ ದಿನದಂದು ಎಲ್ಲಾ ಶೌಚಗೃಹಗಳಲ್ಲೂ ಸಿಬ್ಬಂದಿ ನಿಯೋಜಿಸಲಾಗುತ್ತಿದೆ.
ದಸರಾ ಮುಗಿದ ನಂತರ ಮಡಿಕೇರಿಯ ಬೀದಿಗಳು ಸಂಪೂರ್ಣ ಪ್ಲಾಸ್ಟಿಕ್‌ಮಯವಾಗಿ ಇದನ್ನು ಸ್ವಚ್ಛಗೊಳಿಸಲು ಪೌರಕಾರ್ಮಿಕರು ಹರಸಾಹಸ ಪಡುವಂತಾಗುತ್ತಿತ್ತು. ಹಾಗಾಗಿ ಈ ಬಾರಿಯ ದಸರಾದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಈ ಸಂಬಂಧ ಬೀದಿ ಬದಿ ವ್ಯಾಪಾರಿಗಳಿಗೂ ಎಚ್ಚರಿಕೆ ನೀಡಲಾಗಿದೆ. ಮಂಟಪಗಳಲ್ಲಿ ಕಲಾಕೃತಿ ಪ್ರದರ್ಶನ ಸಂದರ್ಭ ಬಳಕೆ ಆಗುತ್ತಿದ್ದ ಬಣ್ಣ ಬಣ್ಣದ ಪ್ಲಾಸ್ಟಿಕ್ ಚೂರುಗಳನ್ನು ಬಳಸದಂತೆಯೂ ಮಂಟಪ ಸಮಿತಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಪಟಾಕಿಗಳ ಬಳಕೆಯನ್ನೂ ಈ ಬಾರಿ ನಿರ್ಬಂಧಿಸಲಾಗಿದೆ.