

ಶಿವಮೊಗ್ಗ: ಸಾರಿಗೆ ನಿಗಮಗಳ ನೌಕರರು ನಡೆಸುತ್ತಿದ್ದ ಮುಷ್ಕರ ನಾಲ್ಕನೇ ದಿನಕ್ಕೆ ಅಂತ್ಯಗೊಂಡಿದ್ದು ಸೋಮವಾರ ಮಧ್ಯಾಹ್ನದಿಂದಲೇ ಶಿವಮೊಗ್ಗದಿಂದ ಹೊರ ಜಿಲ್ಲೆಗಳಿಗೂ ಕೆಎಸ್ಆರ್ಟಿಸಿ ಬಸ್ ಸಂಚಾರ ಪುನರಾಂಭಗೊಂಡಿತು. ಕೊನೆಗೂ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.
ಕರ್ತವ್ಯಕ್ಕೆ ಮರಳುವಂತೆ ಎಲ್ಲ ಸಿಬ್ಬಂದಿಗೆ ಸಂದೇಶ ರವಾನಿಸಿದ್ದ ಅಧಿಕಾರಿಗಳು ಪ್ರಯಾಣಿಕರ ಸಂಖ್ಯೆಗೆ ಅನುಗಣವಾಗಿ ಬಸ್ಗಳನ್ನು ಓಡಿಸಿದರು. ಬೆಳಗ್ಗೆಯಿಂದಲೇ ಪೊಲೀಸ್ ಭದ್ರತೆಯಲ್ಲಿ ಶಿವಮೊಗ್ಗ-ಭದ್ರಾವತಿ, ಶಿವಮೊಗ್ಗ-ಉಡುಪಿ, ಶಿವಮೊಗ್ಗ-ಹರಿಹರ ನಡುವೆ ಬಸ್ಗಳು ಸಂಚರಿಸಿದವು. ಬೆಂಗಳೂರು, ಮೈಸೂರಿಗೆ ತಲಾ ಎರಡು ಬಸ್ಗಳ ಪ್ರಯಾಣಿಸಿದ್ದವು. ಈ ವೇಳೆ ಮೈಸೂರಿಗೆ ತೆರಳುತ್ತಿದ್ದ ಎರಡು ಬಸ್ಗಳು ಮುಷ್ಕರದ ಹಿನ್ನೆಲೆಯಲ್ಲಿ ಕಡೂರಿನಲ್ಲಿ ಪ್ರಯಾಣಿಕರನ್ನು ಇಳಿಸಿ ವಾಪಸ್ ಡಿಪೋಗೆ ಮರಳಿದ್ದವು.
ಮಧ್ಯಾಹ್ನದವರೆಗೆ 30 ಬಸ್ ಸಂಚಾರ: ಸರ್ಕಾರದ ಸಂಧಾನ ಯತ್ನದ ನಡುವೆಯೂ ಶಿವಮೊಗ್ಗ ವಿಭಾಗದ 4 ಡಿಪೋದಿಂದ 320ರಲ್ಲಿ ಕೇವಲ 30 ಬಸ್ಗಳು ಮಾತ್ರ ಆಪರೇಟ್ ಆಗಿದ್ದವು. ಮಧ್ಯಾಹ್ನದ ಬಳಿಕ ಎಂದಿನಂತೆ ಬಸ್ ರೂಟ್ಗಳು ಆಪರೇಟ್ ಆದವು. ಪೊಲೀಸ್ ಬೆಂಗಾವಲು ಮತ್ತು ಭದ್ರತೆಯಲ್ಲಿ ಬಸ್ಗಳನ್ನು ನಿಲ್ದಾಣದಿಂದ ಹೊರಗೆ ಕಳುಹಿಸಲಾಯಿತು. ಬಸ್ ನಿಲ್ದಾಣದಲ್ಲೂ ಪೊಲೀಸರು ಮೊಕ್ಕಂ ಹೂಡಿ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡರು.