ಜೇಬಿಗೆ ಸೇರಿದ ಜಾಹೀರಾತು ಲಕಗಳ ಶುಲ್ಕ

00
Published on

ಕಿರುವಾರ ಎಸ್.ಸುದರ್ಶನ್ ಕೋಲಾರ

ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಎಷ್ಟು ಜಾಹೀರಾತು ಲಕಗಳು ಇವೆ ಎಂಬ ಬಗ್ಗೆ ಅಧಿಕಾರಿಗಳ ಬಳಿಯೇ ಮಾಹಿತಿಯಿಲ್ಲವಾಗಿದ್ದು, ಜಾಹೀರಾತು ಶುಲ್ಕ ಕೆಲವರ ಜೇಬು ಸೇರುತ್ತಿದೆ. ಇದರಿಂದ ಸ್ಥಳೀಯ ಸಂಸ್ಥೆಗಳ ಆದಾಯಕ್ಕೆ ಕತ್ತರಿ ಬೀಳುತ್ತಿದೆ.

ಕೋಲಾರ, ಮುಳಬಾಗಿಲು, ಕೆಜಿಎಫ್ ನಗರಸಭೆ, ಮಾಲೂರು, ಬಂಗಾರಪೇಟೆ, ಶ್ರೀನಿವಾಸಪುರ ಪುರಸಭೆ ಹಾಗೂ ವೇಮಗಲ್ ಪಟ್ಟಣ ಪಂಚಾಯಿತಿ ಕಾರ್ಯನಿರ್ವಹಿಸುತ್ತಿದ್ದು, ಜಾಹೀರಾತು ಫ್ಲೆಕ್ಸ್ ಬ್ಯಾನರ್ ಅಳವಡಿಸುವವರಿಂದ ಶುಲ್ಕ ವಸೂಲಿ ಮಾಡುವಲ್ಲಿ ವಿಲರಾಗಿದ್ದಾರೆ.

ನಗರಸಭೆಯಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು, ಎಷ್ಟು ದಿನ ಫ್ಲೆಕ್ಸ್ ಇರಬೇಕು, ಎತ್ತರ, ಗಾತ್ರಕ್ಕೆ ತಕ್ಕಂತೆ ಶುಲ್ಕ ಪಾವತಿ ಮಾಡಬೇಕು. ಆದರೆ ಇದಕ್ಕೆ ಸಾಕಷ್ಟು ಮಂದಿ ಶುಲ್ಕ ಪಾವತಿಸುವುದಿಲ್ಲ ಎಂಬ ಆರೋಪ ಇದೆ. ಆ ಮೂಲಕ ನಗರಸಭೆಗೆ ಬರಬೇಕಾದ ಆದಾಯ ಸೋರಿಕೆಯಾಗುತ್ತಿದೆ.

ಸ್ಥಳೀಯ ಸಂಸ್ಥೆಗಳಲ್ಲಿ ಜಾಹೀರಾತು ಶುಲ್ಕ ವಸೂಲಿ ಮಾಡುವವರು ಆಸಕ್ತಿ ತೋರುತ್ತಿಲ್ಲ. ಆಯೋಜಕರು ಜಾಹೀರಾತು ಅಳವಡಿಸುವ ಮುಂಚೆಯೇ ಸಂಬಂಧಪಟ್ಟ ಅಧಿಕಾರಿಯಿಂದ ಅನುಮತಿ ಪಡೆದು, ಶುಲ್ಕ ಪಾವತಿ ಮಾಡಿರುವ ರಸೀದಿ ಪಡೆದುಕೊಳ್ಳಬೇಕು. ಫ್ಲೆಕ್ಸ್ ಅಥವಾ ಬ್ಯಾನರನ್ನು ನಿಗದಿಪಡಿಸಿದ ಸ್ಥಳದಲ್ಲಿ ಅಳವಡಿಕೆ ಮಾಡಬೇಕು.

ಆದರೆ, ಜಿಲ್ಲೆಯಲ್ಲಿ ಆಯೋಜನಕರು ಪೂರ್ವ ಅನುಮತಿಯಿಲ್ಲದೆ ಬ್ಯಾನರ್ ಅಳವಡಿಸಿದ ನಂತರ ಸಿಬ್ಬಂದಿ ಶುಲ್ಕ ವಸೂಲಿಗೆ ಮುಂದಾಗುತ್ತಿದ್ದು, ಇದು ಭ್ರಷ್ಟಾಚಾರಕ್ಕೆ ಆಸ್ಪದ ಮಾಡಿದೆ.

ಜಿಲ್ಲೆಯ ನಗರ, ಪಟ್ಟಣದಲ್ಲಿ ಫ್ಲೆಕ್ಸ್, ಬ್ಯಾನರ್ ಅಳವಡಿಸಿರುವ ಬಗ್ಗೆ ಆರೋಗ್ಯ ನಿರೀಕ್ಷಕರು ಆಗಾಗ ಪರಿಶೀಲನೆ ಮಾಡಿ ಶುಲ್ಕ ವಸೂಲಿ ಮಾಡುವ ಕೆಲಸ ಮಾಡುತ್ತಾರೆ. ಒಂದು ವೇಳೆ ಆಯೋಜಕರು ಶುಲ್ಕ ಪಾವತಿಸದಿದ್ದರೆ ತೆರವುಗೊಳಿಸಲು ಕ್ರಮವಹಿಸಬೇಕು, ಆದರೆ ಅಧಿಕಾರಿಗಳು ಯಾವುದಕ್ಕೂ ಕ್ರಮವಹಿಸುವುದಿಲ್ಲ. ಜಾಹೀರಾತು ಶುಲ್ಕ ಸೋರಿಕೆ ಹಾಗೂ ವಂಚನೆ ಬಗ್ಗೆ ಗಮನಹರಿಸಿ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಶುಲ್ಕ ಸೋರಿಕೆ?: ಪೂರ್ವ ಅನುಮತಿಯಿಲ್ಲದೆ ಫ್ಲೆಕ್ಸ್, ಬ್ಯಾನರ್ ಅಥವಾ ಹೋರ್ಡಿಂಗ್ಸ್‌ಗೆ ಜಾಹೀರಾತು ಅಳವಡಿಸುವ ಆಯೋಜಕರ ಬಳಿ ಅಧಿಕಾರಿ, ಸಿಬ್ಬಂದಿ ಹೋಗಿ ಶುಲ್ಕ ವಸೂಲಿಗೆ ಮುಂದಾಗುತ್ತಾರೆ. ಆಗ ಆಯೋಜಕರು ನಮಗೇನು ರಸೀದಿ ಬೇಡ, ನಾವು ಅಳವಡಿಸಿರುವ ಜಾಹೀರಾತು ತೆರವುಗೊಳಿಸಬೇಡಿ ಎಂದು ನೀಡುವ ಹಣ ಅಧಿಕಾರಿ ಅಥವಾ ಸಿಬ್ಬಂದಿ ಜೇಬಿಗೆ ಹಾಕಿಕೊಂಡು ಮೌನವಹಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಖಾಸಗಿ ಏಜೆಂಟರಿಂದ ಅಳವಡಿಕೆ: ಖಾಸಗಿ ಕಂಪನಿಗಳ ಜಾಹೀರಾತುಗಳನ್ನು ನಗರ, ಪಟ್ಟಣ ಪ್ರದೇಶಗಳಲ್ಲಿ ಅಳವಡಿಸುವ ಕುರಿತು ಕೆಲ ಖಾಸಗಿ ಜಾಹೀರಾತು ಏಜೆಂಟರು ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಅವರು ಸಹ ಹೋರ್ಡಿಂಗ್ಸ್ ಅಳವಡಿಸುವ ಮೊದಲು ಅನುಮತಿ ಪಡೆದುಕೊಳ್ಳಬೇಕು. ಆದರೆ, ಅಧಿಕಾರಿಗಳ, ಸಿಬ್ಬಂದಿಯ ಕಾರ್ಯವೈಖರಿ ನಿರ್ಲಕ್ಷವನ್ನೇ ಬಂಡವಾಳ ಮಾಡಿಕೊಂಡಿರುವ ಏಜೆಂಟರು ಎಲ್ಲೆಂದರಲ್ಲಿ ಜಾಹೀರಾತು ಅಳವಡಿಸುವುದನ್ನು ರೂಢಿಸಿಕೊಂಡಿದ್ದಾರೆ. ನಗರಸಭೆ, ಪುರಸಭೆ ಅಧಿಕಾರಿಗಳು ಮೊದಲು ಪ್ರಿಂಟಿಂಗ್ ಮಾಲೀಕರಿಗೆ ಬಿಸಿ ಮುಟ್ಟಿಸಿದರೆ ಕಡ್ಡಾಯವಾಗಿ ಜಾಹೀರಾತು ಶುಲ್ಕ ವಸೂಲಿ ಮಾಡಬಹುದು.

ಸಭೆಗಳಲ್ಲಿ ಚರ್ಚೆಯಾದರೂ ಕ್ರಮವಿಲ್ಲ: ಜಾಹೀರಾತು ಶುಲ್ಕ ಸೋರಿಕೆಯಾಗುತ್ತಿರುವ ಬಗ್ಗೆ ನಗರಸಭೆ ಸಾಮಾನ್ಯ ಸಭೆಗಳಲ್ಲಿ ಸದಸ್ಯರು ಸಾಕಷ್ಟು ಬಾರಿ ಧ್ವನಿ ಎತ್ತಿದ್ದರೂ ಅಧಿಕಾರಿಗಳು ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.

ನಗರ ವ್ಯಾಪ್ತಿಯಲ್ಲಿ ನಗರಸಭೆಯಿಂದ ಎಷ್ಟು ಜಾಹೀರಾತು ಲಕ ಅಳವಡಿಸಲಾಗಿದೆ ಎಂಬ ಬಗ್ಗೆ ಅಧಿಕಾರಿ, ಸಿಬ್ಬಂದಿ ಬಳಿ ಮಾಹಿತಿಯೇ ಇಲ್ಲ. ಈ ಬಗ್ಗೆ ಮಾಹಿತಿ ಕೇಳಿದ್ದರೂ ಇದುವರೆಗೂ ಕೊಟ್ಟಿಲ್ಲ. ನಗರಸಭೆಗೆ ಬರಬೇಕಾಗಿರುವ ಜಾಹೀರಾತು ಶುಲ್ಕು ಅನ್ಯರ ಪಾಲಾಗುತ್ತಿದೆ. - ಎನ್.ಎಸ್.ಪ್ರವೀಣ್‌ಗೌಡ ನಗರಸಭೆ ಸದಸ್ಯ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net