

ರಾಯಚೂರು: ಉನ್ನತ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿರುವ ಪುಣ್ಯಭೂಮಿ ಭಾರತವಾಗಿದ್ದು, ಈ ನೆಲದ ಸಂಸ್ಕೃತಿಯನ್ನು ಕಾಪಾಡಿಕೊಂಡು ಬರುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದು ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ನಾಗವೇಣಿ ಪಾಟೀಲ್ ಹೇಳಿದರು.
ನಗರದ ಕಿಲ್ಲೆ ಬೃಹನ್ಮ,ಠದಲ್ಲಿ ನವರಾತ್ರಿ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿರುವ ದೇವಿ ಪುರಾಣ ಪ್ರವಚನಕ್ಕೆ ಭಾನುವಾರ ಸಂಜೆ ಚಾಲನೆ ನೀಡಿ ಮಾತನಾಡಿ, ನವರಾತ್ರಿ ಉತ್ಸವ ಮಹಿಳೆಯರಿಗೆ ವಿಶೇಷವಾಗಿದೆ ಎಂದರು.
ದೇವಿ ಪುರಾಣವನ್ನು ಆಲಿಸುವ ಮೂಲಕ ಮನದಲ್ಲಿರುವ ದುಷ್ಟ ಗುಣಗಳನ್ನು ಸಂಹಾರ ಮಾಡುವ ಮೂಲಕ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕಾಗಿದೆ. ಮಹಿಳೆಯರಿಂದ ಪುರಾಣಕ್ಕೆ ಕೊಡಿಸುತ್ತಿರುವುದು ಸೀಯರಿಗೆ ದೊರೆತ ಗೌರವಾಗಿದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸನ್ಮಾನಿಸಿ, ಗೌರವಿಸಲಾಯಿತು. ಜೆ.ಎಂ.ಶರಣಯ್ಯಸ್ವಾಮಿ ರಚನೆಯ ಅನುಭಾವ ದೀಪ್ತಿ ಕೃತಿಯನ್ನು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಲೋಕಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಆದ್ಯಕ್ಷೆ ಲಲಿತಾ ಕಡಗೋಲ, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ರೇಖಾ ಕೇಶವರೆಡ್ಡಿ, ಮುಖಂಡರಾದ ನಿರ್ಮಲಾ ಬೆಣ್ಣೆ, ಸುಲೋಚನಾ ಆಲ್ಕೂರು, ದಾನಮ್ಮ, ಡಾ.ನಿಜಗುಣ ಶಿವಯೋಗಿ ಜವಳಿ ಉಪಸ್ಥಿತರಿದ್ದರು.