ನಾಡು-ನುಡಿ ಪರ ಧ್ವನಿ ಎತ್ತುವ ಜಿಲ್ಲೆ ನಮ್ಮದು

11 yelandur 01
Published on

ಚಾ.ನಗರ : ನಾಡು-ನುಡಿಗೆ ಏನಾದರೂ ಸಮಸ್ಯೆಗಳು ಬಂದಲ್ಲಿ ರಾಜ್ಯದಲ್ಲಿ ಪ್ರಥಮ ಧ್ವನಿ ಎತ್ತುವ ಜಿಲ್ಲೆ ಚಾಮರಾಜನಗರ ಎಂಬುದನ್ನು ಹೇಳಲು ಹೆಮ್ಮೆಯಾಗುತ್ತದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.


ಯಳಂದೂರು ಪಟ್ಟಣದ ವೈ.ಎಂ. ಮಲ್ಲಿಕಾರ್ಜುನಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕನ್ನಡ ರಾಜ್ಯೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸುವರ್ಣ ಕರ್ನಾಟಕ 50ರ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ನಮ್ಮ ಜಿಲ್ಲೆ ತಮಿಳುನಾಡು ಹಾಗೂ ಕೇರಳ ಗಡಿಯನ್ನು ಹಂಚಿಕೊಂಡಿದ್ದರೂ ನಮ್ಮ ನಾಡುನುಡಿಯ ವಿಚಾರದಲ್ಲಿ ಸಮಸ್ಯೆ ಬಂದಾಗ ಎಲ್ಲರೂ ಒಗ್ಗಟ್ಟಾಗಿ ಧ್ವನಿ ಎತ್ತುತ್ತಾರೆ. ತಾಳವಾಡಿ, ಕಾಸರಗೂಡು, ಬೆಳಗಾವಿ ಗಡಿ ವಿಚಾರದಲ್ಲಿ ಪಕ್ಕದ ರಾಜ್ಯಗಳು ಕ್ಯಾತೆಯನ್ನು ತೆಗೆಯುತ್ತಲೇ ಇರುತ್ತವೆ. ಆದರೂ ನಮ್ಮಲ್ಲಿರುವ ಒಗ್ಗಟ್ಟಿನಿಂದಲೇ ಅವರಿಗೆ ನಾವು ಉತ್ತರಿಸುತ್ತೇವೆ ಎಂದರಲ್ಲದೆ, ಸಾಹಿತ್ಯ ಪರಿಷತ್ತಿನ ನೂತನ ಭವನ ನಿರ್ಮಾಣಕ್ಕೆ ನಿವೇಶನವನ್ನು ಕೇಳಲಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಸ್ಥಳ ಗುರುತಿಸಿ ಭವನ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ದಾನಿಗಳಿಂದ ಸ್ಥಳ ನೀಡಲಾಗಿದೆ. ಇದಕ್ಕೆ ಕೆಲವು ಅಡೆತಡೆಗಳಿದ್ದು, ಇದನ್ನು ನಿವಾರಿಸಲು ಕ್ರಮ ವಹಿಸಲಾಗುವುದು. ಶೀಘ್ರದಲ್ಲೇ ಕಾಲೇಜು ನಿರ್ಮಾಣಕ್ಕೆ ಕ್ರಮ ವಹಿಸುವ ಭರವಸೆ ನೀಡಿದರು.


ಭಾಷೆಗೆ ಸವತಿ ಮತ್ಸರ ಬೇಡ: ಕನ್ನಡ ಭಾಷೆ ಇಂದು ಅಪಾಯದಲ್ಲಿದೆ. ಇದಕ್ಕೆ ಬೇರೆ ಭಾಷೆಯ ಪರಿಣಾಮ ನಮ್ಮ ರಾಜ್ಯದಲ್ಲಿ ಗಾಢವಾಗಿದ್ದು, ಸವತಿಯಂತೆ ಇದನ್ನು ನೋಡಲಾಗುತ್ತಿದೆ. ಇದು ನಿಲ್ಲಬೇಕು. ನಮ್ಮ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮವಾಗಿದ್ದು, ಇಲ್ಲಿರುವ ಎಲ್ಲರೂ ಕನ್ನಡದಲ್ಲೇ ವ್ಯವಹರಿಸಬೇಕು ಎಂದರು.


ನಮ್ಮ ಜಿಲ್ಲೆಯಲ್ಲಿ ಅನೇಕ ಕವಿಪುಂಗವರಿದ್ದು, ಡಾ.ರಾಜ್‌ಕುಮಾರ್, ಪುನೀತ್‌ರಾಜ್‌ಕುಮಾರ್ ಅವರಂತಹ ಮೇರು ಪ್ರತಿಭೆ ನೀಡಿದ ಜಿಲ್ಲೆ ನಮ್ಮದಾಗಿದೆ. ಇಡೀ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಜಾನಪದ ಸಂಸ್ಕೃತಿಯನ್ನು ನಮ್ಮ ಜಿಲ್ಲೆ ಹೊಂದಿದೆ. ಇಲ್ಲಿ ಮಲೆಮಹದೇಶ್ವರ, ರಾಚಪ್ಪಾಜಿ, ಸಿದ್ದಪ್ಪಾಜಿ ಅವರಂತಹ ಪುಣ್ಯ ಪುರುಷರು ಜೀವಿಸಿ ಹೋಗಿದ್ದಾರೆ. ಹಾಗಾಗಿಯೇ ಇದನ್ನು ದ.ರಾ. ಬೇಂದ್ರೆ ಜಾಗೃತಿ ಭೂಮಿ ಎಂದು ಕರೆದಿದ್ದರು. ಮಲೆಯೂರು ಗುರುಸ್ವಾಮಿ ನಮ್ಮ ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ ಬಗ್ಗೆ ಸಾಹಿತ್ಯ ರಚನೆ ಮಾಡಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಇದನ್ನು ಓದಬೇಕು ಎಂದು ಸಲಹೆ ನೀಡಿದರು.

ತಾಲೂಕು ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ ಪ್ರಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ಪ್ರಾಂಶುಪಾಲ ವಿಜಯ ಮಾತನಾಡಿದರು. ತಹಸೀಲ್ದಾರ್ ಆರ್. ಜಯಪ್ರಕಾಶ್, ಪಪಂ ಮುಖ್ಯಾಧಿಕಾರಿ ಮಹೇಶ್‌ಕುಮಾರ್, ದಸಂಸ ಜಿಲ್ಲಾ ಸಂಚಾಲಕ ಸಿ. ರಾಜಣ್ಣ, ಕರವೇ ತಾಲೂಕು ಅಧ್ಯಕ್ಷ ವೈ.ಕೆ.ಮೋಳೆ ನಾಗರಾಜು, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಂಬಳೆ ವೀರಭದ್ರನಾಯಕ ಪಪಂ ಸದಸ್ಯ ವೈ.ಜಿ.ರಂಗನಾಥ ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ವಿ.ಚಂದ್ರು, ತೋಟೇಶ್, ತಾಪಂ ಮಾಜಿ ಅಧ್ಯಕ್ಷ ನಿರಂಜನ್, ಕಸಾಪ ಕಾರ್ಯದರ್ಶಿ ಡಿ.ಪಿ.ಮಹೇಶ್, ಕೋಶಾಧ್ಯಕ್ಷ ಫೈರೋಜ್‌ಖಾನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net