೩೦,೦೦೦ ಮತಗಳ ಅಂತರದಲ್ಲಿ ಗೆಲ್ಲುವುದು ನಮ್ಮ ಚಿಂತನೆ: ಅಪ್ಪಚ್ಚು ರಂಜನ್

17Adarshkdga3
Published on

ಮಡಿಕೇರಿ: ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಎಂ.ಪಿ.ಅಪ್ಪಚ್ಚು ರಂಜನ್‌ರವರು ಚುನಾವಣಾ ಅಧಿಕಾರಿ ಯತೀಶ್ ಉಳ್ಳಾಲ್‌ರವರಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.


ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತರೆಲ್ಲರೂ ಹುಮ್ಮಸ್ಸಿನಿಂದ ಇದ್ದು, ಪಕ್ಷದ ಗೆಲುವಿಗೆ ತೀರ್ಮಾನ ಮಾಡಿದ್ದಾರೆ. ಕಳೆ ಬಾರಿ ಚುನಾವಣೆಯಲ್ಲಿ ೧೬,೦೦೦ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಾಗಿತ್ತು. ಈ ಬಾರಿ ೩೦,೦೦೦ ಮತಗಳ ಅಂತರದಲ್ಲಿ ಗೆಲ್ಲುವುದು ನಮ್ಮ ಚಿಂತನೆಯಾಗಿದೆ ಎಂದರು.


೭ನೇ ಬಾರಿ ಸ್ಪರ್ಧೆ ಮಾಡುತ್ತಿದ್ದೇನೆ. ೫ ಬಾರಿ ಗೆಲುವು ಸಾಧಿಸಿದ್ದೇನೆ. ಈ ಬಾರಿಯು ಗೆಲುವು ಸಾಧಿಸಲಿದ್ದೇನೆ ಎಂಬ ನಂಬಿಕೆಯಿದೆ. ಕಾರ್ಯಕರ್ತರು ಸಜ್ಜಾಗಿದ್ದಾರೆ, ರಾಜ್ಯದಲ್ಲಿಯೂ ಕೂಡ ಬಿಜೆಪಿ ೧೩೪ ಸೀಟುಗಳನ್ನು ಪಡೆಯಲಿದೆ ಎಂದರು.


ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಅವರು, ಭಾರತೀಯ ಜನತಾ ಪಾರ್ಟಿ ದ್ರೋಹಬಗೆಯುವ ಕೆಲಸ ಮಾಡಬಾರದಿತ್ತು. ಅವರಿಗೆ ಸ್ಪೀಕರ್, ಮಂತ್ರಿಯನ್ನಾಗಿ ಮಾಡಿತ್ತು. ಇಂತಹ ಸಂದರ್ಭದಲ್ಲಿ ಪಕ್ಷ ತೊರೆದಿರುವುದು ದುರಾದೃಷ್ಠಕರ ಎಂದರು.


ಕಾಂಗ್ರೆಸ್ ದೇಣಿಗೆ ನೀಡುವ ಕೆಲಸ ಮಾಡುತ್ತದೆ ಹೊರತು ಜನಸೇವೆ ಮಾಡುವುದಿಲ್ಲ. ಜನರಿಗೆ ನಿರಂತವಾಗಿ ಶಾಸಕರು ಸಿಗುವಂತಹ ಕೆಲಸವಾಗಬೇಕು. ಇವತ್ತು ಅವರು ಅರಕಲಗೋಡಿನಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ವಾಸವಿರುವಂತಹ ಅವರು ಜನಸೇವೆಗೆ ಅಂತ ಬಂದವರಲ್ಲ. ಅವರ ತಂದೆ ಬೆಳಗ್ಗೆ ಜೆಡಿಎಸ್, ರಾತ್ರಿ ಕಾಂಗ್ರೆಸ್ ಅಂತ ಇದ್ದಾರೆ. ಮಗ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತಿದ್ದಾರೆ. ಇದರಲ್ಲೇ ತಿಳಿಯುತ್ತದೆ ಹೊಂದಾಣಿಕೆ ರಾಜಕೀಯ ಮಾಡುತ್ತಾರೆ ಎಂಬುದು ತಿಳಿಯುತ್ತದೆ. ಆದರೆ, ಎರೆಡು ಕ್ಷೇತ್ರದಲ್ಲಿ ಬಿಜೆಪಿ ಬಹಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.


ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಬಿ.ಬಿ.ಭಾರತೀಶ್, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ,ಪ್ರಮುಖರಾದ ಅಭಿಮನ್ಯು ಕುಮಾರ್, ಎಸ್.ಜಿ.ಮೇದಪ್ಪ, ನಾಗರಾಜ್, ಮಹೇಶ್ ಜೈನಿ ಕಾರ್ಯಕರ್ತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net