

ವಿಜಯವಾಣಿ ಸುದ್ದಿಜಾಲ ಉಡುಪಿ
ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಉತ್ತಮವಾಗಿಯೇ ಇವೆ. ಆದರೆ, ಇತ್ತೀಚೆಗಿನ ವರ್ಷಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿ ಬರುತ್ತಿದೆ. ಹೀಗಾಗಿ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಕೈಜೋಡಿಸಬೇಕು. ಸರ್ಕಾರಿ ಶಾಲೆಗಳಲ್ಲೂ ಸಹ ಉತ್ತಮವಾದ ಸೌಲಭ್ಯಗಳು ಲಭ್ಯವಿದೆ ಎಂದು ಉಡುಪಿ ನಗರಸಭಾ ಉಪಾಧ್ಯಕ್ಷೆ ರಜಿನಿ ಹೆಬ್ಬಾರ ತಿಳಿಸಿದರು.
ಉಡುಪಿಯ ಒಳಕಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನಮ್ಮ ಶಾಲೆ-ನಮ್ಮ ಜವಾಬ್ದಾರಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ದೊರೆಯುವ ಸೌಲಭ್ಯ ಹಾಗೂ ಪೌಷ್ಟಿಕ ಆಹಾರ, ಪಿಎಂ ಪೋಷಣ್ ಕಾರ್ಯಕ್ರಮಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಉಡುಪಿಯ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಮ್ಮ, ಡಯಟ್ ಉಪನ್ಯಾಸಕ ಯೋಗಾನರಸಿಂಹ ಸ್ವಾಮಿ ಕೆ.ಎಂ. ಅವರು ಪಾಲಕರಿಗೆ ಅರಿವು ಮೂಡಿಸಿದರು.
ಪ್ರೌಢಶಾಲೆಯ ಎಸ್ಡಿಎಂಸಿ ಅಧ್ಯಕ್ಷ ರಮೇಶ ಹೆಗಡೆ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ನಗರಸಭಾ ಸದಸ್ಯೆ ಮಾನಸಾ ಪೈ, ಸಂಯುಕ್ತ ಪ್ರೌಢಶಾಲೆ ವಳಕಾಡಿನ ಮುಖ್ಯ ಶಿಕ್ಷಕಿಯರಾದ ಪೂರ್ಣಿಮಾ, ಕುಸುಮಾ, ಪ್ರಾಥಮಿಕ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಡಾ. ವಿರೂಪಾಕ್ಷ, ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ನಾಗೇಶ ಪ್ರಭು ಉಪಸ್ಥಿತರಿದ್ದರು.
ಅಜೀಮ್ಜಿ ಪ್ರೇಮ್ಜಿ ಫೌಂಡೇಷನ್ನ ಯೋಗೀಶ ಹಾಗೂ ಪ್ರಕೃತಿ, ಪಾಲಕರು ಮತ್ತು ಎಸ್ಡಿಎಂಸಿ ಸದಸ್ಯರೊಂದಿಗೆ ಪೌಷ್ಟಿಕ ಆಹಾರದ ಸಮೀಕ್ಷೆ ನಡೆಸಿದರು.
ಬಿಆರ್ಪಿ ಜಯಶೀಲ ಬಿ. ರೋಟೆ ಕಾರ್ಯಕ್ರಮ ಸಂಘಟಿಸಿದರು. ಪೂರ್ಣಿಮಾ ಸ್ವಾಗತಿಸಿದರು. ಸಿಆರ್ಪಿ ಸರಿತಾ ರಾಣಿ ಹಾಗೂ ರಂಜಿತಾ ಕಾರ್ಯಕ್ರಮ ನಿರ್ವಹಿಸಿದರು. ಬಿಐಇಆರ್ಟಿ ಆಶಾ ಸಹಕರಿಸಿದರು.