

ದೊಡ್ಡಬಳ್ಳಾಪುರ : ತಾಲೂಕಿನ ರಾಜಟ್ಟದಲ್ಲಿಶ್ರೀ ಮಾರುತಿ ಪ್ರೌಢಶಾಲೆಯ ಹಳೇ ವಿದ್ಯಾರ್ಥಿ ಬಳಗದಿಂದ ಯಲಹಂಕ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಭಾನುವಾರ ನಮ್ಮಶಾಲೆ ನಮ್ಮ ಹಕ್ಕು ಹೆಸರಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. 100ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಈ ವೇಳೆ ಹಳೆಯ ವಿದ್ಯಾರ್ಥಿ ವಿನೋದ್ ಮಾತನಾಡಿ, 1972ರಲ್ಲಿ ಅಂದಿನ ಶಾಸಕ ಜಿ.ರಾಮೇಗೌಡರ ಸಹಕಾರದಿಂದ ಶಾಲೆ ಆರಂಭವಾಯಿತು. ಸರ್ಕಾರಿ ಅನುದಾನದಿಂದ ನಡೆಯುತ್ತಿದ್ದ ಮಾರುತಿ ಪ್ರೌಢ ಶಾಲೆಯ ಸ್ಥಳದಲ್ಲಿ ಬೆಂಗಳೂರಿನ ಖಾಸಗಿ ಸಂಸ್ಥೆಯ ಆಡಳಿತ ಮಂಡಳಿಯ ಕೆಲ ಸದಸ್ಯರು, ಕಟ್ಟಡ ನಿರ್ಮಿಸಿಕೊಂಡು 5 ವರ್ಷಗಳಿಂದ ಖಾಸಗಿ ಶಾಲೆ ನಡೆಸುತ್ತಿದ್ದಾರೆ. ಇದು ಅನುದಾನಿತ ಶ್ರೀಮಾರುತಿ ಪ್ರೌಢ ಶಾಲೆಯ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಯ ಉಳಿವಿಗಾಗಿ ಹಳೆಯ ವಿದ್ಯಾರ್ಥಿಗಳು ಒಟ್ಟಾಗಿ ವಿನೂತನ ರೀತಿಯಲ್ಲಿ ಹೋರಾಟ ಮಾಡುತ್ತಿದ್ದೇವೆ ಎಂದರು.