

ಬಾದಾಮಿ: ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಹೆಚ್ಚಿಸಲು ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಯೋಜನೆ ಆಯೋಜಿಸಿದ್ದು, ಒಂದನೇ ತರಗತಿಗೆ ದಾಖಲಾದ ಮಗುವಿಗೆ ಒಂದು ಸಾವಿರ ಠೇವಣಿ, ಉಚಿತ ಕಿಟ್ ನೀಡಲಾಗುತ್ತಿದೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸುವ ಮೂಲಕ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ. ದೊಡ್ಡಪ್ಪನ್ನವರ ಹೇಳಿದರು. ತಾಲೂಕಿನ ಚೊಳಚಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ಉಳಿವಿಗೆ ಸಮುದಾಯದ ಸಹಭಾಗಿತ್ವ ಅವಶ್ಯವಾಗಿದೆ. ಗುಣಮಟ್ಟದ ಶಿಕ್ಷಣದ ಜತೆಗೆ ಸರ್ಕಾರದ ಸೌಲಭ್ಯಗಳನ್ನು ಪಡೆದು ದಾಖಲಾತಿ ಹೆಚ್ಚಳ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದರು. ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಎಂ.ಎಂ. ನಾರಗಲ್ ಮಾತನಾಡಿ, ಸರ್ಕಾರಿ ಶಾಲೆಗಳ ಬಗ್ಗೆ ಮನೋಭಾವನೆ ಬದಲಾಗಬೇಕಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಜತೆಗೆ ಬಿಸಿಯೂಟ, ಸಮವಸ್ತ್ರ, ಪಠ್ಯಪುಸ್ತಕ, ಶೂ ಉಚಿತವಾಗಿ ನೀಡಲಾಗುತ್ತದೆ ಎಂದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ ಹಳಗೇರಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರನಗೌಡ ಪಾಟೀಲ ಹಾಗೂ ಕವಿತಾ ಚನ್ನಶೆಟ್ಟಿ ಮಾತನಾಡಿದರು. ಗುಳೇದಗುಡ್ಡದ ಒಪ್ಪತ್ತೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ರಕ್ಷಿತಾ ಮರಡಿತೋಟದ, ಉಪಾಧ್ಯಕ್ಷೆ ಕಮಲಾಕ್ಷಿ ಗಡ್ಡಿ, ಎಸ್‌ಡಿಎಂಸಿ ಅಧ್ಯಕ್ಷ ಬಸಯ್ಯ ಹಾಳಕೇರಿ, ಉಪಾಧ್ಯಕ್ಷೆ ಜಯಶ್ರೀ ತಳವಾರ, ಪಿಕೆಪಿಎಸ್ ಅಧ್ಯಕ್ಷ ಎಸ್.ಎಸ್.ಹೂಗಾರ, ಪಿಕೆಪಿಎಸ್ ನಿರ್ದೇಶಕ ರಮೇಶ ಹಾದಿಮನಿ, ರೇಖಾ ಪಡಿಯಪ್ಪನ್ನವರ, ವಿರುಪಾಕ್ಷಗೌಡ ಪಾಟೀಲ, ಪ್ರೀತಿ ದೇಸಾಯಿ, ರತ್ನಾ ಹಂಪಿಹೊಳಿಮಠ, ಬಸವರಾಜ ಹಂಪಿಹೊಳಿಮಠ, ಬಾಪುಗೌಡ ಪಾಟೀಲ ಕೃಸಗೌಡ ಪಾಟೀಲ, ಲೋಕೇಶ ಪಡಿಯಪ್ಪನ್ನವರ, ಸುರೇಶ ಬೊಂಬ್ಲೆ ಮತ್ತಿತರರಿದ್ದರು. ಶಿಕ್ಷಣ ಸಂಯೋಜಕ ಬಿ.ಟಿ. ಹಳ್ಳಿ ಸ್ವಾಗತಿಸಿದರು, ಕ್ಷೇತ್ರ ಸಂಪಪನ್ಮೂಲ ವ್ಯಕ್ತಿ ಬಿ.ಎ್. ಕುಂಬಾರ ಕಾರ್ಯಕ್ರಮ ನಿರೂಪಿಸಿದರು. ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದ ನಮ್ಮ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಬೇಕು. ಇದಕ್ಕೆ ಸರ್ಕಾರ ಅನುಮತಿ ನೀಡದಿದ್ದರೆ, ಶಿಕ್ಷಕರ ವೇತನವನ್ನು ನಾವೇ ಭರಿಸಲು ಸಿದ್ಧರಿದ್ದೇವೆ. ಒಂದೇ ದಿನ 10 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇದರಿಂದ ದಾಖಲಾತಿ ಹೆಚ್ಚಳಕ್ಕೆ ಅನುಕೂಲವಾಗಲಿದೆ. ಎಸ್.ಎಸ್. ಹೂಗಾರ, ಅಧ್ಯಕ್ಷರು ಪಿಕೆಪಿಎಸ್ ಚೊಳಚಗುಡ್ಡ. ಸಮಾಜದಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಇರುವ ಮನೋಧೋರಣೆ ಬದಲಾಗಬೇಕಿದೆ. ದಾನಿಗಳ ಸಹಾಯದಿಂದ ದಾಖಲಾದ ಪ್ರತಿ ಮಗುವಿಗೆ ಠೇವಣಿ ಹಣ ಇಡಲಾಗುತ್ತದೆ. ದಾಖಲಾತಿ ಮಾಡಿಸಲು ಸಮುದಾಯದವರು ಎಸ್‌ಡಿಎಂಸಿ ಸದಸ್ಯರು ಜತೆಯಾಗಿ ಕೆಲಸ ಮಾಡಿದರೆ ಹೆಚ್ಚಿನ ದಾಖಲಾತಿ ಸಾಧ್ಯವಿದೆ. ಎಂ.ಬಿ.ದೊಡ್ಡಪ್ಪನ್ನವರ, ಕ್ಷೇತ್ರ ಸಮನ್ವಯಾಧಿಕಾರಿಗಳು ಎಸ್.ಎಸ್.ಕೆ.ಬಾದಾಮಿ.