

ಮೈಸೂರು: ಸಭೆ, ಸಮಾರಂಭಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳ ಭಾವುಟವನ್ನು ಕಟ್ಟಬೇಕು. ನಮ್ಮ ಪಕ್ಷ ಉಳಿಯಬೇಕು, ಬಿಜೆಪಿಯೂ ಉಳಿಯಬೇಕು ಎಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಿಜೆಪಿ-ಜೆಡಿಎಸ್ ಕೋರ್‌ಕಮಿಟಿ ಸಭೆಯಲ್ಲಿ ಮಾತನಾಡಿದ ಅವರು, ನಮಗೆ ಬಿಜೆಪಿಯೊಂದಿಗೆ ಹೋಗುವ ಅನಿವಾರ್ಯತೆ ಇರಲಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿ ಸಬೇಕು ಹಾಗೂ ಕಾಂಗ್ರೆಸ್‌ಅನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಉದ್ದೇಶದಿಂದ ಬಿಜೆಪಿಯೊಂದಿಗೆ ಕೈ ಜೋಡಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಶಕ್ತಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಶಕ್ತಿ ಏನು ಎಂಬುದು ಕಾಂಗ್ರೆಸ್‌ಗೆ ಗೊತ್ತಿದೆ ಎಂದರು.
ರಾಜ್ಯಾದ್ಯಂತ ನಮ್ಮ ಪಕ್ಷಕೂ ಅಸ್ತಿತ್ವ ಇದೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. 136 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌ನ ಮತ ಗಳಿಕೆ ಶೇ.42 ರಷ್ಟು ಮಾತ್ರ. ಪಕ್ಷ ಕಟ್ಟುವ ಶಕ್ತಿ ಇನ್ನೂ ನಮ್ಮಲ್ಲಿ ಇದೆ. 136 ಸೀಟು ಬಂದಿದೆ ಎಂದು ಕಾಂಗ್ರೆಸ್ ನಾಯಕರು ಜೆಡಿಎಸ್ ಬಗ್ಗೆ ಹಗುರವಾಗಿ, ದುರಹಂಕಾರದಿಂದ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್ ಒಂದಾಗಿರುವುದು ಆರಂಭವಷ್ಟೆ, ನಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗಬೇಕು. ನಾವೆಲ್ಲರು ಒಟ್ಟಾಗಿ ಸಾಗಬೇಕು. ರಾಜ್ಯ ಮತ್ತು ದೇಶದ ಅಭಿವೃದ್ಧಿಗಾಗಿ ನಾವೆಲ್ಲರೂ ಒಂದಾಗಿ ಹೋಗಲೇಬೇಕು. ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಬೇಕು ಎಂದು ಕರೆ ನೀಡಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮೂರನೇ ಬಾರಿ ಹೃದಯ ಶಸ್ತ್ರಚಿಕಿತ್ಸೆ ಆಗಿದೆ. ಶಸ್ತ್ರಚಿಕಿತ್ಸೆ ನಂತರ ಕೇವಲ ಮೂರೇ ದಿನಕ್ಕೆ ಅವರು ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಸಾಧ್ಯವಿಲ್ಲ ಎಂಬ ಅಭಿಪ್ರಾಯ ಮೂಡಿದಾಗ ಕಾರ್ಯಕರ್ತರ ಸಭೆ ನಡೆಸಿ ಹೊಂದಾಣಿಕೆಯ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟರು. ಅಂತಿಮವಾಗಿ ಮೈತ್ರಿಗೆ ಜೆಡಿಎಸ್ ಕಾರ್ಯಕರ್ತರನ್ನು ಒಪ್ಪಿಸುವಲ್ಲಿ ಕುಮಾರಸ್ವಾಮಿ ಯಶಸ್ವಿಯಾದರು ಎಂದರು.
ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಸಂದರ್ಭ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಿತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕುಡಿಯಲು ನೀರು ಸಹ ಸಿಗುತ್ತಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರ್ಕಾರ ಅನುದಾನ ನೀಡುತ್ತಿಲ್ಲ. ಕ್ಷೇತ್ರಗಳಿಗೆ ಯಾವುದೇ ಹೊಸ ಕಾರ್ಯಕ್ರಮಗಳನ್ನು ನೀಡುತ್ತಿಲ್ಲ. ಕಾಂಗ್ರೆಸ್‌ನವರು ನಮಗೆ ಶಿಕ್ಷೆ ನೀಡುತ್ತಿದ್ದಾರೆ ಎಂದು ಹೇಳಿದರು.
ಈ ಬಾರಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಗೆಲ್ಲಿಸಲು ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಆಶೀರ್ವಾದ ಮಾಡಿದ್ದಾಳೆ. ಯದುವೀರ್ ಅವರನ್ನು ಗೆಲ್ಲಿಸಲು ಎಲ್ಲರು ಒಗ್ಗೂಡಿ ಶ್ರಮಿಸಬೇಕು. ಜೆಡಿಎಸ್ ಹಾಗೂ ಬಿಜೆಪಿಯಿಂದ ಯಾರೇ ಬಂದರೂ ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಏನೇ ಸಮಸ್ಯೆಗಳು ಇದ್ದರೂ ನಾವು ಇಲ್ಲಿಯೇ ಬಗೆ ಹರಿಸಿಕೊಂಡು ಒಗ್ಗಟ್ಟಾಗಿ ಮುಂದಕ್ಕೆ ಹೋಗಬೇಕು ಎಂದರು.