

ವಿಜಯವಾಣಿ ವಿಶೇಷ ಮೈಸೂರು
ನಾಡಹಬ್ಬ ದಸರಾ ಉತ್ಸವ ಪ್ರಾರಂಭಕ್ಕೂ ಮುನ್ನವೇ ಸಾಂಸ್ಕೃತಿಕ ನಗರಿ ಮೈಸೂರು ಹಲವು ಭಾಗಗಳು ವಿದ್ಯುತ್ ದೀಪಾಲಂಕಾರ ದಿಂದ ಕಂಗೊಳಿಸಲು ಪ್ರಾರಂಭಿಸಿದೆ. ಬಣ್ಣ ಬಣ್ಣದ ದೀಪಗಳು ಆಬಾಲವೃದ್ಧರಾದಿಯಾಗಿ ಪ್ರತಿಯೊಬ್ಬರನ್ನೂ ಆಕರ್ಷಿಸಲು ಪ್ರಾರಂಭಿಸಿದೆ.
ದಸರಾ ಪ್ರಾರಂಭಗೊಳ್ಳುವ ಒಂದು ವಾರಕ್ಕೂ ಮುಂಚೆಯೇ ನಗರದ ಹಲವಾರು ಪ್ರಮುಖ ರಸ್ತೆಗಳು ವಿದ್ಯುತ್ ದೀಪಾಲಂಕಾರದಿ ಂದ ಜನಾಕರ್ಷಿಸಲು ಪ್ರಾರಂಭಿಸಿದ್ದು, ಎಲ್ಲೆಲ್ಲೂ ಬಣ್ಣ ಬಣ್ಣದ ಚಿತ್ತಾರಗಳು ಕಣ್ಣಿಗೆ ಕಾಣುತ್ತಿವೆ. ದಸರಾ ಉತ್ಸವದ ಪ್ರಮುಖ ಆಕರ್ಷಕ ಕೇಂದ್ರ ಬಿಂದು ಜಂಬೂಸವಾರಿ. ಜಂಬೂಸವಾರಿಯು ಒಂದೇ ದಿನ ಲಕ್ಷಾಂತರ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸಿದರೆ ದಸರಾ ದೀಪಾಲಂಕಾರ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ತನ್ನೆಡೆಗೆ ಸೆಳೆಯುತ್ತದೆ. ಈ ಬಾರಿ ಉತ್ತಮ ಮಳೆ ಬೆಳೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅದ್ದೂರಿಯ ದಸರಾ ಆಚರಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ದೀಪಾಲಂಕಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಲಾಗಿದೆ.
ಹೆಚ್ಚುತ್ತಿದೆ ಟ್ರಾಫಿಕ್: ದಸರಾ ಉತ್ಸವ ಪ್ರಾರಂಭಗೊಳ್ಳುವ ಮುನ್ನವೇ ನಗರದಲ್ಲಿ ದಸರಾ ಸಂಭ್ರಮ ಮನೆ ಮಾಡಿಕೊಳ್ಳಲು ಪ್ರಾರಂಭಿಸಿದ್ದು, ಸಂಜೆ ವೇಳೆಯಲ್ಲಿ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಕಂಡು ಬರುತ್ತಿದೆ. ನಗರದ ವಿವಿಧ ರಸ್ತೆಗಳಲ್ಲಿ ಅಳವಡಿಸಿರುವ ವಿದ್ಯುತ್ ದೀಪಾಲಂಕಾರದ ದೀಪಗಳನ್ನು ಪರೀಕ್ಷಾರ್ಥ ಬೆಳಗಿಸಲಾಗುತ್ತಿದೆ. ಇಂತಹ ರಸ್ತೆಗಳಲ್ಲಿ ಸಂಜೆ ವೇಳೆ ಟ್ರಾಫಿಕ್ ಹೆಚ್ಚಾಗಿ ಕಂಡು ಬರುತ್ತಿದ್ದು, ಜನರು ವಿದ್ಯುತ್ ದೀಪಾಲಂಕಾರದ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
130 ಕಿ.ಮೀ. ದೀಪಾಲಂಕಾರ: ನಗರದಲ್ಲಿ ಈ ಬಾರಿ ಒಟ್ಟು 130 ಕಿ.ಮೀ. ದೀಪಾಲಂಕಾರ ಮಾಡಲಾಗಿದ್ದು, ದೀಪಾಲಂಕಾರದ ಕಾರ್ಯ ಬಹುತೇಕ ಮುಕ್ತಾಯ ಹಂತ ತಲುಪಿದ್ದು, ನಗರದ ಪ್ರಮುಖ ರಸ್ತೆಗಳು ಈಗಾಗಲೇ ದೀಪಗಳಿಂದ ಅಲಂಕೃತಗೊಂಡಿವೆ. ಈ ಬಾರಿ ಒಟ್ಟು 100 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗಿದೆ. ನಗರದ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ 65 ವಿವಿಧ ಪ್ರತಿಕೃತಿಗಳನ್ನು ವಿದ್ಯುತ್ ದೀಪಗಳಿಂದ ನಿರ್ಮಾಣ ಮಾಡಲಾಗಿದೆ. ಪ್ರಜಾಪ್ರಭುತ್ವ ಸಾಗಿಬಂದ ಹಾದಿ, ಭುವನೇಶ್ವರಿ ದೇವಿ, ಮೈಸೂರು ಆಳಿದ ರಾಜರ ಪ್ರತಿಕೃತಿಗಳು, ಇಂಡಿಯಾ ಗೇಟ್, ಹಂಪಿಯ ಕಲ್ಲಿನ ಚಕ್ರ, ಸಂಸತ್ ಭವನ ಸೇರಿದಂತೆ ವಿವಿಧ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. ಕೆಲವು ಕಡೆ ನಮ್ಮನ್ನು ಅಗಲಿದ ಚಿತ್ರರಂಗದ ಧ್ರುವತಾರೆಗಳಾದ ಶಂಕರ್‌ನಾಗ್, ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರ ಇಟ್ಟು ಭಾವಚಿತ್ರದ ಸುತ್ತ ವಿದ್ಯುತ್ ದೀಪಗಳನ್ನು ಅಲಂಕರಿಸಿ ವಿಶೇಷ ಗೌರವ ಸಲ್ಲಿಸಲಾಗಿದೆ.
ಅ.3 ರಂದು ಚಾಲನೆ: ಈ ಬಾರಿಯ ದೀಪಾಲಂಕಾರಕ್ಕೆ ಅ.3 ರಂದು ಚಾಲನೆ ದೊರೆಯಲಿದೆ. ಒಟ್ಟು 21 ದಿನಗಳ ದೀಪಾಲಂಕಾರ ಇರಲಿದ್ದು, ಇದಕೋಸ್ಕರ 6.50 ಕೋಟಿ ರೂ. ಅಂದಾಜು ವೆಚ್ಚವಾಗುವ ನಿರೀಕ್ಷೆ ಇದೆ. ಈ ಬಾರಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವತಿಯಿಂದ ವಿದ್ಯುತ್ ರಥ ಸಿದ್ಧಪಡಿಸಲಾಗಿದ್ದು, ಈ ರಥಕ್ಕೆ ಅ.3ರಂದು ಚಾಲನೆ ದೊರೆಯಲಿದೆ. ರಥವು 10 ದಿನಗಳ ಕಾಲ ನಗರದ ಎಲ್ಲ ಕಡೆ ಸಂಚರಿಸಿ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಯ ಜತೆಗೆ ಪವರ್‌ಮ್ಯಾನ್ ಕರ್ತವ್ಯ, ಗೃಹಜ್ಯೋತಿ, ಕೃಷಿ ಬಳಕೆಯಲ್ಲಿ ಸೌರ ವಿದ್ಯುತ್ ಕುರಿತು ಜನರಿಗೆ ಮಾಹಿತಿ ನೀಡಲಿದೆ.
ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಡಬಲ್ ಡೆಕ್ಕರ್ ಬಸ್‌ಗಳು ಸಿದ್ಧವಾಗಿದೆ. ಹೋಟೆಲ್ ಮಯೂರ ಹೊಯ್ಸಳದಿಂದ ಬಸ್‌ಗಳು ಹೊರಡಲಿದ್ದು, ಹಳೇ ಜಿಲ್ಲಾಧಿಕಾರಿ ಕಚೇರಿ, ಕ್ರಾಫರ್ಡ್ ಭವನ, ಓರಿಯಂಟಲ್ ಸೆಂಟ್ರಲ್ ಲೈಬ್ರರಿ, ರಾಮಸ್ವಾಮಿ ವೃತ್ತ, ಸಂಸ್ಕೃತ ಪಾಠಶಾಲಾ, ಅರಮನೆ ದಕ್ಷಿಣ ದ್ವಾರ, ಅರಮನೆಯ ಜಯಮಾರ್ತಾಂಡ ಮುಖ್ಯ ದ್ವಾರ, ಹಾರ್ಡಿಂಜ್ ವೃತ್ತ, ಕೆ.ಆರ್. ವೃತ್ತ, ಸೈಯಾಜಿ ರಾವ್ ರಸ್ತೆ , ಆಯುರ್ವೇದ ವೈದ್ಯಕೀಯ ಕಾಲೇಜು, ರೈಲ್ವೆ ನಿಲ್ದಾಣದ ಮೂಲಕ ಸಾಗಿ ಮಯೂರ ಹೊಯ್ಸಳ ಹೋಟೆಲ್ ಆವರಣಕ್ಕೆ ಆಗಮಿಸಲಿದೆ.
ಗಮನ ಸೆಳೆಯಲಿದೆ ಡ್ರೋಣ್ ಶೋ: ಇದೇ ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ದಸರಾ ದೀಪಾಲಂಕಾರ ಉಪ ಸಮಿತಿಯಿಂದ 3 ಕೋಟಿ ರೂ. ವೆಚ್ಚದಲ್ಲಿ ಡ್ರೋನ್ ಶೋ ಆಯೋಜಿಸಲಾಗಿದೆ. ಈ ಡ್ರೋಣ್ ಶೋ ಅ.6 ಮತ್ತು 7 ರಂದು ಹಾಗೂ ಅ.11 ಮತ್ತು 12ರಂದು ರಾತ್ರಿ 8 ರಿಂದ 8.15ರವರೆಗೆ ಇರಲಿದೆ. ಅ.6 ಮತ್ತು 7 ರಂದು ನಡೆಯುವ ಶೋಗೆ ಉಚಿತ ಪ್ರವೇಶ ಇರಲಿದ್ದು, 1500 ಡ್ರೋನ್‌ಗಳು ಏಕಕಾಲದಲ್ಲಿ 200 ರಿಂದ 300 ಅಡಿ ಎತ್ತರಕ್ಕೆ ಹೋಗಿ ವಿವಿಧ ಪ್ರತಿಕೃತಿಗಳನ್ನು ರಚಿಸಲಿವೆ. ವಾರಣಾಸಿ, ಹರಿದ್ವಾರಗಳಲ್ಲಿ ಡ್ರೋನ್ ಪ್ರದರ್ಶನ ನೀಡಿರುವ ಕಂಪನಿ ಇಲ್ಲೂ ಡ್ರೋಣ್ ಪ್ರದರ್ಶನ ನೀಡಲಿದೆ. ಒಟ್ಟು 10 ರಿಂದ 15 ವಿನ್ಯಾಸಗಳನ್ನು ಡ್ರೋನ್ ಮೂಲಕ ಪ್ರದರ್ಶನ ಮಾಡಲಾಗುವುದು. ಕಳೆದ ಬಾರಿ ಬನ್ನಿಮಂಟಪದಲ್ಲಿ ಹಮ್ಮಿಕೊಂಡಿದ್ದ ದಸರಾ ಪಂಜಿನ ಕವಾಯತು ಪ್ರದರ್ಶನ ವೇಳೆಯಲ್ಲಿ ಹಮ್ಮಿಕೊಂಡಿದ್ದ ಡ್ರೋಣ್ ಪ್ರದರ್ಶನ ಸಾಕಷ್ಟು ಜನರಲ್ಲಿ ಸಂಭ್ರಮ ಮನೆ ಮಾಡುವಂತೆ ಮಾಡಿತ್ತು. ಈ ಬಾರಿ ಸೆಸ್ಕ್ ೆ ದಸರಾ ದೀಪಾಲಂಕಾರ ಉಪ ಸಮಿತಿ ಹಮ್ಮಿಕೊಂಡಿರುವ ಡ್ರೋಣ್ ಶೋ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುವ ಸಾಧ್ಯತೆ ಇದೆ.