

ಬೆಳಗಾವಿ: ಭಾಷೆ ಉಳಿಯಬೇಕಾದರೆ ಭಾಷೆ ಹೆಚ್ಚು ಹೆಚ್ಚು ಬಳಸಬೇಕು. ಕನ್ನಡದ ಕುರಿತಾದ ಚಟುವಟಿಕೆಗಳು ನಿರಂತರ ನಡೆಯಬೇಕು. ಆಗ ಕನ್ನಡವು ಹುಲುಸಾಗಿರಲು ಸಾಧ್ಯ ಎಂದು ನಾಡಿನ ಖ್ಯಾತ ವಾಗ್ಮಿ ಹಿರೇಮಗಳೂರು ಕಣ್ಣನ್ ಅಭಿಪ್ರಾಯಪಟ್ಟರು.
ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ರಾಜ್ಯೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶ, ಸಮಾಜ, ಭಾಷೆ, ಸಂಸ್ಕೃತಿ ಎಂದೂ ಮರೆಯಬೇಡಿ. ಅವು ನಮ್ಮ ಬದುಕಿನ ಅವಿಭಾಜ್ಯ ಅಂಗಗಳು. ಅವುಗಳೊಂದಿಗೆ ನಮ್ಮ ಅಸ್ತಿತ್ವ. ಭಾಷೆಯೊಂದಿಗೆ ನಮ್ಮ ಗುರುತು, ಭಾಷೆಯೊಂದಿಗೆ ನಮ್ಮ ಪೂರ್ವಜರ ಶ್ರೀಮಂತಿಕೆ ಇದೆ ಎಂದರು. ಬೇಲೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಧ್ಯಾಪಕಿ ನಾಗಶ್ರೀ ತ್ಯಾಗರಾಜ ಮಾತನಾಡಿ, ನಾವು ಸರಿಯಾದ ಮಾರ್ಗದರ್ಶನ ಮತ್ತು ಸನ್ಮಾರ್ಗದಲ್ಲಿ ಸಾಗಿ, ಸತ್ಯ, ಪರಿಶ್ರಮ, ಶ್ರದ್ಧೆ, ಹೋರಾಟ, ಸಮರ್ಪಣೆಯೊಂದಿಗೆ ಬದುಕು ಸಾಗಿಸಿದಾಗ ನಮ್ಮ ಜೀವನ ದಂತ ಕಥೆಯಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಣಿ ಚನ್ನಮ್ಮ ವಿವಿ ಕುಲಪತಿ ಪ್ರೊ.ಸಿ.ಎಂ. ತ್ಯಾಗರಾಜ, ಗಡಿಭಾಗದಲ್ಲಿ ಕನ್ನಡದ ಕಂಪು ಸದಾ ಅನುರಣಿಸಲು ನವೆಂಬರ್ ತಿಂಗಳ ಪೂರ್ತಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆಗಳನ್ನು ಪರಿಚಯಿಸುವ, ಮೆಲುಕು ಹಾಕುವ ವಿನೂತನ ಕಾರ್ಯಕ್ರಮ ವಿಶ್ವವಿದ್ಯಾಲಯ ಮಾಡಿದೆ ಎಂದು ಹೇಳಿದರು.
ನಮ ಜ್ಞಾನದ ಉಪಾಸಣೆೆಗೆ ಬದುಕನ್ನೇ ಬದಲಾಯಿಸುವ ಶಕ್ತಿಯಿದೆ. ವಿದ್ಯಾರ್ಥಿಗಳು ಅಂಕಗಳ ಹಿಂದೆ ಹೋಗದೆ ಜ್ಞಾನದ ಹಿಂದೆ ಹೋಗಬೇಕು. ಸಾಮಾನ್ಯ ಕುಟುಂಬದ ಮಕ್ಕಳು ಅಸಾಮಾನ್ಯವಾಗಿ ಬೆಳೆಯಲು ಖಂಡಿತ ಸಾಧ್ಯವಿದೆ. ಅಂಥ ಅಸಂಖ್ಯಾತ ಉದಾಹರಣೆಗಳಿವೆ ಎಂದರು.
ಪ್ರಾಚಾರ್ಯ ಪ್ರೊ. ಎಂ.ಜಿ. ಹೆಗಡೆ ಸ್ವಾಗತಿಸಿದರು. ವಿಜಯಲಕ್ಷ್ಮೀ ಹಡಪದ ಪರಿಚಯಿಸಿದರು, ಐಶ್ವರ್ಯ ಮುಗಳಿ ಪ್ರಾರ್ಥಿಸಿದರು. ವಿದ್ಯಾರ್ಥಿನಿಯರಾದ ಶಾಂಭವಿ ಥೋರ್ಲಿ ನಿರೂಪಿಸಿದರು. ವಿಶ್ವವಿದ್ಯಾಲಯದ ಕನ್ನಡ ರಾಜ್ಯೋತ್ಸವದ ಸರಣಿ ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ಪ್ರೊ. ಎಂ.ಸಿ. ಎರಿಸ್ವಾಮಿ ವಂದಿಸಿದರು.